ಸಂವಿಧಾನದ ಪೀಠಿಕೆಯನ್ನು ಬಾಯಿಪಾಠ ಮಾಡಿಕೊಳ್ಳಬೇಕು ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ದೈನಂದಿನ ದಿನಚರಿಯಲ್ಲಿ ಆಹಾರ ಎಷ್ಟು ಅಗತ್ಯವೋ ಹಾಗೆಯೇ ನಮ್ಮ ಸಂವಿಧಾನವು ನಮಗೆ ಅಷ್ಟೇ ಅಗತ್ಯವಾಗಿದೆ ಎಂದು ತಿಳಿಸಿದರು. ಸಂವಿಧಾನವನ್ನು ನಾವೆಲ್ಲರೂ ಓದುವುದಷ್ಟೇ ಅಲ್ಲದೆ, ನಮ್ಮ ಪೋಷಕರಿಗೆ ಹಾಗೂ ಮುಂದಿನ ಪೀಳಿಗೆಗೆ ಸಂವಿಧಾನದ ಕುರಿತು ತಿಳಿ ಹೇಳುವುದರ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡುವುದು ಇಂದಿನ ಮಕ್ಕಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರಲ್ಲದೆ, ಸಂವಿಧಾನದ ತತ್ವಗಳನ್ನು ನಾವುಗಳು ಅಳವಡಿಸಿಕೊಳ್ಳುವುದರ ಮೂಲಕ ಸಂವಿಧಾನವನ್ನು ರಕ್ಷಣೆ ಮಾಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಸಂವಿಧಾನ ಪುಸ್ತಕ ಅತ್ಯದ್ಭುತವಾದ ಗ್ರಂಥವಾಗಿದೆ. ಇದಕ್ಕೆ ಸಮಾನವಾದ ಗ್ರಂಥ ಮತ್ತೊಂದಿಲ್ಲ ಹಾಗಾಗಿ ಶಾಲೆಗಳಲ್ಲಿ ಮಕ್ಕಳಿಗೆ ಪ್ರತಿದಿನ ಸಂವಿಧಾನದ ಕುರಿತು ಒಂದು ಪುಟವನ್ನಾದರೂ ಓದಿಸಿ ಅದರ ಮಹತ್ವದ ಕುರಿತು ವಿವರಿಸಬೇಕು ಎಂದು ಸಂಸದರಾದ ಶ್ರೇಯಸ್ ಎಂ ಪಟೇಲ್ ಅವರು ತಿಳಿಸಿದ್ದಾರೆ.ಜಿಲ್ಲಾಡಳಿತದ ವತಿಯಿಂದ ಡಾ.ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವೆಲ್ಲರೂ ತಂದೆ-ತಾಯಿ, ಗುರು-ಹಿರಿಯರಿಗೆ ಕೊಡುವ ಗೌರವವನ್ನು ಸಂವಿಧಾನದ ಪೀಠಿಕೆ ಹಾಗೂ ಸಂವಿಧಾನ ಪುಸ್ತಕಕ್ಕೂ ಕೊಡಬೇಕು. ಸಂವಿಧಾನದ ಪೀಠಿಕೆಯನ್ನು ಬಾಯಿಪಾಠ ಮಾಡಿಕೊಳ್ಳಬೇಕು ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ದೈನಂದಿನ ದಿನಚರಿಯಲ್ಲಿ ಆಹಾರ ಎಷ್ಟು ಅಗತ್ಯವೋ ಹಾಗೆಯೇ ನಮ್ಮ ಸಂವಿಧಾನವು ನಮಗೆ ಅಷ್ಟೇ ಅಗತ್ಯವಾಗಿದೆ ಎಂದು ತಿಳಿಸಿದರು. ಸಂವಿಧಾನವನ್ನು ನಾವೆಲ್ಲರೂ ಓದುವುದಷ್ಟೇ ಅಲ್ಲದೆ, ನಮ್ಮ ಪೋಷಕರಿಗೆ ಹಾಗೂ ಮುಂದಿನ ಪೀಳಿಗೆಗೆ ಸಂವಿಧಾನದ ಕುರಿತು ತಿಳಿ ಹೇಳುವುದರ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡುವುದು ಇಂದಿನ ಮಕ್ಕಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರಲ್ಲದೆ, ಸಂವಿಧಾನದ ತತ್ವಗಳನ್ನು ನಾವುಗಳು ಅಳವಡಿಸಿಕೊಳ್ಳುವುದರ ಮೂಲಕ ಸಂವಿಧಾನವನ್ನು ರಕ್ಷಣೆ ಮಾಡಬೇಕು ಎಂದರು.ಜಿಲ್ಲಾಧಿಕಾರಿ ಲತಾ ಕುಮಾರಿ ಮಾತನಾಡಿ ನಮ್ಮ ದೇಶವು ಮೊದಲು ಪರಕೀಯರ ಆಳ್ವಿಕೆಯಲ್ಲಿತ್ತು. ತದನಂತರ ೧೯೪೭ರಲ್ಲಿ ಅವರಿಂದ ಮುಕ್ತಿಯನ್ನು ಹೊಂದಲಾಯಿತು. ಆದರೆ ನಮ್ಮ ಸಂವಿಧಾನವನ್ನು ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲೇ ೧೯೪೬ರಲ್ಲಿಯೇ ಸಂವಿಧಾನ ರಚಿಸಲು ಪ್ರಾರಂಭಿಸಲಾಯಿತು. ತದನಂತರ ೧೯೪೯ ನವೆಂಬರ್ ೨೬ರಂದು ಸಂವಿಧಾನವನ್ನು ಅಂಗೀಕರಿಸಿಕೊಂಡೆವು ಎಂದು ತಿಳಿಸಿದರು.

ನಮ್ಮ ದೇಶವು ೫೬೦ ಕ್ಕಿಂತ ಹೆಚ್ಚಿನ ಭಾಗಗಳಾಗಿ ವಿಂಗಡಣೆಯಾಗಿತ್ತು, ಇವುಗಳನ್ನು ಒಗ್ಗೂಡಿಸಿ ಭೌತಿಕವಾಗಿ ಒಂದು ದೇಶವನ್ನು ರಚಿಸಿ ಭಾರತ ಎಂದು ಗುರುತು ಕೊಡಲಾಯಿತು. ನಮ್ಮ ದೇಶದ ಜೀವಾಳ ಸಂವಿಧಾನವಾಗಿದೆ. ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಯಾವಾಗಲೂ ಜೊತೆ ಜೊತೆಯಾಗಿಯೇ ಇರುತ್ತವೆ. ಇವುಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ ನಮ್ಮ ಸಂವಿಧಾನದ ಕುರಿತು ನಾವುಗಳು ತಿಳಿದುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ನಮ್ಮ ಸಂವಿಧಾನವು ಅನೇಕ ವಿಶೇಷತೆಗಳಿಂದ ಕೂಡಿದೆ ನಾವು ಯಾವ ರೀತಿ ಇರಬೇಕು, ಯಾವ ರೀತಿ ಜೀವನ ಮಾಡಬೇಕು ಎಂಬ ಎಲ್ಲಾ ಅಂಶಗಳನ್ನು ತಿಳಿಸುತ್ತದೆ. ಜೊತೆಗೆ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ತಿಳಿಸುತ್ತದೆ. ವೈವಿಧ್ಯಮಯವಾದ ದೇಶ ನಮ್ಮದು ಆ ವೈವಿಧ್ಯತೆಯೆ ನಮ್ಮ ಗುರುತಾಗಿದೆ. ಪ್ರತಿಯೊಬ್ಬರೂ ಸಂವಿಧಾನವನ್ನು ಓದಬೇಕು. ಜೊತೆಗೆ ಆ ಸಂವಿಧಾನದ ಚೌಕಟ್ಟಿನಲ್ಲಿ ಬದುಕಬೇಕು. ನಮ್ಮ ದೇಶಕ್ಕೆ, ಸಂವಿಧಾನಕ್ಕೆ ನಾವು ಮೊದಲ ಆಧ್ಯತೆ ಕೊಡಬೇಕು. ಅವುಗಳಲ್ಲಿರುವ ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ ಭಾವನೆಗಳನ್ನು ನಾವೆಲ್ಲರೂ ಅನುಸರಿಸಬೇಕು ಎಂದು ತಿಳಿಸಿದರು.ಇಂದು ನಾವು ಸ್ವತಂತ್ರರಾಗಿದ್ದೇವೆ ಎಂದರೆ ಅದು ಸ್ವಾತಂತ್ರ್ಯ ಹೋರಾಟಗಾರರ, ಸಂವಿಧಾನ ರಚನಕಾರರ, ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಿ. ಆರ್ ಅಂಬೇಡ್ಕರ್ ಹಾಗೂ ಅದರ ಸದಸ್ಯರುಗಳ ಕೊಡುಗೆಯಾಗಿದೆ ಹಾಗಾಗಿ ಅವರೆಲ್ಲರನ್ನು ನಾವು ಗೌರವಿಸಬೇಕು ಮತ್ತು ಮಕ್ಕಳೆಲ್ಲರೂ ನಿಮ್ಮ ಹಕ್ಕುಗಳ ಬಗೆಗೆ ತಿಳಿದುಕೊಳ್ಳಬೇಕು. ಪ್ರಜಾಪ್ರಭುತ್ವದ ತತ್ವಗಳನ್ನ ಎತ್ತಿ ಹಿಡಿಯಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಟೇಲ್ ಶಿವಪ್ಪ ಮಾತನಾಡಿ, ಸಂವಿಧಾನವನ್ನು ಓದುವುದು, ತಿಳಿಯುವುದು ಅಷ್ಟೇ ಅಲ್ಲ ಅದನ್ನು ಸಂರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಇದರಿಂದ ನಮ್ಮ ರಕ್ಷಣೆಯೂ ಆಗುತ್ತದೆ. ತಳ ಸಮುದಾಯದ ಜನರಿಗೂ ಗಾಳಿ, ನೀರು, ಬೆಳಕು ದೊರಕುತ್ತಿದೆ ಎಂದರೆ ಅದು ಡಾ. ಬಿ. ಆರ್‌. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಿಂದ ಆಗಿದೆ ಎಂದು ತಿಳಿಸಿದರು. ಇಂತಹ ಮಹತ್ವದ ದಿನಾಚರಣೆಗಳಿಗೆ ಎಲ್ಲಾ ಸಮುದಾಯದ ಜನರು ಭಾಗವಹಿಸಬೇಕು. ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗಿದೆ. ಪ್ರತಿಯೊಬ್ಬರಿಗೂ ನ್ಯಾಯವನ್ನು ಒದಗಿಸಿದ್ದು ಸಂವಿಧಾನವಾಗಿದೆ. ನಾವುಗಳು ಎಲ್ಲೇ ಇದ್ದರೂ, ಎಲ್ಲೇ ವಿದ್ಯಾಭ್ಯಾಸ, ಕೆಲಸ ಮಾಡಿದರೂ ನಮ್ಮ ಸಂವಿಧಾನವನ್ನು ಮರೆಯಬಾರದು. ಎಲ್ಲಾ ರೀತಿಯ ರಂಗದವರಿಗೂ ಮೀಸಲಾತಿ ಸಿಕ್ಕಿದೆ ಎಂದರೆ, ಅದು ಸಂವಿಧಾನದಿಂದ ಇಂದು ಮೀಸಲಾತಿಯಿಂದ ನಾವುಗಳು ಉತ್ತಮ ಸ್ಥಾನದಲ್ಲಿದ್ದೇವೆ ಹಾಗಾಗಿ ಸಂವಿಧಾನದ ಬಗ್ಗೆ ಶಾಲೆಗಳಲ್ಲಿ ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಸಂವಿಧಾನದ ಕುರಿತು ಅರಿವು ಮೂಡಿಸಬೇಕು ಎಂದರು.

ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಗಿರೀಶ್ ಅವರು ದೇಶದ ಎಲ್ಲಾ ಕಾನೂನುಗಳನ್ನು ರೂಪಿಸುವ ಆಕರ ಗ್ರಂಥ ಸಂವಿಧಾನವಾಗಿದೆ. ನಮ್ಮ ಭಾರತ ದೇಶದ ಆತ್ಮ ಈ ಸಂವಿಧಾನವಾಗಿದೆ. ಇದನ್ನು ೬೮ ದೇಶಗಳ ಸಂವಿಧಾನವನ್ನು ೨೨ ಸಮಿತಿಗಳು ಪರಿಪೂರ್ಣವಾಗಿ ಅಧ್ಯಯನ ಮಾಡಿ ಪ್ರತಿ ಪದವನ್ನು ಅರ್ಥೈಸಿ ಜೋಡಿಸಿ ಅಡಿ ಟಿಪ್ಪಣಿ ಹಾಕಿ ಅಂಬೇಡ್ಕರ್ ಅವರು ರಚಿಸಿದ್ದಾರೆ ಎಂದು ತಿಳಿಸಿದರು.ಪ್ರೇಮ್ ಬಿಹಾರಿ ನಾರಾಯಣ್ ಅವರಿಂದ ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಸತತ ಆರು ತಿಂಗಳ ಕಾಲ ಸಂವಿಧಾನದ ಪ್ರತಿಗಳನ್ನು ಅಂಬೇಡ್ಕರ್‌ ಅವರು ಬರೆಸಿದ್ದಾರೆ. ಮೂಲ ಸಂವಿಧಾನದ ಪ್ರತಿಯನ್ನು ಪ್ರಸ್ತುತ ಸಂಸತ್ ಗ್ರಂಥಾಲಯದಲ್ಲಿ ಇಡಲಾಗಿದೆ. ಇದರಲ್ಲಿ ಮೂಲ ೩೯೫ ವಿಧಿಗಳನ್ನು ನೋಡಬಹುದು. ಈ ಪುಸ್ತಕ ೩೦೦ ಪುಟ ಹೊಂದಿದೆ ಹಾಗಾಗಿ ನಮ್ಮ ಸಂವಿಧಾನವನ್ನು ಆನೆಗಾತ್ರದ ಸಂವಿಧಾನ ಎಂದು ಕೂಡ ಕರೆಯಲಾಗುತ್ತದೆ ಎಂದರು.ಅಭಿಪ್ರಾಯಗಳು ಬದಲಾದಂತೆ ಅಗತ್ಯಕ್ಕೆ ಅನುಗುಣವಾಗಿ ನಮ್ಮ ಸಂವಿಧಾನ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. ಹಕ್ಕು ಅಷ್ಟೇ ಅಲ್ಲ ಕರ್ತವ್ಯಗಳು, ರಾಜ್ಯನೀತಿ ನಿರ್ದೇಶಕ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ೧,೪೫,೦೦೦ ಪದಗಳು ನಮ್ಮ ಸಂವಿಧಾನದಲ್ಲಿವೆ. ಸಂವಿಧಾನವನ್ನು ಕೇವಲ ಭಾಷಣದ ಮೂಲಕ ಅಷ್ಟೇ ಅಲ್ಲದೆ ಸಂಗೀತದ ಮೂಲಕವೂ ಕೂಡ ನಾವು ಕೊಂಡೊಯ್ಯಬಹುದು. ಈ ನಿಟ್ಟಿನಲ್ಲಿ ಸಂವಿಧಾನದಲ್ಲಿರುವ ಹಕ್ಕುಗಳ ಕುರಿತು ಎಲ್ಲರೂ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು. ಭಾರತದ ಸಾಂಸ್ಕೃತಿಕ ಪರಂಪರೆಗೆ, ಈ ಮಣ್ಣಿಗೆ ಏನೇನು ಕೊಡಬೇಕು ಎಲ್ಲವನ್ನು ತಿಳಿದು ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದಾರೆ. ಅಂಬೇಡ್ಕರ್ ಅವರು ವಿಶ್ವದ ತಜ್ಞ, ಮೇಧಾವಿ, ಪಂಡಿತ ಎಂದು ಆಫ್ರಿಕಾ ದೇಶದಲ್ಲಿ ಹೊಗಳಲಾಗಿದೆ. ಇವರು ಸರ್ವ ಸ್ಪರ್ಶಿಯಾಗಿದ್ದಾರೆ ಎಂದು ತಿಳಿಸಿದರು.ಅಂಬೇಡ್ಕರ್ ಅವರ ಸಮಿತಿಯಲ್ಲಿ ಇದ್ದಂತಹ ಎಲ್ಲರನ್ನೂ ಕೂಡ ನಾವು ಸ್ಮರಿಸಿಕೊಳ್ಳಬೇಕು ಎಂದು ಸಂವಿಧಾನದ ಮಹತ್ವದ ಕುರಿತು ಅದರ ಇತಿಹಾಸದ ಕುರಿತು ಸವಿವರವಾಗಿ ಉಪನ್ಯಾಸ ನೀಡಿದರು.

ಪ್ರಾರಂಭದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಆರ್ ಪೂರ್ಣಿಮಾ ಅವರು ಸಂವಿಧಾನದ ಪೀಠಿಕೆಯನ್ನು ಎಲ್ಲರಿಗೂ ಬೋಧಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಉಪ ವಿಭಾಗಾಧಿಕಾರಿ ಜಗದೀಶ್ ಗಂಗಣ್ಣ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ದೂದ್ ಪೀರ್, ಮತ್ತಿತರರು ಉಪಸ್ಥಿತರಿದ್ದರು.***********