ಕುಮಾರಸ್ವಾಮಿಯಂತಹ ಸುಳ್ಳು ಹೇಳುವ ವ್ಯಕ್ತಿ ಮತ್ತೊಬ್ಬರಿಲ್ಲ: ಸಿದ್ದರಾಮಯ್ಯ

| Published : Aug 27 2024, 01:30 AM IST

ಸಾರಾಂಶ

ಬೆಳಗಾವಿಕುಮಾರಸ್ವಾಮಿಯಂತಹ ಸುಳ್ಳು ಹೇಳುವ ವ್ಯಕ್ತಿ ಇಡೀ ದೇಶದಲ್ಲಿ ಮತ್ತೊಬ್ಬರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕುಮಾರಸ್ವಾಮಿಯಂತಹ ಸುಳ್ಳು ಹೇಳುವ ವ್ಯಕ್ತಿ ಇಡೀ ದೇಶದಲ್ಲಿ ಮತ್ತೊಬ್ಬರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಜಮೀನು ಕುಮಾರಸ್ವಾಮಿಯವರಿಗೆ ಸೇರಿದ್ದಲ್ಲ. ಆದರೆ ಈ ಬಗ್ಗೆ ಅವರೇಕೆ ಸುಳ್ಳು ಹೇಳಬೇಕು? ಈ ಬಗ್ಗೆ ಸರ್ಕಾರ ಒಂದು ವಿಶೇಷ ತನಿಖಾ ಆಯೋಗವನ್ನು ರಚಿಸಿದ್ದು, ಕುಮಾರಸ್ವಾಮಿಯವರ ಬಳಿ ಈ ಬಗ್ಗೆ ದಾಖಲೆಗಳೇನಾದರೂ ಇದ್ದರೆ ಅವರು ಸಲ್ಲಿಸಲಿ. ಕುಮಾರಸ್ವಾಮಿಯವರ ಯಾವುದೇ ಆರೋಪ ತಾರ್ಕಿಕ ಅಂತ್ಯ ಕಂಡಿಲ್ಲ ಎಂದು ವ್ಯಂಗ್ಯವಾಡಿದರು.

ನೂರು ಸಿದ್ದರಾಮಯ್ಯನವರು ಬಂದರೂ, ನನ್ನನ್ನು ಜೈಲಿಗೆ ಕಳಿಸಲು ಸಾಧ್ಯವಿಲ್ಲ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯವರನ್ನು ನಾನು ಜೈಲಿಗೆ ಕಳಿಸುತ್ತೇನೆ ಎಂದು ನಾನು ಹೇಳಿಲ್ಲ ಹಾಗೂ ಅಂತಹ ಯಾವುದೇ ಉದ್ದೇಶ ನಮಗಿಲ್ಲ. ಆದರೆ ಕಾನೂನು ಉಲ್ಲಂಘಿಸಿದರೆ, ನ್ಯಾಯಾಲಯವೇ ಜೈಲಿಗೆ ಕಳಿಸುತ್ತದೆ. ಅಂತಹ ಸಂದರ್ಭ ಬಂದಾಗ, ಕುಮಾರಸ್ವಾಮಿಯವರನ್ನು ಬಂಧಿಸಲು ನೂರು ಸಿದ್ದರಾಮಯ್ಯ ಅಲ್ಲ , ಒಬ್ಬ ಪೊಲೀಸ್ ಪೇದೆ ಸಾಕು. ಕುಮಾರಸ್ವಾಮಿಯವರು ಎಂದಿಗೂ ಹಿಟ್ ಆ್ಯಂಡ್‌ ರನ್ ಕೇಸ್ ಆಗಿದ್ದು, ಅವರು ಈವರೆಗೆ ಮಾಡಿರುವ ಯಾವುದೇ ಆರೋಪ ತಾರ್ಕಿಕ ಅಂತ್ಯವನ್ನು ಕಂಡಿಲ್ಲ ಎಂದು ತಿಳಿಸಿದರು.

ಪ್ರಾಮಾಣಿಕ ಜನರು ನನಗೆ ಶ್ರೇಯಸ್ಸು ಕೋರಿದರೆ, ನನಗಿರುವ ರಾಜಕೀಯ ವೈರಿಗಳು ನನ್ನ ರಾಜಕೀಯ ಜೀವನಕ್ಕೆ ಮಸಿಬಳಿಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸುಳ್ಳು ದಾಖಲೆ ಸೃಷ್ಟಿಸಿ ನಿವೇಶನ ಪಡೆದಿರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿರುವ ಬಗ್ಗೆ ಉತ್ತರಿಸಿದ ಅವರು, ದೇವರಾಜು ಅವರಿಂದ ನನ್ನ ಬಾವಮೈದುನ 2004ರಲ್ಲಿ ಜಮೀನನ್ನು ಪಡೆದಿದ್ದು, 2005ರಲ್ಲಿ ಅದನ್ನು ಪರಿವರ್ತಿಸಿ, 2010ರಲ್ಲಿ ಅವರಿಂದ ನನ್ನ ಪತ್ನಿಗೆ ಆ ಜಮೀನನ್ನು ದಾನವಾಗಿ ಬಂದಿದೆ. ಆದರೆ ಮುಡಾದವರು ನನ್ನ ಪತ್ನಿಯ ಗಮನಕ್ಕೆ ತಾರದೇ ಆ ಜಮೀನನ್ನು ನಿವೇಶನವಾಗಿ ಪರಿವರ್ತಿಸಿ ಹಂಚಿಕೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಬಿಜೆಪಿಯವರೇ ಮುಡಾದ ಅಧ್ಯಕ್ಷರಾಗಿದ್ದರು. ಈ ಹಂಚಿಕೆ ಕಾನೂನು ರೀತ್ಯ ಇದೆಯೇ, ಇಲ್ಲವೇ ಎಂದು ಪರಿಶೀಲಿಸುವ ಜವಾಬ್ದಾರಿಯೂ ಅವರದೇ ಆಗಿದೆ. ಇದರಲ್ಲಿ ಎಲ್ಲವೂ ಕಾನೂನಾತ್ಮಕವಾಗಿ ಸರಿಯಿದೆ ಎಂಬುದು ನಮ್ಮ ಭಾವನೆ. ನಮ್ಮ ಭಾಗದ 3 ಎಕರೆ 16 ಗುಂಟೆ ಜಮೀನು ಹೋಗಿದ್ದು, ನಮ್ಮ ಗಮನಕ್ಕೆ ತಾರದೇ ನಿವೇಶನ ಮಾಡಿ ಹಂಚಿದರೆ ನಾವೇನು ಮಾಡಬೇಕು ಎಂದು ಮರುಪ್ರಶ್ನಿಸಿದರು. ರಾಜ್ಯಪಾಲರಿಂದ ವಾಪಸ್‌ ಬಂದಿರುವ ಬಿಲ್‌ಗಳ ಬಗ್ಗೆ ಮತ್ತೊಮ್ಮೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.