ಸಾರಾಂಶ
ಡಾ.ಸಿ.ಎಂ.ಜೋಶಿ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ತಜ್ಞ ವೈದ್ಯರಿಲ್ಲದ ಕಾರಣ ಜನರು ತಮ್ಮ ಚಿಕ್ಕಮಕ್ಕಳ ಚಿಕಿತ್ಸೆಗೆ ಪರದಾಡುವಂತಾಗಿದೆ. ಪಟ್ಟಣದ ಬಡಜನತೆಗೆ ಖಾಸಗಿ ಇಲ್ಲವೇ ಬೇರೆ ಊರುಗಳ ಆಸ್ಪತ್ರೆಗಳೇ ಗತಿ ಎಂಬಂತಾಗಿದೆ.
ತಾಲೂಕು ಕೇಂದ್ರವಾಗಿದ್ದರೂ ಈ ಆಸ್ಪತ್ರೆಯಲ್ಲಿ ಮಾತ್ರ ವಿವಿಧ ವಿಭಾಗಗಳ ತಜ್ಞ ವೈದ್ಯರ ಕೊರತೆ ಇದೆ. ಇಲ್ಲಿನ ಸ್ತ್ರೀ ರೋಗ ತಜ್ಞ ವೈದ್ಯರು ಜಿಲ್ಲೆಯಲ್ಲಿಯೇ ಹೆಸರು ಮಾಡಿದ್ದು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಗರ್ಭಿಣಿಯರು ಹೆರಿಗೆಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಆದರೆ ಇಲ್ಲಿ ಚಿಕ್ಕಮಕ್ಕಳ ತಜ್ಞ ವೈದ್ಯರ ಹುದ್ದೆ ಮಾತ್ರ ಮಾಯವಾಗಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ನಂತರ ಚಿಕ್ಕಮಕ್ಕಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುವ ಸ್ಥಿತಿ ಎದುರಾಗಿದೆ.ಚಿಕ್ಕಮಕ್ಕಳ ತಜ್ಞ ವೈದ್ಯರ ಹುದ್ದೆ ಈ ಮೊದಲು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿತ್ತು. ಆದರೆ ಸದ್ಯ ಆ ಹುದ್ದೆ ರದ್ದಾಗಿದೆ ಎಂದು ಹೇಳಲಾಗುತ್ತಿದೆ. ಯಾಕೆ ರದ್ದಾಗಿದೆ ಎಂದು ಪ್ರಶ್ನಿಸಿದರೆ ಆ ಹುದ್ದೆಯಲ್ಲಿ ಇದ್ದವರು ಇಲ್ಲಿನ ಹುದ್ದೆಯನ್ನೇ ಬೇರೆಡೆಗೆ ಒಯ್ದರೆಂದು ಹೇಳುತ್ತಾರೆ. 4-5 ವರ್ಷಗಳ ಹಿಂದೆ ಡಾ.ಶಿರಸಂಗಿ, ಡಾ.ಕಿರಣಕುಮಾರ ಕುಳಗೇರಿ ಚಿಕ್ಕಮಕ್ಕಳ ತಜ್ಞ ವೈದ್ಯರಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದರು. ಆದರೆ ಅವರು ಬೇರೆ ಕಡೆಗೆ ವರ್ಗವಾಗಿ ಹೋದ ಬಳಿಕ ಆ ಹುದ್ದೆಯೇ ಇಲ್ಲದಂತಾಗಿದೆ.
ಪ್ರತಿದಿನ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 3 ರಿಂದ 4 ಹೆರಿಗೆಗಳು ಆಗುವ ಅಂದಾಜಿದೆ. ಅಂದರೆ ತಿಂಗಳಿಗೆ ಸುಮಾರು 70 ರಿಂದ 80 ಹೆರಿಗೆಗಳಾಗುತ್ತವೆ. ಹುಟ್ಟಿದ ತಿಂಗಳೊಳಗಿನ ಬಹುತೇಕ ನವಜಾತ ಶಿಶುಗಳಿಗೆ ಮೇಲಿಂದ ಮೇಲೆ ಅನಾರೋಗ್ಯ ಕಾಡುತ್ತದೆ. ರಕ್ತಹೀನತೆ ಸೇರಿದಂತೆ ಹಲವು ಅನಾರೋಗ್ಯ ಸ್ಥಿತಿ ಬಂದರೆ ಅಂತಹ ಶಿಶುಗಳಿಗೆ ಚಿಕಿತ್ಸೆ ನೀಡಲು ಇಲ್ಲಿ ಚಿಕ್ಕ ಮಕ್ಕಳ ತಜ್ಞ ವೈದ್ಯರಿಲ್ಲ. ಹೀಗಾಗಿ ತಾಯಂದಿರು ಶಿಶುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೋ ಇಲ್ಲವೇ ಜಿಲ್ಲಾ ಕೇಂದ್ರದ ಸರ್ಕಾರಿ ಆಸ್ಪತ್ರೆಗೋ ಹೋಗಬೇಕು.ಅ.10 ರಂದು ಇದೇ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗಿತ್ತು. ಕೆರೂರ ಸರ್ಕಾರಿ ಆಸ್ಪತ್ರೆಯಿಂದ ಡಾ.ಕಿರಣಕುಮಾರ ಕುಳಗೇರಿ ಬಂದು 50-60 ಚಿಕ್ಕಮಕ್ಕಳಿಗೆ ಚಿಕಿತ್ಸೆ ನೀಡಿ ಆರೋಗ್ಯ ತಪಾಸಣೆ ಮಾಡಿ ಹೋದರು. ನಂತರ ಆ ಮಕ್ಕಳ ಆರೋಗ್ಯ ಚಿಕಿತ್ಸೆಗೆ ಇಲ್ಲಿ ಸೌಲಭ್ಯ ಇಲ್ಲದೇ ಹೋಯಿತು. ಎಷ್ಟೋ ತಾಯಂದಿರು ಆ ಮಕ್ಕಳ ಚಿಕಿತ್ಸೆಗೆ ಕೆರೂರ ಆಸ್ಪತ್ರೆಗೆ ಹೋಗಿ ಬರುವಂತಾಯಿತು.
ಈ ಗಂಭೀರ ಸಮಸ್ಯೆ ಅರಿತು ಶಾಸಕರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕ್ಕ ಮಕ್ಕಳ ತಜ್ಞ ವೈದ್ಯ ಹುದ್ದೆ ಪುನಃ ತಂದು, ವೈದ್ಯರನ್ನು ನೇಮಿಸಬೇಕು. ಗುಳೇದಗುಡ್ಡ ಬಡ ನೇಕಾರರ ಊರಾಗಿದ್ದೂ, ಇಲ್ಲಿ ಹೆರಿಗೆಗೆ ಅನುಕೂಲ ಇರುವಂತೆ ನವಜಾತ ಶಿಶುಗಳ ಹಾಗೂ ಚಿಕ್ಕಮಕ್ಕಳ ಚಿಕಿತ್ಸೆಗೂ ವ್ಯವಸ್ಥೆ ಕಲ್ಪಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಈ ಹಿಂದೆ ಇದ್ದ ವೈದ್ಯರು ಚಿಕ್ಕಮಕ್ಕಳ ತಜ್ಞ ವೈದ್ಯರ ಹುದ್ದೆಯನ್ನೇ ಕಿತ್ತುಕೊಂಡು ಬೇರೆ ಕಡೆಗೆ ಹೋಗಿದ್ದರಿಂದ ಇಲ್ಲಿ ಆ ಹುದ್ದೆ ಇಲ್ಲದಂತಾಗಿದೆ. ತುಂಬಾ ಅಗತ್ಯವಾದ ಹುದ್ದೆ ಅದು. ಎನ್.ಆರ್.ಎಚ್.ಎಂ ಯೋಜನೆಯಲ್ಲಿ ಗುತ್ತಿಗೆ ಆಧಾರದ ಮೇಲಾದರೂ ಚಿಕ್ಕಮಕ್ಕಳ ತಜ್ಞ ವೈದ್ಯರನ್ನು ಕೊಡಲು ಡಿಎಚ್ಒಗೆ ಮನವಿ ಮಾಡಲಾಗಿದೆ.
ಡಾ.ನಾಗರಾಜ ಕುರಿ, ಮುಖ್ಯ ವೈದ್ಯಾಧಿಕಾರಿ ಸರ್ಕಾರಿ ಆಸ್ಪತ್ರೆ, ಗುಳೇದಗುಡ್ಡ.