ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕರ್ನಾಟಕದಲ್ಲಿ ಮಾರ್ವಾಡಿ, ಗುಜರಾತಿ, ರೆಡ್ಡಿಗಳು ವ್ಯವಹಾರಿಕವಾಗಿ ಬೆಳೆಯುತ್ತಿದ್ದಾರೆ. ಅವರನ್ನು ನೋಡಿ ಹೊಟ್ಟೆ ಉರಿದುಕೊಂಡರೆ ಅದರಿಂದ ಪ್ರಯೋಜನವಿಲ್ಲ. ಅದನ್ನು ಬಿಟ್ಟು ಒಗ್ಗಟ್ಟಾಗುವ ಮೂಲಕ ನಾವೂ ಬೆಳೆಯಬೇಕು. ಆಗಲೇ ಕನ್ನಡಿಗರು, ಕರ್ನಾಟಕ ಅಭಿವೃದ್ಧಿಯಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಸಿದರು.ನಗರದ ಬಿ.ಎಂ. ರಸ್ತೆ ಬಳಿ ಇರುವ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಮಂಗಳವಾರದಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕರವೇ ಬೃಹತ್ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾರ್ವಾಡಿ, ಗುಜರಾತಿ, ರೆಡ್ಡಿಗಳಂತೆ ನೀವೂ ವ್ಯಾಪಾರ ಮಾಡುವಂತಾಗಬೇಕು. ಅವರು ಮಾಲ್ ಕಟ್ತಾರೆ, ನಾವು ಅದನ್ನು ನೋಡಿ ಮರುಗಿದರೆ ತಪ್ಪು ನಮ್ಮದೇ ಹೊರತು ಅವರದ್ದಲ್ಲ. ಈ ನೆಲದ ಎಲ್ಲಾ ವ್ಯಾಪಾರ, ವ್ಯವಹಾರ ಕನ್ನಡಿಗರಿಗೆ ಸಿಗಬೇಕೆಂದರೆ ಒಟ್ಟಾಗಿರಬೇಕು. ಇಲ್ಲದಿದ್ದರೆ ಮುಂದೊಂದು ದಿನ ಕರ್ನಾಟಕದಲ್ಲೇ ಕನ್ನಡಿಗರು ಪರಕೀಯರಂತೆ ಬದುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಿಂದಿ ಭಾಷೆಗೆ ದೊರೆಯುತ್ತಿರುವ ಅಭಿಮಾನ ಕನ್ನಡಕ್ಕೆ ಸಿಗುತ್ತಿಲ್ಲ. ನಾವು ಉದಾರಿಗಳು, ಅದಕ್ಕಾಗಿ ತ್ರಿಭಾಷಾ ನೀತಿಯನ್ನು ಒಪ್ಪಿಕೊಂಡಿದ್ದೇವೆ. ಆದರೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳಿಗೆ ಕನ್ನಡದ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಗೊತ್ತಿರುವುದು ಧರ್ಮಸ್ಥಳ ಯಾತ್ರೆ ಮಾಡುವುದು ಮಾತ್ರ ಎಂದು ವ್ಯಂಗ್ಯವಾಡಿದರು.ಹಾಸನ ಜಿಲ್ಲೆಯಿಂದ ಈ ಕಾರ್‍ಯಕಾರಣಿ ಸಭೆ ಆರಂಭಿಸಿ ಸಂಘಟಿಸುವ ಮೂಲಕ ರಾಜ್ಯದ ೩೧ ಜಿಲ್ಲೆಗಳ ಯುವಕರಿಗೆ ನಾಡು, ನುಡಿ, ಜಲ, ಸಂಸ್ಕೃತಿ ಹೀಗೆ ಅಪ್ಪಟ ಕನ್ನಡದ ದೀಕ್ಷೆ ಕೊಡಬೇಕೆಂದು ನಾವು ತೀರ್ಮಾನ ಮಾಡಿದ್ದು, ರಾಜ್ಯದ ಎಲ್ಲ ತಾಲೂಕು, ಹೋಬಳಿಯಲ್ಲೂ ಚಾಲನೆ ಮಾಡುತ್ತೇವೆ ಎಂದರು.
ಇದಕ್ಕೂ ಮೊದಲು ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಪ್ರಾಸ್ತಾವಿಕ ಮಾತನಾಡಿ, ಸಂಘಟನೆಯನ್ನು ಪ್ರತಿ ಹಳ್ಳಿ ಹಳ್ಳಿಗೂ ಹೇಗೆ ವಿಸ್ತರಿಸಬೇಕು, ಶಿಸ್ತಿನೊಂದಿಗೆ ಸಂಘಟನೆ ಕಟ್ಟುವ ಬಗ್ಗೆ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಹೇಗೆ ನಡೆಸಬೇಕು ಎಂಬುದು ಪ್ರಮುಖ ಉದ್ದೇಶವಾಗಿದೆ ಎಂದರು.ಇನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಲ್ಲಿಂದ ಕರೆ ಮಾಡಿದರೆ ಕಾಂಗ್ರೆಸ್ ಕಾರ್ಯಕರ್ತರು ಎದ್ದು ನಿಲ್ಲುತ್ತಾರೆ, ಮೋದಿ ಅವರು ಅಲ್ಲಿಂದ ಕರೆ ಮಾಡಿದರೆ ಬಿಜೆಪಿಯವರು ಎದ್ದು ನಿಲ್ಲುತ್ತಾರೆ ಹಾಗೂ ಜೆಡಿಎಸ್ ಪಕ್ಷದಲ್ಲೂ ಇದೆ ಪರಿಸ್ಥಿತಿ ಇದೆ. ಆದರೆ ಕನ್ನಡ ನಾಡು, ನುಡಿ, ಜಲದ ವಿಚಾರ ಬಂದರೆ ಯಾರೂ ಎದ್ದು ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ, ಉದ್ಯಮಿ ಲಕ್ಷ್ಮೀಕಾಂತ್, ಕರವೇ ರಾಜ್ಯ ಕಾರ್ಯದರ್ಶಿ ಆಸಾ ಹರಿಯತ್, ಜಿಲ್ಲಾ ಉಪಾಧ್ಯಕ್ಷ ಸೀತಾರಾಮ್, ಕುಮಾರ್, ರಾಜೇಂದ್ರ ದೊಡ್ಡಮಗ್ಗೆ, ಶಿವಣ್ಣಗೌಡ, ಪ್ರೀತಂ, ರಘು ಪಾಳ್ಯ, ಶ್ರೀನಿವಾಸ್, ತನುಗೌಡ, ಓಹಿಲೇಶ್, ಗಗನ್ ಗೌಡ, ಕಿರಣ್ ಕುಮಾರ್, ಸೋಮಶೇಖರ್, ಚಂದ್ರಶೇಖರ್, ಅಭಿಗೌಡ, ಮಧು ಕರೆಡೇವು, ಶಶಾಂಕ್, ಆಲ್ವಿನ್, ಶಿವಕುಮಾರ್, ಬೋರೇಗೌಡ ಇತರರು ಇದ್ದರು.