ಫೆಬ್ರವರಿವರೆಗೂ ನೀರು ಕೊಡಲು ತೊಂದರೆ ಇಲ್ಲ: ಶಾಸಕ ಪಿ.ರವಿಕುಮಾರ್

| Published : Aug 05 2024, 12:39 AM IST

ಸಾರಾಂಶ

ಕಟ್ಟು ನೀರು ಪದ್ಧತಿ ಪ್ರಕಾರ ನೀರು ಹರಿಸಲಾಗುವುದು ಎಂದು ಪ್ರಕಟಣೆ ಕೊಟ್ಟಿರುವ ಅಧಿಕಾರಿಯನ್ನು ತಕ್ಷಣ ಅಮಾನತ್ತು ಮಾಡಿ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೂ ಮಾತನಾಡಿದ್ದೇವೆ. ವಿಸಿ ನಾಲಾ ವಿಭಾಗದ ಕೊನೆ ಭಾಗಕ್ಕೆ ನೀರು ಹರಿಸುವುದು ನಮ್ಮ ಪ್ರಥಮ ಆದ್ಯತೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆಆರ್‌ಎಸ್ ನಿರ್ಮಾಣ ಮಾಡಿರುವುದು ತಮಿಳುನಾಡಿಗೆ ಬಿಡುವುದಕ್ಕಲ್ಲ. ನಮ್ಮ ರೈತರಿಗೆ ನೀರು ಕೊಡಲು. ಅಣೆಕಟ್ಟೆಯಲ್ಲಿ ಸಾಕಷ್ಟು ನೀರಿದೆ. ಮುಂದಿನ ಫೆಬ್ರವರಿವರೆಗೆ ನೀರು ಕೊಡಲು ಯಾವುದೇ ತೊಂದರೆಯೂ ಇಲ್ಲ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟು ನೀರು ಪದ್ಧತಿ ಪ್ರಕಾರ ರೈತರಿಗೆ ನೀರು ಕೊಡಲಾಗುವುದು ಎಂದು ಯಾರೋ ಎಂಜಿನಿಯರ್ ತಿಳಿಸಿದ್ದಾರೆ. ಏಕೆ ಈ ರೀತಿ ಹೇಳಿಕೆ ನೀಡಿದ್ದಾರೋ ತಿಳಿಯುತ್ತಿಲ್ಲ ಎಂದರು.

ಬೇಜವಾಬ್ದಾರಿ ಹೇಳಿಕೆ ನೀಡಿರುವ ಎಂಜಿನಿಯರ್‌ನ್ನು ಅಮಾನತ್ತು ಪಡಿಸುವಂತೆ ಸರ್ಕಾರಕ್ಕೆ ಪತ್ರ ಬರೆದು ಶಿಫಾರಸ್ಸು ಮಾಡುತ್ತೇನೆ. ಕನ್ನಂಬಾಡಿಯಲ್ಲಿ ನೀರಿಟ್ಟುಕೊಂಡು ನಾವು ಬಾಯಿಗೆ ಮಣ್ಣು ಹಾಕಿಕೊಳ್ಳಬೇಕೇ. ಯಾಕೆ ಈ ರೀತಿ ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದಾರೋ ಗೊತ್ತಾಗುತ್ತಿಲ್ಲ ಎಂದರು.

ನಮಗೆ ಹುಲಿಕೆರೆ ಟನಲ್‌ನಲ್ಲಿ ಎಷ್ಟೇ ನೀರು ಬಿಟ್ಟರೂ ಬರುವುದು 2500 ಕ್ಯುಸೆಕ್ ಮಾತ್ರ. ನಮ್ಮಲ್ಲಿ ಸಾಕಷ್ಟು ನೀರಿದೆ. ರೈತರು ಬೆಳೆ ಬೆಳೆಯುವುದಕ್ಕೆ ನೀರು ಕೊಡುತ್ತೇವೆ. ಇದರಲ್ಲಿ ಯಾವುದೇ ಸಂಶಯವೂ ಇಲ್ಲ ಎಂದರು.

ಮಂಡ್ಯ ತಾಲೂಕಿನಲ್ಲಿರುವ ಕೆರೆಗಳನ್ನು ತುಂಬಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸದ್ಯ ಶೇ.50 ರಷ್ಟು ಕೆರೆಗಳನ್ನು ತುಂಬಿಸಲು ಕ್ರಮ ವಹಿಸಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲ ಕೆರೆ ತುಂಬಿಸಲಾಗುವುದು ಎಂದರು.

ಕಟ್ಟು ನೀರು ಪದ್ಧತಿ ಪ್ರಕಾರ ನೀರು ಹರಿಸಲಾಗುವುದು ಎಂದು ಪ್ರಕಟಣೆ ಕೊಟ್ಟಿರುವ ಅಧಿಕಾರಿಯನ್ನು ತಕ್ಷಣ ಅಮಾನತ್ತು ಮಾಡಿ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೂ ಮಾತನಾಡಿದ್ದೇವೆ. ವಿಸಿ ನಾಲಾ ವಿಭಾಗದ ಕೊನೆ ಭಾಗಕ್ಕೆ ನೀರು ಹರಿಸುವುದು ನಮ್ಮ ಪ್ರಥಮ ಆದ್ಯತೆ ಎಂದರು.

ಹೇಮಾವತಿ ಸಹ ತುಂಬಿ ಹರಿಯುತ್ತಿದೆ. ಅಲ್ಲಿಂದಲೂ ನಾವು ಕೆರೆಗಳನ್ನು ತುಂಬಿಸಲು ಆದ್ಯತೆ ನೀಡಿದ್ದೇವೆ. ಬಸರಾಳು ಕೆರೆಗೆ ನೀರು ಬರುತ್ತಿದೆ. ಮಾಚಹಳ್ಳಿ ಕೆರೆಗೂ ನೀರು ಹರಿಸಲಾಗುತ್ತಿದೆ. ಎಲ್ಲ ಕೆರೆಗಳನ್ನೂ ತುಂಬಿಸುತ್ತೇವೆ ಎಂದು ಪ್ರಶ್ನೆಗೆ ಉತ್ತರಿಸಿದರು.