ಸಾರಾಂಶ
ಬಗ್ಗವಳ್ಳಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸಮುದಾಯ ಭವನದಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ
ಕನ್ನಡಪ್ರಭ ವಾರ್ತೆ, ಅಜ್ಜಂಪುರಯಾವುದೇ ಭಾಷೆ ಸಾಹಿತ್ಯ, ನಾಡು, ನುಡಿ ಬೆಳೆಯಲು ಯುವ ಸಮೂಹ ಸಾಹಿತ್ಯ, ಕವನ, ಕಾದಂಬರಿ ಬರೆವ ಮತ್ತು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ರಾಷ್ಟ್ರ ಪ್ರಶಸ್ತಿ ವಿಜೇತ, ಸಾಹಿತಿ ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.
ಬಗ್ಗವಳ್ಳಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕ ಅಜ್ಜಂಪುರ ತಾಲೂಕು, ಘಟಕಗಳಿಂದ ಹಮ್ಮಿಕೊಂಡಿದ್ದ ಶ್ರಾವಣ ಸಾಹಿತ್ಯ ಸಂಭ್ರಮ, ಹಿರಿಯ ಜಾನಪದ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಸಾಹಿತ್ಯಕ್ಕೆ ಸಮಾಜ ಒಗ್ಗೂಡಿಸುವ, ಅಂಕು ಡೊಂಕುಗಳನ್ನು ತಿದ್ದುವ, ಸ್ವಾಸ್ಥ್ಯ ಸಮಾಜ ಕಾಪಾಡುವ ಶಕ್ತಿ ಇದೆ. ಹಿಂಸೆ, ಅನೀತಿ, ಭ್ರಷ್ಟಾಚಾರ, ಬೂಟಾಟಿಕೆ ಮುಂತಾದವು ಗಳನ್ನು ತೊಲಗಿಸುವ, ಖಂಡಿಸುವ ಸಾಮರ್ಥ್ಯವಿದೆ ಎಂದು ಹೇಳಿದರು.ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಅಜ್ಜಂಪುರ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಣಾಯಕಪುರ ರಾಜಣ್ಣ ಬಿಸೋ ಕಲ್ಲಿನ ಪದವನ್ನು ಹಾಡುತ್ತಾ, ಜಾನಪದ ಸಾಹಿತ್ಯ, ಸಂಸ್ಕೃತಿಗೆ ಮನುಷ್ಯರ ಹೃದಯಗಳನ್ನು, ಸ್ನೇಹ ಸಂಬಂಧ, ಪ್ರೀತಿ-ವಿಶ್ವಾಸ, ಕರುಣೆ, ಸಹೋದರತೆಯನ್ನು ಬೆಸೆಯುವ ಬಹುದೊಡ್ಡ ಸಾಮರ್ಥ್ಯವಿದೆ. ಪ್ರಾಮಾಣಿಕತೆ, ಸತ್ಯ, ನಿಷ್ಠೆ, ಅಹಿಂಸೆ ಮುಂತಾದ ಮೌಲ್ಯಾಧಾರಿತ ಗುಣಗಳನ್ನು ಇಂದಿನ ಯುವಜನರ ಮನಸ್ಸಿನಲ್ಲಿ ಹುಟ್ಟು ಹಾಕುವ ಶಕ್ತಿ ಇದೆ ಎಂದರು
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ, ಗ್ರಾಮ, ಹೋಬಳಿ ತಾಲೂಕು, ಮಟ್ಟದಲ್ಲಿ ಬಹಳ ಶಕ್ತಿಯುತವಾಗಿ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯ ಪಟ್ಟರು.ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಪಠ್ಯಪುಸ್ತಕ ಓದುವಿಕೆಗೆ ಮಾತ್ರ ಸೀಮಿತವಾಗಿರದೆ ನಾಡಿನ ದಾರ್ಶನಿಕರ, ಜನಪದ ಸಾಹಿತಿಗಳ, ಕನ್ನಡ ನಾಡು-ನುಡಿಗೆ ಹೋರಾಡಿದ ಮಹನೀಯರ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕೆಂದು ಕಿವಿಮಾತು ಹೇಳಿದರು. ಇದರಿಂದ ಇಂದಿನ ಯುವಕ ಯುವತಿಯರ ಮನ ಪರಿವರ್ತನೆಯಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಿದಂತಾಗುತ್ತದೆ ಎಂದರು.
ಹಿರಿಯ ಜನಪದ ಕಲಾವಿದರನ್ನು ಸನ್ಮಾನಿಸಲಾಯಿತು.ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಡೂರು ತಾಲೂಕು ಅಧ್ಯಕ್ಷ ಜಗದೀಶ್ ಆಚಾರ್ ನಡೆಸಿಕೊಟ್ಟರು.ಡಾ.ಮಾಳೇನಳ್ಳಿ ಬಸಪ್ಪ, ಅಧ್ಯಕ್ಷತೆ ವಹಿಸಿದ್ದರು. ಮರುಳು ಸಿದ್ದಪ್ಪ ಮತ್ತು ಪರಿಷತ್ತಿನ ಉಪಾಧ್ಯಕ್ಷ ಜಿಎಸ್ ತಿಪ್ಪೇಶ್, ಓಂಕಾರಪ್ಪ, ನಾರಾಯಣಪುರ ರಾಜಣ್ಣ, ಸೋಮಣ್ಣ,ತಿಪ್ಪೇಶಪ್ಪ, ಸಿದ್ದರಾಮಪ್ಪ, ಶಿವಾನಂದಯ್ಯ, ತಿಪ್ಪೇಶ್, ಗುರುಮೂರ್ತಿ, ಜಯಣ್ಣ, ಲಿಂಗರಾಜು, ಉಪಸ್ಥಿತರಿದ್ದರು.
4ಕೆಕೆಡಿಯು3.ಅಜ್ಜಂಪುರ ತಾಲೂಕಿನ ಬಗ್ಗವಳ್ಳಿಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ ಹಿರಿಯ ಜಾನಪದ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.