ವಿಜಯೇಂದ್ರ ಜತೆ ರಾಜಿ ಆಗುವ ಪ್ರಶ್ನೆನೇ ಇಲ್ಲ- ಯತ್ನಾಳ್

| Published : Feb 12 2024, 01:37 AM IST

ವಿಜಯೇಂದ್ರ ಜತೆ ರಾಜಿ ಆಗುವ ಪ್ರಶ್ನೆನೇ ಇಲ್ಲ- ಯತ್ನಾಳ್
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜತೆ ರಾಜಿ ಆಗುವ ಪ್ರಶ್ನೆನೇ ಇಲ್ಲ. ಯಾರು ಜತೆ ರಾಜಿ ಆಗಬೇಕು? ಅಪ್ಪ ಮಕ್ಕಳ ಜತೆ ರಾ ಆಗಬೇಕಾ? ರಾಜಿ ಅವಶ್ಯಕತೆ ಇಲ್ಲ.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜತೆ ರಾಜಿ ಆಗುವ ಪ್ರಶ್ನೆನೇ ಇಲ್ಲ. ಯಾರು ಜತೆ ರಾಜಿ ಆಗಬೇಕು? ಅಪ್ಪ ಮಕ್ಕಳ ಜತೆ ರಾ ಆಗಬೇಕಾ? ರಾಜಿ ಅವಶ್ಯಕತೆ ಇಲ್ಲ. ವಿಜಯೇಂದ್ರ ಜತೆ ರಾಜಿ ಏನಿಲ್ಲ. ನಾನೇನು ಲೋಕಸಭಾ ಟಿಕೆಟ್ ಕೇಳಿದೀನಾ? ಅವರ ಜತೆ ನನ್ನದು ಏನು ವ್ಯವಹಾರ ಇಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಸ್ಪಷ್ಟಪಡಿಸಿದರು.

ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ನೇತೃತ್ವದಲ್ಲಿ ನಾವು ಚುನಾವಣೆಗೆ ಹೋಗಲ್ಲ. ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಅಯೋಧ್ಯೆಯ ಶ್ರೀರಾಮನ ಆಶೀರ್ವಾದದ ಮೇಲೆ‌ ನಡೆಯುತ್ತಿರುವ ಚುನಾವಣೆ ಇದಾಗಿದೆ. ಮೋದಿಯವರು ದೈವಿ ಪುರುಷ, 500 ವರ್ಷ ನಮ್ಮ ಕರಸೇವಕರು ಬಲಿದಾನ ಕೊಟ್ಟಂತ ರಾಮಮಂದಿರ ನಿರ್ಮಿಸಿದರು. ಅದು ಸಾಮಾನ್ಯ ಅಲ್ಲ. ಲೋಕಸಭಾ ಚುನಾವಣೆ ಬಳಿಕ ಎಲ್ಲ ಅಪ್ಪ ಮಕ್ಕಳ ಆಟ ಮುಗಿಯುತ್ತದೆ ಎಂದರು.

ನಾನು ಸಂಸತ್ತಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೊಠಡಿಗೆ ಹೋಗಿದ್ದೆ. ಆ ಮನುಷ್ಯನೂ ಅಲ್ಲಿ ಬಂದು ಕೂತಿದ್ದ, ಭೇಟಿಯಾದ, ಹೋದ. ವಿಜಯೇಂದ್ರನಿಂದ ಯತ್ನಾಳ್‌ಗೆ ಏನು ಆಗಬೇಕಿಲ್ಲ, ಭವಿಷ್ಯದಲ್ಲಿಯೂ ಏನು ಆಗಬೇಕಿಲ್ಲ ಎಂದರು.

ಡಿಕೆಶಿ ಸೆಟ್ಲಮೆಂಟ್‌:

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೆಟ್ಲಮೆಂಟ್ ಮಾಡಿಕೊಂಡೇ ಹೊರಗಿದ್ದಾರೆ. ಇನ್ನು ಹೊರಗೆ ಇರೋಕೆ ಆಗಲ್ಲ, ಕೇಂದ್ರದಲ್ಲಿ ಯಾವ ಸೆಟ್ಲಮೆಂಟ್ ನಡೆಯಲ್ಲ. ಸದ್ಯದಲ್ಲೇ ಅವರದ್ದು ಸೆಟ್ಲಮೆಂಟ್ ಆಗಲಿದೆ ಎಂದು ಹೇಳಿದರು.

ದೇಶ ವಿಭಜನೆ ಬಗ್ಗೆ ಮಾತಾಡೋದು ಅಂದರೆನೇ ದೇಶದ್ರೋಹ. ಡಿ.ಕೆ. ಸುರೇಶ್ ಅವರಿಗೆ ಶೋಕಾಸ್ ನೋಟೀಸ್ ಕೊಟ್ಟಿಲ್ಲ ಅಂದರೆ ಸೋನಿಯಾ, ರಾಹುಲ್ ದೇಶ ವಿಭಜನೆಗೆ ಬೆಂಬಲ ಕೊಡುತ್ತಿದ್ದಾರೆಂದು ಅರ್ಥವಾಗುತ್ತದೆ. ಒಂದು ಕಡೆ ಭಾರತ್ ಜೋಡೋ ಮಾಡ್ತೀವಿ ಅಂತಾರೆ, ಮತ್ತೊಂದು ಕಡೆ ಅವರ ಎಂಪಿ ಭಾರತ್ ತೋಡೋ ಮಾಡ್ತಿದ್ದಾರೆ. ಮೊದಲು ಅವರ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಲಿ. ಭಾರತ್ ತೋಡೋ ಮಾಡಲು ಹೋಗಿ ಅವರ ಇಂಡಿಯಾ ಅಲೈಯನ್ಸ್ ಥೋಡೋ ಆಗಿದೆ. ಕೇಜ್ರಿವಾಲ್ ಹೊರಗೆ ಬಂದರು, ಉದ್ಧವ್ ಠಾಕ್ರೆ ಹೊರಗೆ ಬರ್ತಾರೆ ಎಂದು ಯತ್ನಾಳ್‌ ಟೀಕಿಸಿದರು.

ಈ ಹಿಂದೆ ಪ್ರತ್ಯೇಕ ರಾಜ್ಯ ಕೇಳಿದ್ರು. ಆದರೆ ಪ್ರತ್ಯೇಕ ದೇಶ ಕೇಳೋದು ದೇಶ ದ್ರೋಹದ ಕೆಲಸ. ನೂರಾರು ಜನರ ತ್ಯಾಗದಿಂದ ದೇಶ ಒಕ್ಕೂಟವಾಗಿದೆ. ನೆಹರು ಮಾಡಿದ ದೊಡ್ಡ ತಪ್ಪಿನಿಂದ ಕಾಶ್ಮೀರಕ್ಕೆ ಸ್ಥಾನಮಾನ ಕೊಟ್ಟರು. ಕಾಂಗ್ರೆಸ್‌ನವರು ದೇಶ ಒಡೆದರು, ಆದರೆ ದೇಶ ಜೋಡಿಸಿದ್ದು ಬಿಜೆಪಿ. ಸ್ವಾತಂತ್ರ‍್ಯ ಪೂರ್ವ ಕಾಂಗ್ರೆಸ್ ರಾಜಕೀಯ ಪಕ್ಷ ಇರಲಿಲ್ಲ. ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕ ಮೇಲೆ ಗಾಂಧಿ ಪಕ್ಷ ವಿಸರ್ಜನೆ ಮಾಡಿ ಎಂದಿದ್ದರು. ದೇಶದ ಜನರನ್ನ ಲೂಟಿ ಮಾಡ್ತೀರಿ ಅಂತ ಕಾಂಗ್ರೆನ್‌ನವರಿಗೆ ಗಾಂಧಿ ಹೇಳಿದ್ರು, ಅದು ಇಂದು ಸತ್ಯವಾಗಿದೆ ಎಂದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆಪರೇಶನ್ ಕಮಲದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವೇನು ಆಪರೇಶನ್ ಮಾಡೋದು ಬೇಕಿಲ್ಲ. ಒಮ್ಮೊಮ್ಮೆ ಆಪರೇಶನ್ ಆಗದೇ ಅದೇ ಅಬಾರ್ಷನ್ ಆಗುತ್ತದೆ. ಕಾಂಗ್ರೆಸ್‌ನಲ್ಲಿ ಅಸಮಾಧಾನ ಇದೆ. ಸಿದ್ದರಾಮಯ್ಯ ಇಳಿಸಲು ಕಾಂಗ್ರೆಸ್‌ನಿಂದ ಒಂದು ಗುಂಪು ಹೊರಗೆ ಬರಬಹುದು. ಡಿಕೆಶಿ ಸಿಎಂ ಮಾಡಿದರೆ ರಾಜ್ಯದ ಗತಿ ಏನು ಅಂತ ನಮಗೆ ಭಯ ಇದೆ ಎಂದರು.

10 ಪಟ್ಟು ಅಭಿವೃದ್ಧಿ:

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯ ಎಂದು ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದವರು ೧೦ ವರ್ಷದ ಶ್ವೇತಪತ್ರ ಬಿಡುಗಡೆ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಅಂಕಿ-ಸಂಖ್ಯೆ ಆಧಾರದ ಮೇಲೆ ಹೇಳಿದ್ದಾರೆ. ಅನ್ಯಾಯ ಆಗಿದೆ ಅಂದರೆ ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ ಗೆ ಹೋಗಬೇಕಿತ್ತು. ಮನಮೋಹನ್‌ಸಿಂಗ್ ಇದ್ದಾಗ ರಾಜ್ಯಕ್ಕೆ ಎಷ್ಟು ಅನುದಾನ ಕೊಟ್ಟಿದ್ದರು ಎಂದು ಪ್ರಶ್ನಿಸಿದ ಅವರು, ನಾವು ಅದರ 10 ಪಟ್ಟು ಅಭಿವೃದ್ಧಿ ಮಾಡಿದ್ದೀವಿ. ಮೊನ್ನೆ ಕಾಂಗ್ರೆಸ್‌ನವರು ಜಂತರ್ ಮಂತರ್ ಗೆ ಹೋಗಿದ್ದು ಮಜಾ ಮಾಡೋಕೆ ಎಂದು ಆರೋಪಿಸಿದರು.