ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರುಕಾಡನ್ನು ಬಿಟ್ಟು ಹಸುಗಳನ್ನು ಮೇಯಿಸುವ ಪ್ರಶ್ನೆಯೇ ಇಲ್ಲ. ಕಾಡು ನಮ್ಮದೂ ಆಗಿದ್ದು, ಅದು ನಮ್ಮ ಜೀವನದ ಒಂದು ಭಾಗ ಎಂದು ಕಿಸಾನ್ ಸಂಘದ ಮುಖಂಡರು, ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಕಿಡಿಕಾರಿದ್ದಾರೆ.
ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಕಿಸಾನ್ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಕಿಸಾನ್ ಸಂಘ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ರಾಮಾಪುರ ರಾಜೇಂದ್ರ ಅವರು ಮಾತನಾಡಿದರು.ಮಿಣ್ಯಂ ಬಳಿ ಐದು ಹುಲಿಗಳ ಸಾವಿನ ಪ್ರಕರಣದ ಸಂದರ್ಭದಲ್ಲಿ ಅರಣ್ಯ ಸಚಿವರ ಜೊತೆ ಮಾತನಾಡಿದ ಸಂದರ್ಭವನ್ನು ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 2 ಲಕ್ಷ ದೇಶೀಯ ತಳಿ ಹಸುಗಳಿವೆ. ಅವುಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಅರಣ್ಯ ಪ್ರದೇಶದಲ್ಲಿ ರಾಸುಗಳನ್ನು ಮೇಯಲು ಅನುಕೂಲ ಕಲ್ಪಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾವು ಆಗ ಮನವಿ ಮಾಡಿದ್ದೆವು. ಸಚಿವರು ನಮ್ಮ ಸಮ್ಮುಖದಲ್ಲಿಯೇ, ಈ ಕುರಿತು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ನಂತರ ಯಾವುದೇ ಸಭೆಗೂ ಆಹ್ವಾನ ನೀಡದೆ, ಮಾತು ತಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅನಾದಿ ಕಾಲದಿಂದಲೂ ಕಾಡಂಚಿನ ಪ್ರದೇಶಗಳಲ್ಲಿ ದಶಕಗಳಿಯಿಂದ ಗೋಪಾಲಕರು ಹಸುಗಳನ್ನು ಮೇಯಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಈಗ ಆ ಭಾಗಗಳಲ್ಲಿ ಹಸು ಮೇಯಿಸುವಿಕೆ ಮೇಲೆ ವಿಧಿಸಿರುವ ಮೀಸಲು ಪ್ರದೇಶದ ನಿರ್ಬಂಧಗಳು ಪರಂಪರೆಯ ಮೇಲಿನ ಪ್ರಹಾರವಾಗಿದೆ. ಕಾಡನ್ನ ಬಿಡುವ ಪ್ರಶ್ನೆಯೇ ಇಲ್ಲ. ಕಾಡು ನಮ್ಮ ಬದುಕಿನ ಅವಿಭಾಜ್ಯ ಅಂಗ. ಈ ನಿರ್ಬಂಧಗಳನ್ನು ತಕ್ಷಣವೇ ಸಡಿಲಿಸದಿದ್ದರೆ, ರಾಜ್ಯದ ಗೋಪಾಲಕರನ್ನು ಒಗ್ಗೂಡಿಸಿ ವಿಧಾನಸೌಧ ಆವರಣದಲ್ಲಿಯೇ ಹಸುಗಳನ್ನು ಮೇಯಿಸುವ ಭಾರೀ ಆಂದೋಲನ ಆರಂಭಿಸುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಕಿಸಾನ್ ಸಂಘದ ಅಧ್ಯಕ್ಷ ಹರಿಶ್, ಜಿಲ್ಲಾ ಉಪಾಧ್ಯಕ್ಷರಾದ ಮಣಿಗಾರ್ ಪ್ರಸಾದ್, ಜಿಲ್ಲಾ ಕಾರ್ಯದರ್ಶಿ ಬೋಸ್ಕೋ, ತಾಲೂಕು ಸಮಿತಿಯ ಸದಸ್ಯರ ಮಲ್ಲಿಕಾರ್ಜುನ್, ಸಿದ್ದರಾಜು, ವೆಂಕಟೇಶ್, ಮುರುಗೇಶ್, ಸಿದ್ದಮರಿಯಪ್ಪ ಇನ್ನಿತರರು ಉಪಸ್ಥಿತರಿದ್ದರು.24ಸಿಎಚ್‌ಎನ್51
ಹನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಕಿಸಾನ್ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಕಿಸಾನ್ ಸಂಘ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ರಾಮಾಪುರ ರಾಜೇಂದ್ರ ಅವರು ಮಾತನಾಡಿದರು.