ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಯಾರು ಕಾರಣಕರ್ತರಾಗಿದ್ದಾರೋ, ಯಾರು ತಪ್ಪಿತಸ್ಥರಿದ್ದಾರೋ ಅವರನ್ನು ಯಾವುದೇ ಕಾರಣಕ್ಕೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರು ಗಲಾಟೆಗೆ ಹಿಂದೂಗಳಿರಬಹುದು ಅಥವಾ ಮುಸಲ್ಮಾನರಾಗಿರಬಹುದು ಯಾರೇ ಕಾರಣರಾಗಿದ್ದರೂ ಅವರನ್ನು ರಕ್ಷಣೆ ಮಾಡಲು ಹೋಗುವುದಿಲ್ಲ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಮುಲಾಜಿಲ್ಲದೆ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪುನುರಚ್ಚರಿಸಿದರು.ಈಗಾಗಲೇ ಪೊಲೀಸರು ಸಿಸಿ ಟಿವಿ, ವಿಡಿಯೋಗಳ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದು, ಯಾರು ಯಾರು ಈ ಗಲಭೆಯಲ್ಲಿ ಭಾಗಿಯಾಗಿದ್ದರೆ, ಗಲಾಟೆ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ 15 ಮಂದಿಯನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಉಳಿದವರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.ಇಡೀ ರಾಜ್ಯದಲ್ಲಿ ಗಣೋಶೋತ್ಸವಗಳು ಶಾಂತಿಯುತವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಒಂದು ಊರಿನಲ್ಲಿ ಈ ರೀತಿಯ ಗಲಾಟೆ ನಡೆದಿದೆ ಎಂದರೆ ಏನರ್ಥ? ಈ ಗಲಾಟೆಗೆ ಪ್ರಚೋದನೆ ನೀಡಿದವರು, ಭಾಗಿಯಾದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಗುಡುಗಿದರು. ಗಣೇಶೋತ್ಸವದ ಸಂದರ್ಭದಲ್ಲಿ ಪೊಲೀಸರ ಭದ್ರತೆ ಒಂದು ಕಡೆಯಾದರೆ ಜನರು ಸಹ ಶಾಂತಿಯಿಂದ ನಡೆದುಕೊಳ್ಳಬೇಕು. ಕಲ್ಲು ಎಸೆಯುವುದು, ಪ್ರಚೋದನೆ ಮಾಡುವುದು ಸರಿಯಲ್ಲ. ಈ ಗಲಾಟೆಯಲ್ಲಿ ಯಾರು ತಪ್ಪು ಮಾಡಿದ್ದಾರೋ ಅವರು ಶಿಕ್ಷೆ ಅನುಭವಿಸುತ್ತಾರೆ. ಇಂತಹ ಘಟನೆಗಳಿಂದ ಅನೇಕ ಬೆಳವಣಿಗೆಗಳಾಗುತ್ತವೆ. ಹಾಗಾಗಿ ಹೊರಗಡೆಯಿಂದ ಬಂದವರು ಈ ರೀತಿ ಗಲಾಟೆ ಮಾಡುವುದಾಗಲೀ, ಪ್ರಚೋದನೆ ಮಾಡುವ ಕೆಲಸವನ್ನಾಗಲೀ ಮಾಡಬಾರದು ಎಂದು ಅವರು ಹೇಳಿದರು. ಯಾರೂ ಸಹ ಕಾನೂನು ಕೈಗೆತ್ತಿಕೊಳ್ಳಲು ನಾವು ಅವಕಾಶ ಕೊಡುವುದಿಲ್ಲ ಎಂದ ಅವರು, ಒಂದು ವೇಳೆ ಈ ಗಲಾಟೆ ಪೂರ್ವನಿಯೋಜಿತ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗುತ್ತದೆ ಎಂದರು.ಈ ವಿಚಾರದಲ್ಲಿ ಪೊಲೀಸರ ಭದ್ರತಾ ವೈಫಲ್ಯ ಎನ್ನುವುದು ಸರಿಯಲ್ಲ. ಪೊಲೀಸರು ಕಲ್ಲು ಹೊಡೆಯಿರಿ ಎಂದು ಹೇಳಿದ್ದರಾ, ಆ ಬಗ್ಗೆ ತನಿಖೆಯಾಗಲಿ. ಆ ನಂತರ ಭದ್ರತಾ ವೈಫಲ್ಯ ಆಗಿದೆಯೋ, ಇಲ್ಲವೋ ಎನ್ನುವ ಬಗ್ಗೆ ಗಮನ ಹರಿಸುತ್ತೇವೆ ಎಂದು ಹೇಳಿದರು.ಒಟ್ಟಾರೆ ಶಾಂತಿ ಸೌಹಾರ್ದತೆಯಿಂದ ಬದುಕು ನಡೆಸಲು ಎಲ್ಲರೂ ಸಹಕರಿಸಬೇಕು. ಇಂತಹ ಪ್ರಚೋದನಾಕಾರಿಗಳಿಗೆ ಆಸ್ಪದ ನೀಡಬಾರದು. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.ಸದ್ಯ ಮದ್ದೂರಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಇಂದು ಎರಡು ಸಮುದಾಯದವರ ಶಾಂತಿ ಸಭೆ ಸಹ ಕರೆಯಲಾಗಿದೆ. ಎರಡು ಸಮುದಾಯದವರು ಸಹ ಶಾಂತಿಯುತವಾಗಿ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗುತ್ತದೆ ಎಂದರು.
;Resize=(128,128))
;Resize=(128,128))
;Resize=(128,128))