ಕನ್ನಡಪ್ರಭ ವಾರ್ತೆ ಬೇಲೂರುಮುಂಗಾರು ಹಂಗಾಮಿಗೆ ಅಗತ್ಯವಿರುವಷ್ಟು ರಸಗೊಬ್ಬರ ಸಂಗ್ರಹ ಲಭ್ಯವಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕಾಂತರಾಜು ಜಿ ಅವರು ತಿಳಿಸಿದ್ದಾರೆ.
ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಮುಂದಿನ ದಿನಗಳಲ್ಲಿ ರಸಗೊಬ್ಬರ ಕೊರತೆ ಉಂಟಾಗಬಹುದು ಎಂಬ ಗಾಳಿ ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ರೈತರು ಮುಂಗಡವಾಗಿ ಗೊಬ್ಬರ ಖರೀದಿಸಲು ಮುಂದಾಗಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಎಲ್ಲಾ ರೀತಿಯ ರಸಗೊಬ್ಬರ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ದಾಸ್ತಾನು ಇದ್ದು, ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ, 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಮೇ 2026ರ ಮಾಹೆಗೆ ತಾಲೂಕಿಗೆ ಒಟ್ಟು 1937 ಮೆಟ್ರಿಕ್ ಟನ್ ರಸಗೊಬ್ಬರ ಅವಶ್ಯಕತೆ ಇದ್ದು, ಪ್ರಸ್ತುತ ಒಟ್ಟು 4334 ಟನ್ ರಸಗೊಬ್ಬರ ಸಹಕಾರ ಸಂಘಗಳು ಹಾಗೂ ಖಾಸಗಿ ವರ್ತಕರ ಬಳಿ ದಾಸ್ತಾನು ಇದೆ. ಪ್ರತಿದಿನವೂ ಯಾವುದೇ ಅಡೆತಡೆ ಇಲ್ಲದೆ ಪೂರೈಕೆ ನಡೆಯುತ್ತಿದ್ದು, ರೈತರು ಗೊಂದಲಕ್ಕೊಳಗಾಗಬಾರದು. ಕೃತಕ ಅಭಾವ ಸೃಷ್ಟಿಸಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆ ವಸೂಲಿ ಮಾಡಿದರೆ ರೈತರು ಯಾವುದೇ ಮುಲಾಜಿಲ್ಲದೆ ಕೃಷಿ ಇಲಾಖೆಗೆ ದೂರು ನೀಡಬೇಕು. ಯೂರಿಯಾ ಗೊಬ್ಬರವನ್ನು ಮಿತವಾಗಿ ಬಳಸುವ ಉದ್ದೇಶದಿಂದ ಅದರ ಖರೀದಿಗೆ ರೈತರ ಎಫ್ಐಡಿ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಯೂರಿಯಾದ ಅತಿಯಾದ ಬಳಕೆ ಭೂಮಿಯ ಫಲವತ್ತತೆ ಹಾಗೂ ಸೂಕ್ಷ್ಮಾಣು ಜೀವಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಡಿಎಪಿ ಗೊಬ್ಬರದಲ್ಲಿ ಸಾರಜನಕ ಮತ್ತು ರಂಜಕ ಅಂಶಗಳಿದ್ದರೂ, ಬೆಳೆಗಳಿಗೆ ಅಗತ್ಯವಿರುವ ಪೊಟ್ಯಾಶ್ ಅಂಶ ಇಲ್ಲದ ಕಾರಣ ರೈತರು ಎನ್ಪಿಕೆ ಗೊಬ್ಬರ ಬಳಕೆಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.ರೈತರು ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರ, ಎರೆಹುಳು ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು ಹಾಗೂ ಮೇಲುಗೊಬ್ಬರ ಬಳಸುವಾಗ ನ್ಯಾನೋ ರಸಗೊಬ್ಬರಗಳಾದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು. ಪ್ರಸ್ತುತ ತಾಲೂಕಿನಲ್ಲಿ ಯೂರಿಯಾ – 545 ಟನ್, ಡಿಎಪಿ - 267 ಟನ್, ಎನ್ಪಿಕೆ ಕಾಂಪ್ಲೆಕ್ಸ್ - 2940 ಟನ್, ಪೊಟ್ಯಾಶ್ - 440 ಟನ್ ಸೂಪರ್ ಫಾಸ್ಟೇಟ್ - 93 ಟನ್ ರಸಗೊಬ್ಬರ ಲಭ್ಯತೆ ಇದೆ ಎಂದು ತಿಳಿಸಿದರು.