ಸಕಲೇಶ್ವರಸ್ವಾಮಿ ದನಗಳ ಜಾತ್ರೆಗೆ ಜಾಗವೇ ಇಲ್ಲ

| Published : Jan 22 2024, 02:19 AM IST

ಸಾರಾಂಶ

ಈ ಬಾರಿ ಸಕಲೇಶಪುರದಲ್ಲಿಯ ಸಕಲೇಶ್ವರಸ್ವಾಮಿ ದನಗಳ ಜಾತ್ರೆ ಹಾಗೂ ವಸ್ತುಪ್ರದರ್ಶನವನ್ನು ಎಲ್ಲಿ ನಡೆಸುವುದೆಂಬ ಚಿಂತೆ ತಾಲೂಕು ಆಡಳಿತಕ್ಕೆ ಶುರುವಾಗಿದೆ. ಸದ್ಯ ದನಗಳ ಜಾತ್ರೆ ಹಾಗೂ ವಸ್ತುಪ್ರದರ್ಶನ ನಡೆಯುತ್ತಿದ್ದ ಭೂಮಿ ಖಾಸಗಿ ವ್ಯಕ್ತಿಗೆ ಸೇರಿದೆ ಎಂಬ ಹೈಕೋರ್ಟ್‌ ತೀರ್ಪು ಪುರಸಭೆ ಆಡಳಿತಕ್ಕೆ ತೊಡಕಾಗಿದೆ.

ಇದ್ದ ಹಳೇ ಸಂತೆ ಮೈದಾನ ಖಾಸಗಿ ವ್ಯಕ್ತಿಗೆ ಸೇರಿದ್ದು । ಹೈಕೋರ್ಟಿನಲ್ಲಿದ್ದ ವಿವಾದಕ್ಕೆ ಈಗ ತೀರ್ಪು । ಪುರಸಭೆ ಆಡಳಿತಕ್ಕೆ ಸ್ಥಳದ ಆಯ್ಕೆ ಗೊಂದಲ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಈ ಬಾರಿಯ ಸಕಲೇಶ್ವರಸ್ವಾಮಿ ದನಗಳ ಜಾತ್ರೆ ಹಾಗೂ ವಸ್ತುಪ್ರದರ್ಶನವನ್ನು ಎಲ್ಲಿ ನಡೆಸುವುದೆಂಬ ಚಿಂತೆ ತಾಲೂಕು ಆಡಳಿತಕ್ಕೆ ಶುರುವಾಗಿದೆ.

ಸದ್ಯ ದನಗಳ ಜಾತ್ರೆ ಹಾಗೂ ವಸ್ತುಪ್ರದರ್ಶನ ನಡೆಯುತ್ತಿದ್ದ ಭೂಮಿ ಖಾಸಗಿ ವ್ಯಕ್ತಿಗೆ ಸೇರಿದೆ ಎಂಬ ರಾಜ್ಯ ಉಚ್ಚನ್ಯಾಯಾಲಯದ ತೀರ್ಪು ಪುರಸಭೆ ಆಡಳಿತಕ್ಕೆ ಹೂಸ ತಲೆನೋವು ತಂದಿಟ್ಟಿದೆ.

ಹಿನ್ನೆಲೆ:

ಸಕಲೇಶ್ವರಸ್ವಾಮಿ ಜಾತ್ರಾ ವಸ್ತುಪ್ರದರ್ಶನ ಹಾಗೂ ದನಗಳ ಜಾತ್ರೆ ೧೯೬೦ ರಲ್ಲಿ ಆರಂಭವಾಗಿದ್ದು ಅಂದಿನಿಂದಲೂ ಇಂದಿನ ಹಳೇ ಸಂತೆ ಮೈದಾನದಲ್ಲೆ ವಸ್ತುಪ್ರದರ್ಶನ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ, ೧೯೮೪ ರಲ್ಲಿ ಪಟ್ಟಣದ ವರದರಾಜಲು ಎಂಬುವವರು ತಮಗೆ ಸೇರಿದ ಜಮೀನಿನಲ್ಲಿ ತಮ್ಮ ಅನುಮತಿ ಇಲ್ಲದೆ ಸಂತೆ ಹಾಗೂ ದನಗಳ ಜಾತ್ರೆ ನಡೆಸಬಾರದು ಎಂದು ಹೈಕೊರ್ಟ್‌ನಲ್ಲಿ ದೂರು ದಾಖಲಿಸಿದ್ದರು. ೧೯೮೮ ರಲ್ಲಿ ಆದೇಶ ನೀಡಿದ್ದ ಹೈಕೊರ್ಟ್ ಜಮೀನು ಮಾಲೀಕರ ಅನುಮತಿ ಪಡೆದು ಕಾರ್ಯಕ್ರಮ ನಡೆಸುವಂತೆ ಸೂಚಿಸಿತ್ತು. ಇದರಿಂದ ಮತ್ತಷ್ಟು ಕೆರಳಿದ ಪುರಸಭೆ ಆಡಳಿತ, ಅದೇ ವರ್ಷ ನಂಜುಂಡಶೆಟ್ಟಿ ಹೆಸರಿನಲ್ಲಿದ್ದ ಸರ್ವೆ ನಂಬರ್‌ನ್ನು ಪುರಸಭೆ ತಮ್ಮ ಕಡತದಲ್ಲಿ ಸ್ಟೇಡಿಯಂ ಎಂದು ನಮೂದಿಸಿದ್ದು ಇದರ ಆಧಾರದ ಮೇಲೆ ೧೯೯೨-೯೩ ರಲ್ಲಿ ಸ್ಟೇಡಿಯಂ ಹೆಸರಿಗೆ ಖಾತೆಯನ್ನು ಬದಲಿಸಿದೆ ಎಂಬುದು ದಾಖಲೆಗಳಲ್ಲಿ ಬಯಲಾಗಿದೆ.

ವರವಾದ ಅನ್ಯಸಂಕ್ರಮಣ:

ಪುರಸಭೆ ಹಾಗೂ ಖಾಸಗಿ ವ್ಯಕ್ತಿಯ ನಡುವೆ ನಡೆಯುತ್ತಿರುವ ಜಮೀನು ವ್ಯಾಜ್ಯಕ್ಕೆ ತಾರ್ಕಿಕ ಅಂತ್ಯ ಕಾಣಲು ಈ ಜಮೀನಿನ ಮಾಲೀಕರು ೧೯೫೯ ರಲ್ಲೆ ಜಿಲ್ಲಾಧಿಕಾರಿಗಳಿಂದ ಭೂಮಿಯನ್ನು ಅನ್ಯಸಂಕ್ರಮಣಗೊಳಿಸಿದ್ದರು. ಈ ಅಂಶ ಪುರಸಭೆಗೆ ಮುಳುವಾದರೆ ಖಾಸಗಿ ವ್ಯಕ್ತಿಗೆ ವರವಾಗಿದೆ ಎನ್ನಲಾಗಿದೆ.

೧೮೮೪ ರಿಂದ ಹೋರಾಟ:

ಪುರಸಭೆ ಆಡಳಿತ ಹಾಗೂ ಖಾಸಗಿ ವ್ಯಕ್ತಿಯ ನಡುವೆ ೧೭/೧೧ಬಿ ಸರ್ವೆ ನಂಬರ್‌ನಲ್ಲಿರುವ ಹಳೇ ಸಂತೆ ಮೈದಾನದ ೨.೦೮ ಎಕರೆ ಜಮೀನಿಗಾಗಿ ಹೋರಾಟ ಆರಂಭವಾಗಿದ್ದು ನಿರಂತರ ೪೦ ವರ್ಷಗಳ ಹೋರಾಟದ ನಂತರ ಸಮಸ್ಯೆ ತಾರ್ಕಿಕ ಅಂತ್ಯ ತಲುಪಿದೆ.

ನಿರಂತರ ತಡೆಯಾಜ್ಞೆ:

೧೯೮೫ ರಿಂದ ಪ್ರತಿವರ್ಷ ಜಾತ್ರೆವಸ್ತಪ್ರದರ್ಶನ ನಡೆಯುವ ಸಂದರ್ಭದಲ್ಲಿ ನಂಜುಂಡಶೆಟ್ಟಿ ಎಂಬುವವರು ವಸ್ತುಪ್ರದರ್ಶನ ನಡೆಯದಂತೆ ತಡೆಯಾಜ್ಞೆ ತರುತ್ತಿದ್ದರು. ಆದರೆ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ಗಳ ನೆರವಿನಿಂದ ನಿರಂತರವಾಗಿ ವಸ್ತುಪ್ರದರ್ಶನ ನಡೆಸಿಕೊಂಡೆ ಬರಲಾಗುತಿತ್ತು.

ಸಂತೆ ಸಹ ಇಲ್ಲೆ:

ಪಟ್ಟಣದಲ್ಲಿ ಗುರುವಾರ ನಡೆಯುವ ವಾರದ ಸಂತೆ ಸಹ ಹಲವು ದಶಕಗಳಿಂದ ಇದೆ. ವಿವಾದಿತ ಪ್ರದೇಶದಲ್ಲಿ ಸಂತೆ ನಡೆದುಕೊಂಡು ಬಂದಿತ್ತು. ಆದರೆ, ತೀರ ಕೆಸರಿನಿಂದ ತುಂಬಿದ್ದ ಸ್ಥಳದಲ್ಲೆ ಸಂತೆ ನಡೆಸುವುದು ಕಷ್ಟ ಎಂಬ ಕಾರಣಕ್ಕೆ ೨೦೦೩ ರಲ್ಲಿ ಅಂದಿನ ಶಾಸಕರಾಗಿದ್ದ ಬಿ.ಬಿ ಶಿವಪ್ಪ ಸಂತೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿದ್ದರು.

ಹಲವರಿಗೆ ಸಂಕಷ್ಟ:

ವಿವಾದಿತ ೨.೦೮ ಎಕರೆ ಪ್ರದೇಶದಲ್ಲಿ ಪುರಸಭೆ ಜಾಗ ಎಂಬ ಕಾರಣದಿಂದ ಹಲವರು ರಾತ್ರೋರಾತ್ರಿ ಗ್ಯಾರೇಜ್ ನಿರ್ಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಸದ್ಯ ನ್ಯಾಯಲಯದ ತೀರ್ಪು ಖಾಸಗಿ ವ್ಯಕ್ತಿಯ ಪರವಾಗಿ ಬಂದಿರುವುದು ಹಲವು ಗ್ಯಾರೇಜ್ ಮಾಲೀಕರ ನಿದ್ರೆ ಹಾಳು ಮಾಡಿದೆ.

ಹಣ ಪೋಲು:

ಸದ್ಯ ವಿವಾಧಿತ ಜಾಗದಲ್ಲಿ ೧೦ನೇ ಹಣಕಾಸು ಅನುದಾನದಲ್ಲಿ ಸುಮಾರು ಒಂದು ಕೋಟಿ ರು. ಹೆಚ್ಚಿನ ವೆಚ್ಚಮಾಡಿ ಮಾಂಸದ ಮಾರುಕಟ್ಟೆ ನಿರ್ಮಾಣ ಮಾಡಿದ್ದರೆ ಶೂನ್ಯ ಘನತ್ಯಾಜ್ಯ ಘಟಕ ಸಹ ಇದೆ. ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಈ ಕಟ್ಟಡಗಳು ಇಂದಿಗೂ ಉಪಯೋಗವಿಲ್ಲದೆ ಪಾಳುಬಿದ್ದಿದ್ದವು. ಆದರೆ. ಮುಂದೊಂದು ದಿನ ಇವುಗಳು ಸದ್ಭಳಕೆಯಾಗುವ ಆಶಯವಿತ್ತು. ಆದರೆ, ನ್ಯಾಯಾಲಯದ ತೀರ್ಪು ಕಟ್ಟಡದ ಬಳಕೆಗೆ ಕರಿನೆರಳಾಗಿದೆ.

ಶಾಸಕರಿಂದ ಸಭೆ:

ಸದ್ಯ ನ್ಯಾಯಾಲಯದ ತೀರ್ಪು ಖಾಸಗಿ ವ್ಯಕ್ತಿಯ ಪರವಾಗಿ ಬಂದಿರುವುದರಿಂದ ಪೆಬ್ರವರಿಯಲ್ಲಿ ನಡೆಯುವ ಜಾತ್ರೆ ವಸ್ತುಪ್ರದರ್ಶನ ನಡೆಸುವ ಸಂಬಂದ ಕಳೆದ ಎರಡು ದಿನಗಳ ಹಿಂದೆ ಶಾಸಕ ಸೀಮೆಂಟ್ ಮಂಜು ಅಧ್ಯಕ್ಷತೆಯಲ್ಲಿ ಪುರಸಭೆಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆಯಾದರೂ ಸಭೆಯಲ್ಲಿ ಜಾಗ ನಿಗದಿಪಡಿಸಲು ಸಾದ್ಯವಾಗಿಲ್ಲ.

ಜಾತ್ರೆ ನಡೆಸುವ ವಿಚಾರವಾಗಿ ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಲಾಗಿದೆಯಾದರೂ ಜಾಗ ನಿಗದಿಪಡಿಸಲು ಸಾಧ್ಯವಾಗಿಲ್ಲ. ಇನ್ನೆರೆಡು ದಿನಗಳಲ್ಲಿ ಸ್ಥಳ ನಿಗಧಿಪಡಿಸಲಾಗುವುದು.

ಸಿಮೆಂಟ್ ಮಂಜು. ಶಾಸಕ.

ನಿರಂತರ ೪೦ ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ದೊರಕಿದ್ದು ಶೀಘ್ರದಲ್ಲೆ ಭೂಮಿಯನ್ನು ವಶಕ್ಕೆ ಪಡೆಯಲಿದ್ದೇವೆ.

ನಂಜುಂಡಶೆಟ್ಟಿ. ಜಮೀನು ಮಾಲೀಕ.