ನಾಡ ಕಚೇರಿಯಲ್ಲಿ ಶೌಚಾಲಯವೇ ಇಲ್ಲ

| Published : Sep 03 2024, 01:40 AM IST

ಸಾರಾಂಶ

ಚಿಲಕಲನೇರ್ಪು ನಾಡಕಚೇರಿಯಲ್ಲಿ ಕೆಲವೊಮ್ಮೆ ಸರ್ವರ್ ಡೌನ್‌ ಆಗುವ ಕಾರಣ ಸಕಾಲದಲ್ಲಿ ತಮಗೆ ಅವಶ್ಯವಿರುವ ದಾಖಲೆ ಪಡೆದುಕೊಳ್ಳಲು ಸಾಧ್ಯವಾಗದೆ ಕಾದು ನಿಲ್ಲುವಂತಹ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ನಿಸರ್ಗದ ಕರೆ ಬಂತೆಂದರೆ ದೇವರೇ ಗತಿ. ಏಕೆಂದರೆ ಇಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ.

ಕನ್ನಡಪ್ರಭ ವಾರ್ತೆ ಚೇಳೂರು

ಚಿಲಕಲನೇರ್ಪು ನಾಡ ಕಚೇರಿಗೆ ವಿವಿಧ ದಾಖಲೀತಿ, ಕೆಲಸಕ್ಕಾಗಿ ಆಗಮಿಸುವ ಸಾರ್ವಜನಿಕರು ಇಲ್ಲಿ ಶೌಚಾಲಯ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ.

ನೂತನ ಚೇಳೂರು ತಾಲೂಕಿಗೆ ಸೇರಿದ ಚಿಲಕಲನೇರ್ಪು ನಾಡ ಕಚೇರಿಗೆ ಪ್ರಮುಖವಾಗಿ ಆದಾಯ, ಜಾತಿ ದೃಢೀಕರಣ ಪತ್ರ, ಪಡಿತರ ಚೀಟಿ, ಆರ್‌ಟಿಸಿ ಮತ್ತಿತರ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಲು ನೆಮ್ಮದಿ ಕೇಂದ್ರಕ್ಕೆ ಆಗಮಿಸುವವರ ಸಂಖ್ಯೆ ಬಹಳಷ್ಟಿದೆ.ಸಕಾಲಕ್ಕೆ ಕೆಲಸ ಆಗುವುದಿಲ್ಲ

ಕೆಲವೊಮ್ಮೆ ಸರ್ವರ್ ಡೌನ್‌ ಆಗುವ ಕಾರಣ ಸಕಾಲದಲ್ಲಿ ತಮಗೆ ಅವಶ್ಯವಿರುವ ದಾಖಲೆ ಪಡೆದುಕೊಳ್ಳಲು ಸಾಧ್ಯವಾಗದೆ ಕಾದು ನಿಲ್ಲುವಂತಹ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ನಿಸರ್ಗದ ಕರೆ ಬಂತೆಂದರೆ ದೇವರೇ ಗತಿ. ಏಕೆಂದರೆ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಶೌಚಾಲಯದ ವ್ಯವಸ್ಥೆ ಇಲ್ಲ. ಅದರಲ್ಲೂ ಮಹಿಳೆಯರ ಪಾಡು ಹೇಳತೀರದು. ಕೇಲವೋಮ್ಮಮಹಿಳೆಯರು ಪುಟ್ಟ ಮಕ್ಕಳನ್ನು ಹೊತ್ತು ಸರದಿ ಸಾಲಿನಲ್ಲಿ ನಿಂತಿಕೊಂರುತ್ತಾರೆ. ಒಂದು ವೇಳೆ ಶೌಚಾಲಯಕ್ಕೆ ಹೋಗಬೇಕಾದರೆ ಎಲ್ಲಿಗೆ ಹೋಗುವುದು ಎಂಬ ಆತಂಕ ಮೂಡುತ್ತದೆ.

ನಿರ್ಮಾಣ ಹಂತದಲ್ಲೇ ದುಸ್ಥಿತಿ

ಈ ರೀತಿಯ ಸಮಸ್ಯೆಗಳನ್ನು ಎದುರಿಸಿದ ಕೆಲವರು ಬಹಿರಂಗವಾಗಿಯೇ ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದರೂ ಸಂಬಂಧಿಸಿವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ನಾಡಕಚೇರಿ ಹಿಂಬಾಗದಲ್ಲಿ ಈಗಾಗಲೆ ಸಾರ್ವಜನಿಕರಿಗೆ ಒಂದು ಸಣ್ಣ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಇದು ಸುಮಾರು ಒಂದು ವರ್ಷದಿಂದಲೂ ದುಸ್ಥಿತಿಯಲ್ಲಿದೆ. ನೂತನ ನಾಡಕಚೇರಿ ಕಟ್ಟಡ ಪ್ರಾರಂಭ ಮಾಡಿ ವರ್ಷ ಕಳೆಯುತ್ತ ಬಂದರೂ ಕಚೇರಿಯ ಅಧಿಕಾರಿಗಳು ಇದುವರೆಗೆ ಶೌಚಾಲಯವನ್ನು ದುರಸ್ತಿ ಮಾಡಿಸುವ ಗೋಜಿಗೆ ಹೋಗಿಲ್ಲ.

ಬಸ್ ನಿಲುಗಡೆಗೆ ಮನವಿ

ಚಿಲಕಲನೇರ್ಪು ಗ್ರಾಮದಿಂದ ಸುಮಾರು ೫೦೦ ಮೀಟರ್ ದೂರದಲ್ಲಿ ನಾಡಕಚೇರಿ ಇದ್ದು, ಸಾರ್ವಜನಿಕರು ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಹೋಗಬೇಕಾದರೆ ಅಲ್ಲಿ ಬಸ್ ಕೂಡ ನಿಲ್ಲಿಸುವುದಿಲ್ಲ, ಹೀಗಾಗಿ ಚಿಲಕಲನೇರ್ಪು ಗ್ರಾಮದಲ್ಲಿ ಇಳಿದು ಅರ್ಧ ಕಿಲೋ ಮೀಟರ್ ನಡೆದುಕೊಂಡು ಹೋಗಬೇಕು. ಕಚೇರಿ ಬಳಿ ಒಂದು ಜೆರಾಕ್ಸ್ ಅಂಗಡಿಯೂ ಇಲ್ಲ. ಹೀಗಾಗಿ ಜೆರಾಕ್ಸ್ ಪ್ರತಿಗಳನ್ನು ಮಾಡಿಸಲು ಅರ್ಧ ಕಿಮೀ ದೂರ ಹೋಗಬೇಕು. ಆದ್ದರಿಂದ ನಾಡ ಕಚೇರಿ ಬಳಿ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.