ಸಾರಾಂಶ
ಕರ್ಣಾಟಕ ಬ್ಯಾಂಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೇವಲ ಸುಳ್ಳು ಸುದ್ದಿ
ಕಾರವಾರ: ಕರ್ಣಾಟಕ ಬ್ಯಾಂಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೇವಲ ಸುಳ್ಳು ಸುದ್ದಿ ಎಂದು ಬ್ಯಾಂಕಿನ ಕುಮಟಾ ಕ್ಲಸ್ಟರ್ ಹೆಡ್ ರಂಜಿತ್ ಶೆಟ್ಟಿ ಹೇಳಿದ್ದಾರೆ.ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ಕೆಲವು ದಿನಗಳಿಂದ ಕರ್ನಾಟಕ ಬ್ಯಾಂಕ್ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುತ್ತಿರುವುದು ಗಮನಕ್ಕೆ ಬಂದಿದೆ. 101 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕರ್ನಾಟಕ ಬ್ಯಾಂಕ್ ಕುರಿತು ವಿವೇಚನಾ ರಹಿತವಾಗಿ ಪ್ರಕಟಿಸಲಾಗಿರುವ ಈ ಸುದ್ದಿಗಳು ಸಂಪೂರ್ಣವಾಗಿ ದುರುದ್ದೇಶಪೂರಿತವಾಗಿವೆ. ಗ್ರಾಹಕರಲ್ಲಿ ಗೊಂದಲ ಮತ್ತು ಆತಂಕ ಸೃಷ್ಟಿಸುವ ಉದ್ದೇಶದಿಂದ ಕೂಡಿದೆ ಎಂದರು.
ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ. ಕರ್ಣಾಟಕ ಬ್ಯಾಂಕ್ 101 ವರ್ಷಗಳಿಂದಲೂ ನಿರಂತರವಾಗಿ ಲಾಭ ಗಳಿಸುತ್ತಾ ಬಂದಿದೆ. ನಮ್ಮ ಬ್ಯಾಂಕ್‌ನ ಮೊದಲ ಆದ್ಯತೆ ಯಾವಾಗಲೂ ಠೇವಣಿದಾರರ ಹಣದ ಸುರಕ್ಷತೆ ಮತ್ತು ಭದ್ರತೆಯಾಗಿದೆ. ಗ್ರಾಹಕರ ನಂಬಿಕೆ, ವಿಶ್ವಾಸ ಮತ್ತು ಸಾಮಾಜಿಕ ಬದ್ಧತೆಗೆ ಪ್ರಸಿದ್ಧಿಯಾಗಿರುವ ಕರ್ನಾಟಕ ಬ್ಯಾಂಕ್ ಅತ್ಯಂತ ಸುದೃಢವಾಗಿದೆ ಎಂದು ನಾವು ನಮ್ಮ ಗ್ರಾಹಕರಿಗೆ ಸ್ಪಷ್ಟಪಡಿಸಲು ಬಯಸುತ್ತೇವೆ. ಪ್ರಸ್ತುತ, ಕರ್ಣಾಟಕ ಬ್ಯಾಂಕ್ ಶೇ.19.85ಕ್ಕಿಂತ ಹೆಚ್ಚಿನ ಬಂಡವಾಳ ಸಾಮರ್ಥ್ಯ ಅನುಪಾತವನ್ನು ಹೊಂದಿದ್ದು, ಇದು ನಮ್ಮ ಬಲಿಷ್ಠವಾದ ಆರ್ಥಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ:
ಬ್ಯಾಂಕಿಗೆ ಹಾನಿ ಉಂಟು ಮಾಡುವ ಉದ್ದೇಶದಿಂದ ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ ಗಾಳಿಸುದ್ದಿಗಳನ್ನು ಹಬ್ಬಿಸಿರುವ ಮಾಧ್ಯಮ, ಇಂತಹ ಆಧಾರರಹಿತ ಗಾಳಿಸುದ್ದಿಗಳನ್ನು ಪ್ರಕಟಿಸುವ ಮೊದಲು ಬ್ಯಾಂಕಿನ ಯಾವುದೇ ಅಧಿಕಾರಿಯನ್ನು ಸಂಪರ್ಕಿಸಿಲ್ಲ. ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಲು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಚಾನೆಲ್‌ನ ವಿರುದ್ಧ ಬ್ಯಾಂಕ್ ಕಾನೂನು ಕ್ರಮ ಕೈಗೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಿದರು.ಸಾರ್ವಜನಿಕರಿಗೆ ಮನವಿ:
ಸಾರ್ವಜನಿಕರು ಮತ್ತು ನಮ್ಮ ಗ್ರಾಹಕರು ಬ್ಯಾಂಕ್‌ನ ಅಧಿಕೃತ ಪ್ರಕಟಣೆಗಳನ್ನು ಮಾತ್ರ ಪರಿಗಣಿಸುವಂತೆ ನಾವು ಮನವಿ ಮಾಡುತ್ತೇವೆ. ವದಂತಿಗಳನ್ನು ನಿರ್ಲಕ್ಷಿಸಿ, ಯಾವುದೇ ಸುಳ್ಳು ಮಾಹಿತಿಗೆ ಕಿವಿಗೊಡಬೇಡಿ. ನಂಬಿಕೆ, ಸ್ಥಿರತೆ ಮತ್ತು ಸೇವೆಯು ಕರ್ನಾಟಕ ಬ್ಯಾಂಕ್‌ನ ಆಧಾರಸ್ತಂಭಗಳಾಗಿವೆ. ಬ್ಯಾಂಕ್ ಸಂಪೂರ್ಣ ಸುರಕ್ಷಿತ, ಸುಭದ್ರವಾಗಿದೆ ಎಂದರು.ಕಾರವಾರ ಬ್ರಾಂಚ್‌ನ ಹಿರಿಯ ವ್ಯವಸ್ಥಾಪಕ ಗೌತಮ್ ಶೆಟ್ಟಿ ಇದ್ದರು.