ಕನ್ನಡಪ್ರಭ ವಾರ್ತೆ ಕಾಗವಾಡ ಶಿಕ್ಷಣ, ನೀರಾವರಿ, ಆರೋಗ್ಯ, ವಿದ್ಯುತ್ ಕ್ಷೇತ್ರಗಳಿಗೆ ವಿಶೇಷ ಅದ್ಯತೆ ನೀಡಿರುವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅಥಣಿ ವಿಧಾನಸಭಾ ಮತಕ್ಷೇತ್ರದ ಅಣಿ ಅಬ್ಬಿಹಾಳದಲ್ಲಿ ಸೋಮವಾರ ₹3.5 ಕೋಟಿ ವೆಚ್ಚದಲ್ಲಿ ಅಬ್ಬಿಹಾಳ ರಸ್ತೆ ಸುಧಾರಣೆ, ದರೂರ ಖವಟಕೊಪ್ಪ ರಸ್ತೆ ಕಾಮಗಾರಿ ಮತ್ತು ದರೂರ ಗ್ರಾಮದ ಬನ್ನಿವಾರಿ ತೋಟದ ವಸತಿಗೆ ನಿರಂತರ ವಿದ್ಯುತ್ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಶಿಕ್ಷಣ, ನೀರಾವರಿ, ಆರೋಗ್ಯ, ವಿದ್ಯುತ್ ಕ್ಷೇತ್ರಗಳಿಗೆ ವಿಶೇಷ ಅದ್ಯತೆ ನೀಡಿರುವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ವಿಧಾನಸಭಾ ಮತಕ್ಷೇತ್ರದ ಅಣಿ ಅಬ್ಬಿಹಾಳದಲ್ಲಿ ಸೋಮವಾರ ₹3.5 ಕೋಟಿ ವೆಚ್ಚದಲ್ಲಿ ಅಬ್ಬಿಹಾಳ ರಸ್ತೆ ಸುಧಾರಣೆ, ದರೂರ ಖವಟಕೊಪ್ಪ ರಸ್ತೆ ಕಾಮಗಾರಿ ಮತ್ತು ದರೂರ ಗ್ರಾಮದ ಬನ್ನಿವಾರಿ ತೋಟದ ವಸತಿಗೆ ನಿರಂತರ ವಿದ್ಯುತ್ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಅಥಣಿ ತಾಲೂಕಿನ ಸವದಿ, ಯಲ್ಲಡಗಿ, ಸಂಕೋನಹಟ್ಟಿ, ಪಾರ್ಥನಹಳ್ಳಿ ಹತ್ತಿರ ಮತ್ತು ತೆಲಸಂಗ ಗ್ರಾಮಗಳಲ್ಲಿ 110 ಕೆವಿ ಸ್ಟೇಶನ್‌ಗಳು ಮಂಜೂರಾಗಿದ್ದು, ಈಗಾಗಲೇ ಯಲ್ಲಡಗಿ ಗ್ರಾಮದಲ್ಲಿ 110 ಕೆವಿ ಸ್ಟೇಶನ್‌ಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಇನ್ನುಳಿದ ಎಲ್ಲ ಸ್ಟೇಶನ್‌ಗಳಿಗೂ ಶಂಕುಸ್ಥಾಪನೆ ನೆರವೇರಿಸಲಾಗುವುದು. ಇದರಿಂದ ವಿದ್ಯುತ್ ಸಮಸ್ಯೆ ಶಾಶ್ವತವಾಗಿ ಕಡಿಮೆಯಾಗಲಿದೆ ಎಂದರು.

ಅಂದಾಜು 3.50 ಲಕ್ಷ ಎಕರೆಗೆ ಮತ್ತು 25 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸುವ ಹಿಪ್ಪರಗಿ ಆಣೆಕಟ್ಟೆಯ ಹಿನ್ನೀರು ಆಣೆಕಟ್ಟಿನ ಗೇಟ್ ಕಿತ್ತು ಹೋದ ಪರಿಣಾಮ ಅಂದಾಜು 2.75 ಟಿಎಂಸಿ ನೀರು ಹರಿದು ಹೋಗಿತ್ತು. ಹೀಗಾಗಿ, ಬೇಸಿಗೆಯಲ್ಲಿ ನೀರಿನ ಕೊರತೆಯಾಗುತ್ತದೆ ಎಂದು ಎಲ್ಲರೂ ಆತಂಕಕ್ಕೀಡಾಗಿದ್ದರು. ಆದರೆ, ಸದ್ಯದ ಸ್ಥಿತಿ ಗಮನಿಸಿದಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ. ಯಾರೂ ಅತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಅಥಣಿ ಪಟ್ಟಣದ 260 ಕಿ ಮೀ ಉದ್ದದ ವಿದ್ಯುತ್ ವೈರ್‌ಗಳನ್ನು ತೆರವುಗೊಳಿಸಿ ಕೇಬಲ್ ಅಳವಡಿಸುವ ಯೋಜನೆಗೆ ಚಾಲನೆ ನೀಡಲಾಗುವುದು ಮತ್ತು 460 ಕೋಟಿ ಅನುದಾನದ ಅಥಣಿ ಪಟ್ಟಣದ ಯುಜಿಡಿ ಯೋಜನೆ ಕೂಡ ಮಂಜೂರಾತಿ ಹಂತದಲ್ಲಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಕಬ್ಬು ಬೆಳೆಯುವ ತಾಲೂಕು ಎನ್ನುವ ಹೆಗ್ಗಳಿಕೆ ಅಥಣಿ ತಾಲೂಕಿಗಿದೆ. ಪೂರ್ವಭಾಗದ 9 ಕೆರೆಗಳನ್ನು ತುಂಬಿಸಿದ ಪರಿಣಾಮ ನೀರಿನ ಕೊರತೆ ಇಲ್ಲದಂತಾಗಿದೆ. ಜೊತೆಗೆ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಪೂರ್ಣಗೊಂಡ ನಂತರ ಒಟ್ಟಾರೆ ನೀರಿನ ಸಮಸ್ಯೆ ಬಗೆ ಹರಿದಂತಾಗುವುದು. ಈ ಯೋಜನೆ ಪೂರ್ಣಗೊಂಡ ನಂತರ ಅಥಣಿ ತಾಲೂಕಿನಲ್ಲಿ ಸುಮಾರು ಒಂದು ಕೋಟಿ ಟನ್ ಕಬ್ಬು ಬೆಳೆ ಬೆಳೆಯುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳಾದ ಗುರುರಾಜ ಸಂಪಣ್ಣವರ, ಎಸ್.ಎ.ಪಾರ್ಥನಹಳ್ಳಿ, ಎಮ್.ಎಸ್.ಅವಟಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಮಗದುಮ್, ಗುತ್ತಿಗೆದಾರರಾದ ರಾಜು ಆಲಬಾಳ, ಅರ್ಜುನ ನಾಯಿಕ, ಅಮೀರ ಖತೀಬ್, ಶಿವರುದ್ರ ಘೂಳಪ್ಪನವರ, ಮಲ್ಲಿಕಾರ್ಜುನ ದಳವಾಯಿ, ಶಿವು ಆಸಂಗಿ, ರಾಜು ಮರಡಿ, ಶಿವಾನಂದ ನಾಯಿಕ, ಶಿವಪುತ್ರ ನಾಯಿಕ, ಮಹಾಂತೇಶ ಐಗಳಿಮಠ, ಪುಟ್ಟು ಶಿಂಧೆ, ಸುರೇಶ ಮಾಯಣ್ಣವರ, ವಿನಾಯಕ ಬಾಗಡಿ, ನಾಥಗೌಡ ಪಾಟೀಲ, ಅಣ್ಣಪ್ಪ ಚೌಗಲಾ, ಜಗದೀಶ ದಳವಾಯಿ, ಬಾಳಪ್ಪ ಗುಮತಾಜ, ಮಲ್ಲಿಕಾರ್ಜುನ ದಳವಾಯಿ ಸೇರಿ ಅನೇಕರು ಉಪಸ್ಥಿತರಿದ್ದರು.