ಸಾರಾಂಶ
ಮಹೇಶ ಛಬ್ಬಿ ಗದಗ
ದಿನನಿತ್ಯ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಲ್ಲಾಸ್ಪತ್ರೆ)ಗೆ ಜಿಲ್ಲೆಯಾದ್ಯಂತ ಸಾವಿರಾರು ಜನರು ಚಿಕಿತ್ಸೆಗಾಗಿ ಬಂದು ಹೋಗುತ್ತಾರೆ. ಆದರೆ ಇಲ್ಲಿ ಬಂದಂತಹ ಜನರು ಚಿಕಿತ್ಸೆ ಪಡೆದು ವಾಪಸ್ ತಮ್ಮ ತಮ್ಮ ಊರುಗಳಿಗೆ ತೆರಳಬೇಕೆಂದರೆ ಆಸ್ಪತ್ರೆಯಿಂದ ಮುಖ್ಯ ರಸ್ತೆಗೆ ಬಂದು ಬಸ್‌ಗಾಗಿ ಕಾಯುವಂತಾಗಿದೆ.ರಾಜ್ಯದಲ್ಲಿಯೇ ಮಾದರಿ ಜಿಲ್ಲಾಸ್ಪತ್ರೆಯಾಗಿ ಅಭಿವೃದ್ಧಿ ಹೊಂದುತ್ತಿರುವ ಆಸ್ಪತ್ರೆಗೆ ನಗರದಿಂದ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಆಸ್ಪತ್ರೆ ಕೂಗಳತೆಯಲ್ಲಿರುವ ಪಾಲಾ-ಬಾದಾಮಿ ಮುಖ್ಯರಸ್ತೆಯಲ್ಲಿ ಒಂದು ಬಸ್ ನಿಲ್ದಾಣವಿಲ್ಲ. ನಿತ್ಯ ಜಿಮ್ಸ್‌ಗೆ ಬರುವ ಸಾವಿರಾರು ವಿದ್ಯಾರ್ಥಿಗಳು, ರೋಗಿಗಳು ತಮ್ಮ ತಮ್ಮ ಊರುಗಳಿಗೆ ತೆರಳಬೇಕಾದರೆ ರಸ್ತೆಯ ಅಕ್ಕ-ಪಕ್ಕದಲ್ಲಿ ಬಿಸಿಲು, ಮಳೆ ಲೆಕ್ಕಿಸದೇ ಬಸ್ಸಿಗಾಗಿ ಕಾದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಲೆ, ಕೈ ಕಾಲುಗಳಿಗೆ ಬ್ಯಾಂಡೇಜ್ ಸುತ್ತಿಕೊಂಡ ರೋಗಿಗಳು ತಾಸು ಗಟ್ಟಲ್ಲೇ ಬಸ್ಸಿಗಾಗಿ ನೀರು ನೆರಳಲ್ಲದೇ ರಸ್ತೆಯಲ್ಲಿ ಕಾದು ಕುಳಿತಿರುವದನ್ನು ಕಂಡ ಇನ್ನುಳಿದ ಪ್ರಯಾಣಿಕರು ಮಮ್ಮಲ ಮರುಗಿ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.ಅತ್ಯಾಧುನಿಕ ಸೌಲಭ್ಯವುಳ್ಳ ಜಿಮ್ಸ್ ಆಸ್ಪತ್ರೆಗೆ ಜಿಲ್ಲೆ ಸೇರಿದಂತೆ ಅಕ್ಕ-ಪಕ್ಕದ ಜಿಲ್ಲೆಗಳ ಗಡಿ ಭಾಗದ ಗ್ರಾಮದವರು ಸಹ ಚಿಕಿತ್ಸೆಗಾಗಿ ಬರುತ್ತಾರೆ. ವೈದ್ಯಕೀಯ ಶಿಕ್ಷಣ ಪಡೆಯಲು ನಿತ್ಯ ನೂರಾರು ವಿದ್ಯಾರ್ಥಿಗಳು, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೆಲಸ ಮುಗಿಸಿ ತಮ್ಮ ಮನೆ, ಊರುಗಳಿಗೆ ತೆರಳಬೇಕಾದರೆ ಹೆಚ್ಚಿನ ಸಮಯ ಇಲ್ಲಿ ಬಸ್‌ಗಾಗಿಯೇ ಕಾಯಬೇಕಾದ ಸ್ಥಿತಿ ಇದೆ.
ನಗರದಿಂದ ದೂರವಿರುವ ಜಿಲ್ಲಾಸ್ಪತ್ರೆ ಆವರಣದಲ್ಲಿ ಒಂದು ಬಸ್ ನಿಲ್ದಾಣವಿದ್ದರೂ ಅದು ನಿಷ್ಪ್ರಯೋಜಕ ಸ್ಥಿತಿಯಲ್ಲಿದೆ. ನಗರ ಸಾರಿಗೆಯಿಂದ ಜಿಲ್ಲಾಸ್ಪತ್ರೆಗೆ ಬೆಳರೆಣಿಕೆಯಷ್ಟು ಮಾತ್ರ ಬಸ್‌ಗಳಿವೆ. ಹಾಗಾಗಿ ಆಸ್ಪತ್ರೆಯ ಸಿಬ್ಬಂದಿ, ರೋಗಿಗಳು, ವೈದ್ಯ ವಿದ್ಯಾರ್ಥಿಗಳು ಪಾಲಾ ಬಾದಾಮಿ ರಸ್ತೆಗೆ ಬಂದು ನಿಂತು ಬಸ್ ಹಿಡಿಯಬೇಕಾಗಿದೆ. ಮೊದಲೇ ತುಂಬಿ ಬರುವ ಬಸ್‌ಗಳು ಇಲ್ಲಿ ನಿಲ್ಲುವುದೇ ಇಲ್ಲ. ಇದರಿಂದ ಆಟೋ, ಖಾಸಗಿ ವಾಹನಗಳಲ್ಲಿ ದುಬಾರಿ ಹಣ ತೆತ್ತು ಸಾಗಬೇಕಾಗಿದೆ.ಆದ್ದರಿಂದ ಪಾಲಾ- ಬಾದಾಮಿ ರಸ್ತೆಯಲ್ಲಿ ನಗರಸಭೆ ಅಥವಾ ಸಾರಿಗೆ ಸಂಸ್ಥೆಯವರು ಬಸ್ ನಿಲ್ದಾಣವೊಂದನ್ನು ನಿರ್ಮಿಸಬೇಕೆಂಬುದು ಜನರ ಆಗ್ರಹವಾಗಿದೆ.
ನಿತ್ಯ ಜಿಮ್ಸ್ (ಜಿಲ್ಲಾಸ್ಪತ್ರೆ)ಗೆ ಬರುವ ಸಾವಿರಾರು ರೋಗಿಗಳು ಚಿಕಿತ್ಸೆ ಪಡೆದು ವಾಪಸ್ ಊರಿಗೆ ತೆರಳಬೇಕೆಂದರೆ ಮುಖ್ಯ ರಸ್ತೆಯಲ್ಲಿಯೇ ಬಸ್ಸಿಗಾಗಿ ಕಾದು ನಿಲ್ಲಬೇಕು. ಇಲ್ಲಿ ಬಸ್ ನಿಲ್ದಾಣವಿಲ್ಲ, ರೋಗಿಗಳು ನಿಲ್ಲಲು ಶಕ್ತರಿಲ್ಲದೆ ತಲೆ ಸುತ್ತು ಬಂದು ಬಿದ್ದ ಎಷ್ಟು ಘಟನೆಗಳು ನಡೆದಿವೆ. ಜನಪ್ರತಿನಿಧಿಗಳು ಬಸ್ ನಿಲ್ದಾಣ ನಿರ್ಮಿಸಿ ಇಲ್ಲಿಗೆ ಬರುವ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದುದಾವುದ್ ಜಮಾಲ್ ತಿಳಿಸಿದ್ದಾರೆ.ಬಸ್ ನಿಲ್ದಾಣ ನಿರ್ಮಾಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ವಾಕರಸಾ ಸಂಸ್ಥೆಯ ಉಪಾಧ್ಯಕ್ಷ ಪೀರಸಾಬ್ ಕೌತಾಳ ಜಿಲ್ಲಾಸ್ಪತ್ರೆ ಹಾಗೂ ಅಂಜುಮನ್ ಕಾಲೇಜು ಬಳಿ ಬಸ್ ಸೇಲ್ಟರ್ ನಿರ್ಮಾಣ ಮಾಡುವ ಬಗ್ಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸೇಲ್ಟರ್ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ವಿಭಾಗೀಯ ಅಧಿಕಾರಿ ಡಿ.ಎಂ.ದೇವರಾಜು ತಿಳಿಸಿದ್ದಾರೆ.