ದೇಶದಲ್ಲಿ ಇನ್ನೂ ಇದೆ ಹೆಣ್ಣು-ಗಂಡು ನಡುವಿನ ಅಸಮಾನತೆ, ತಾರತಮ್ಯ: ದರ್ಶನ್ ಪುಟ್ಟಣ್ಣಯ್ಯ

| Published : Mar 30 2025, 03:04 AM IST

ದೇಶದಲ್ಲಿ ಇನ್ನೂ ಇದೆ ಹೆಣ್ಣು-ಗಂಡು ನಡುವಿನ ಅಸಮಾನತೆ, ತಾರತಮ್ಯ: ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಸಂವಿಧಾನದಲ್ಲಿ ಹೆಣ್ಣುಮಕ್ಕಳಿಗೂ ಸಹ ಸಮಾನ ಅವಕಾಶ, ಮೂಲ ಸೌಕರ್ಯ ಒದಗಿಸಿಕೊಟ್ಟಿದೆ. ಆದರೆ, ಮಹಿಳೆಯರಿಗೆ ಇದನ್ನು ಸಮರ್ಪಕವಾಗಿ ಒದಗಿಸಿಕೊಡುವಲ್ಲಿ ವಿಫಲವಾಗಿದೆ. ಹೆಣ್ಣುಗಂಡು ಇಬ್ಬರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟರೆ ಹೆಣ್ಣುಮಕ್ಕಳು ಸಹ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಭಾರತ ವಿಶ್ವ ಮಟ್ಟದಲ್ಲಿ ಪ್ರಗತಿ ಸಾಧನೆ ಮಾಡುತ್ತಿದ್ದರೂ ದೇಶದಲ್ಲಿ ಹೆಣ್ಣು-ಗಂಡುಗಳ ನಡುವಿನ ಅಸಮಾನತೆ, ತಾರತಮ್ಯ ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ, ತಾಲೂಕು ಪಂಚಾಯ್ತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಹೆಣ್ಣು ಭ್ರೂಣಹತ್ಯೆ, ಮುಟ್ಟಿನ ನೈರ್ಮಲ್ಯ ನಿರ್ವಹಣೆ, ಪೌಷ್ಟಿಕ ಆಹಾರ ಹಾಗೂ ಕಾನೂನು ಸೇವೆಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಭಾರತ ಸಂವಿಧಾನದಲ್ಲಿ ಹೆಣ್ಣುಮಕ್ಕಳಿಗೂ ಸಹ ಸಮಾನ ಅವಕಾಶ, ಮೂಲ ಸೌಕರ್ಯ ಒದಗಿಸಿಕೊಟ್ಟಿದೆ. ಆದರೆ, ಮಹಿಳೆಯರಿಗೆ ಇದನ್ನು ಸಮರ್ಪಕವಾಗಿ ಒದಗಿಸಿಕೊಡುವಲ್ಲಿ ವಿಫಲವಾಗಿದೆ. ಹೆಣ್ಣುಗಂಡು ಇಬ್ಬರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟರೆ ಹೆಣ್ಣುಮಕ್ಕಳು ಸಹ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ ಎಂದರು.

ಹೆಣ್ಣು-ಗಂಡು ನಡುವೆ ಸಮಾಜದಲ್ಲಿರುವ ಅಸಮಾನತೆಯನ್ನು ಮನೆಗಳಲ್ಲಿ ಹೋಗಲಾಡಿಸಬಹುದು. ಮನೆಗಳಲ್ಲಿ ಶಿಕ್ಷಣ ಸೇರಿದಂತೆ ಕ್ಷೇತ್ರದಲ್ಲೂ ಇಬ್ಬರಿಗೂ ಸಮಾನ ಅವಕಾಶ ಕಲ್ಪಿಸಿಕೊಡುವ ಕೆಲಸವನ್ನು ಪೋಷಕರು ಮಾಡಬೇಕು ಎಂದರು.

ಹೆಣ್ಣು ಮಕ್ಕಳಿಗೂ ಸಹ ಹೆಚ್ಚಿನ ಪ್ರೋತ್ಸಾಹ ಕೊಟ್ಟು ಮುನ್ನಡೆಸಿದರೆ ಸಮಾಜದಲ್ಲಿ ಇರುವ ಅಸಮಾನತೆ ಹೋಗಲಾಡಿಸಬಹುದು. ಹೆಣ್ಣುಮಕ್ಕಳು ಸಹ ತಮಗೆ ಸಿಕ್ಕಂತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು, ಎಲ್ಲಾ ಕ್ಷೇತ್ರದಲ್ಲೂ ಉದ್ಯೋಗ ಸೃಷ್ಟಿ ಮಾಡಿಕೊಂಡು ಸಾಧನೆಯತ್ತ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ತಾಪಂ ಇಒ ಲೋಕೇಶ್‌ಮೂರ್ತಿ ಮಾತನಾಡಿ, ಹೆಣ್ಣು-ಗಂಡಿನ ಅಸಮಾನತೆ ಎನ್ನುವುದು ಹೆಣ್ಣು ಭ್ರೂಣದಿಂದಲೇ ಆರಂಭವಾಗುತ್ತಿದೆ. ಇದರಿಂದ ಸಮಾಜದಲ್ಲಿ ಹೆಚ್ಚಾಗಿ ಹೆಣ್ಣುಭ್ರೂಣ ಹತ್ಯೆಯಂತ ಕೃತ್ಯಗಳು ಜರುಗುತ್ತಿವೆ ಎಂದು ವಿಷಾದಿಸಿದರು.

ಮನೆಗಳಲ್ಲಿ ತಾರತಮ್ಯ ಮಾಡಬಾರದು, ಗಂಡು-ಹೆಣ್ಣು ಇಬ್ಬರಿಗೂ ಸಮಾನ ಶಿಕ್ಷಣ ಕೊಡಿಸಬೇಕು. ಹೆಣ್ಣು ಮಕ್ಕಳಿಗೆ ಸಾಕಷ್ಟು ಅವಕಾಶ ಕೊಟ್ಟರು ಸಹ ಕೆಲವರು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಮಹಿಳೆಯರು ಸಿಕ್ಕಿ ಅವಕಾಶವನ್ನು ಒಳಸಿಕೊಂಡು ಸಮಾಜದ ಪ್ರಗತಿಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಡಾ.ಶಿಲ್ಪಶ್ರೀ ಮಾತನಾಡಿ, ಕಾನೂನಿನಲ್ಲಿ ಕಠಿಣ ಕ್ರಮ ಜಾರಿಗೊಳಿಸಿದ್ದರೂ ಸಹ ಸಮಾಜದಲ್ಲಿ ಹೆಣ್ಣುಭ್ರೂಣ ಹತ್ಯೆಗಳು ನಡೆಯುತ್ತಿರುವುದು ವಿಷಾಧಕರ. ಸಾರ್ವಜನಿಕರು ಜಾಗೃರಾಗಬೇಕು. ಇಂತಹ ಕೃತ್ಯದಿಂದ ದೂರ ಇರಬೇಕು ಎಂದರು.

ಇದೇ ವೇಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಮಹಿಳಾ ಕ್ರೀಡಾಕೂಟಗಳಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಮಾರಂಭದಲ್ಲಿ ತಹಸೀಲ್ದಾರ್ ಸಂತೋಷ್‌ಕುಮಾರ್, ಸಿಡಿಪಿಒ ಪೂರ್ಣೀಮಾ, ಟಿಎಚ್‌ಒ ಡಾ.ಸಿ.ಎ.ಅರವಿಂದ್, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಸನ್ನ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೋಮಲ, ನಿಲಯಪಾಲಕರಾದ ನಂದಕುಮಾರ್, ಚಂದ್ರಕಲಾ ಸೇರಿದಂತೆ ಹಲವರು ಇದ್ದರು.