ಗಂಗಾವಳಿ ನದಿಯಲ್ಲಿ ಲಾರಿ ಇರುವುದು ಖಚಿತ

| Published : Jul 25 2024, 01:16 AM IST

ಗಂಗಾವಳಿ ನದಿಯಲ್ಲಿ ಲಾರಿ ಇರುವುದು ಖಚಿತ
Share this Article
  • FB
  • TW
  • Linkdin
  • Email

ಸಾರಾಂಶ

ಕಣ್ಮರೆಯಾದ ಲಾರಿಯಲ್ಲಿದ್ದ 32 ಸಾಗುವಾನಿ ಕಟ್ಟಿಗೆ ತುಂಡುಗಳು ಸಮುದ್ರದಲ್ಲಿ ಪತ್ತೆಯಾಗಿದ್ದರಿಂದ ಲಾರಿ ಗಂಗಾವಳಿ ನದಿಯಲ್ಲೇ ಇದೆ ಎಂಬುದು ಖಚಿತವಾಗಿದ್ದು, ಗುರುವಾರ ಕಾರ್ಯಾಚರಣೆ ತೀವ್ರಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಅಂಕೋಲಾ

ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಣ್ಮರೆಯಾದ ಲಾರಿ ಗಂಗಾವಳಿ ನದಿಯಲ್ಲಿ ಶೇಖರಣೆಗೊಂಡ ಮಣ್ಣಿನಡಿ ಹುದುಗಿರುವುದು ಖಚಿತವಾಗಿದೆ. ಆದರೆ ನಿರ್ದಿಷ್ಟ ಸ್ಥಳ ಹಾಗೂ ಲಾರಿ ಹೊರಕ್ಕೆ ತರಲು ಗುರುವಾರ ಕಾರ್ಯಾಚರಣೆ ನಡೆಯಲಿದೆ. ಕಣ್ಮರೆಯಾದವರ ಶೋಧಕ್ಕಾಗಿ ಬೂಮ್ ಯಂತ್ರ ಬುಧವಾರ ಬೆಳಗ್ಗೆಯಿಂದಲೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಘಟನೆ ನಡೆದು 9 ದಿನ ಕಳೆದಿದ್ದು ಹತ್ತಾರು ಸವಾಲುಗಳ ನಡುವೆ ಕಾರ್ಯಾಚರಣೆ ನಡೆದಿದೆ.

ಗುಡ್ಡದ ಮಣ್ಣಿನ ರಾಶಿಯಲ್ಲಿ ಹುದುಗಿ ಹೋಗಿರುವ ಬೆಂಜ್ ಟ್ರಕ್ ಹಾಗೂ ಸಿಲುಕಿಕೊಂಡಿರುವ 3 ಜನರನ್ನು ಹೊರತೆಗೆಯಲು ಕಳೆದ ಎಂಟು ದಿನಗಳಿಂದ ಹತ್ತಾರು ಬಗೆಯ ಪ್ರಯತ್ನವನ್ನು ಮಾಡಲಾಗಿದೆ. ಆದರೆ ಗಂಗಾವಳಿ ನದಿ ದಂಡೆಯಿಂದ ಸುಮಾರು 130 ಅಡಿಗಳಷ್ಟು ಉದ್ದ ಹಾಗೂ 300 ಅಡಿಗಳಷ್ಟು ವಿಶಾಲವಾಗಿ ಹರಡಿಕೊಂಡಿರುವ ಮಣ್ಣಿನ ರಾಶಿಯಲ್ಲಿ ತುಂಬಿಕೊಂಡಿರುವ ಕಲ್ಲು ಬಂಡೆಗಳು ಕಾರ್ಯಾಚರಣೆಗೆ ಅಡ್ಡಿಯಾಗಿ ಪರಿಣಮಿಸಿದೆ.

ಹುದುಗಿಕೊಂಡಿರುವ ಬೆಂಜ್ ಲಾರಿಯನ್ನು ರೆಡಾರ್ ಬಳಸಿ ಶೋಧ ಮಾಡಲು ಮುಂದಾಗಿದ್ದರು. ಆದರೆ ಒಣಮಣ್ಣಿನಲ್ಲಿ ಶೋಧ ಕಾರ್ಯದ ವರದಿಯನ್ನು ಮಾತ್ರವೇ ನೀಡುವ ರೆಡಾರ್ ತೇವಾಂಶವಿರುವ ಮಣ್ಣಿನಲ್ಲಿರುವ ಮಾಹಿತಿ ಒದಗಿಸಲಾರದೇ ಕೈಗೊಂಡ ಪ್ರಯತ್ನ ವಿಫಲವಾದಂತಾಗಿದೆ.

ಆದರೆ ಕಣ್ಮರೆಯಾದ ಲಾರಿಯಲ್ಲಿದ್ದ 32 ಸಾಗುವಾನಿ ಕಟ್ಟಿಗೆ ತುಂಡುಗಳು ಸಮುದ್ರದಲ್ಲಿ ಪತ್ತೆಯಾಗಿದ್ದರಿಂದ ಲಾರಿ ಗಂಗಾವಳಿ ನದಿಯಲ್ಲೇ ಇದೆ ಎಂಬುದು ಖಚಿತವಾಗಿದ್ದು, ಗುರುವಾರ ಕಾರ್ಯಾಚರಣೆ ತೀವ್ರಗೊಳ್ಳಲಿದೆ.

ಈ ನಡುವೆ ನೌಕಾಪಡೆಯ ಹೆಲಿಕ್ಯಾಪ್ಟರ್‌ ಸಹ ಬುಧವಾರ ಬೆಳಗ್ಗೆ 9.20ರಿಂದ 20 ನಿಮಿಷಗಳ ಶಿರೂರು ಸಮೀಪ ಹಾರಾಟ ನಡೆಸಿ ಶೋಧ ಕಾರ್ಯ ನಡೆಸಿದೆ. ಅಂಕೋಲಾದಲ್ಲೂ ಹೆಲಿಕಾಪ್ಟರ್ ಸುತ್ತು ಹೊಡೆದಿದೆ. ಕಟ್ಟಿಗೆ ತುಂಡುಗಳು ಪತ್ತೆ

ಕಣ್ಮರೆಯಾದ ಲಾರಿಯಲ್ಲಿದ್ದ ಕಟ್ಟಿಗೆ ತುಂಡುಗಳಲ್ಲಿ 32 ತುಂಡುಗಳು ಅಗ್ರಗೋಣ ಬಳಿಯ ಸಮುದ್ರದಲ್ಲಿ ಪತ್ತೆಯಾಗಿವೆ. ಹೀಗಾಗಿ ಲಾರಿ ನದಿಯಲ್ಲಿ ಮುಳುಗಿರುವುದು ಸ್ಪಷ್ಟವಾಗಿದೆ. ದುರಂತ ಸಮಯದಲ್ಲಿ ಲಾರಿಯ ಕ್ಯಾಬಿನ್‌ನಲ್ಲಿ ಚಾಲಕ ಅರ್ಜುನ್ ಮಲಗಿದ್ದ. ದುರಂತಕ್ಕೆ ಮುನ್ನ ಲಾರಿ ಅಂಕೋಲಾದಿಂದ ಶಿರೂರಿನತ್ತ ತೆರಳಿರುವುದು ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿದೆ.

ಇಂಟರನೆಟ್ ಸ್ಥಗಿತ:

ಗುಡ್ಡ ಕುಸಿದ ಮಣ್ಣನ್ನು ತೆರವುಗೊಳಿಸುವ ವೇಳೆ ಇಂಟರ್‌ನೆಟ್ ಸಂಪರ್ಕದ ತಂತಿಗಳು ಕತ್ತರಿಸಲ್ಪಟ್ಟಿದ್ದರಿಂದ ಇಡೀ ಅಂಕೋಲಾದಲ್ಲಿ ಇಂಟರ್‌ನೆಟ್ ವ್ಯತ್ಯಯವಾಗಿದೆ. ಕುಮಟಾದಿಂದ ಕೇಬಲ್‌ಗಳು ಅಂಕೋಲಾಕ್ಕೆ ಬಂದಿತ್ತು. ಈಗ ಇಂಟರ್‌ನೆಟ್ ಕಂಪನಿಗಳು ಯಲ್ಲಾಪುರದಿಂದ ಸಂಪರ್ಕ ಕಲ್ಪಿಸಲು ಪ್ರಯತ್ನ ಆರಂಭಿಸಿವೆ. ಭಾರಿ ಮಣ್ಣನ್ನು ಕ್ಷಣಾರ್ಧದಲ್ಲಿ ಮೇಲಕ್ಕೆತ್ತಲಿದೆ

ಬೂಮ್‌ ಯಂತ್ರಕ್ಕೆ ಶಾಸಕ ಸತೀಶ ಸೈಲ್‌ ಬುಧವಾರ ಬೆಳಗ್ಗೆ ಪೂಜೆ ಮಾಡಿ ಕಾರ್ಯಾಚರಣೆಗೆ ಚಾಲನೆ ನೀಡಿದರು. ಬೆಳಗ್ಗೆ 11 ಗಂಟೆಯಿಂದ ಸಂಜೆ 6.30 ವೇಳೆಯ ತನಕವು ಬೂಮ್ ಯಂತ್ರ ಕಾರ್ಯಾಚರಣೆ ನಡೆಸಿತು. ಉದ್ದನೆಯ ಕೊಂಡಿಯನ್ನು ಹೊಂದಿರುವ ಬೂಮ್ ಯಂತ್ರ ಭೂಮಿಯ ಒಳ ಭಾಗದಲ್ಲಿ ಸುಮಾರು 70 ಅಡಿಗಳಷ್ಟು ಆಳಕ್ಕಿಳಿದು ಟನ್ ಭಾರದ ಮಣ್ಣನ್ನು ಕ್ಷಣಮಾತ್ರದಲ್ಲಿ ಹೊರಹಾಕಿತು.ಇಂದು ಕಾರ್ಯಾಚರಣೆ ಯಶಸ್ವಿ

ನಾಳೆ(ಗುರುವಾರ) ಟ್ರಕ್ ಶೋಧ ಕಾರ್ಯ ಯಶಸ್ವಿಗೊಳಸುತ್ತೇವೆ. ಬುಧವಾರ ಬೂಮ್ ಯಂತ್ರದಿಂದ ಟ್ರಕ್ ಹಾಗೂ ನಾಪತ್ತೆಯಾದವರ ಪತ್ತೆಗೆ ಶೋಧ ನಡೆಸಿದ್ದವು. ಮಣ್ಣು ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಲಾರಿ ಇರುವಿಕೆಯ ನಿಖರ ಸ್ಥಳ ತಿಳಿದಿಲ್ಲ. ದೆಹಲಿ ಹಾಗೂ ಬೆಂಗಳೂರಿನಿಂದ ರಾಷ್ಟ್ರೀಯ ಡಿಟೆಕ್ಟರ್ ಏಜೆನ್ಸಿಯ ತಜ್ಞರು ಗುರುವಾರ ಮಧ್ಯಾಹ್ನ 1 ಗಂಟೆಯ ಒಳಗಾಗಿ ಎಲ್ಲಿ ಲಾರಿ ಹುದಗಿದೆ ಎಂದು ನಿಖರವಾಗಿ ಮಾಹಿತಿ ನೀಡಲಿದ್ದಾರೆ. ಹೀಗಾಗಿ ಟ್ರಕ್ ಶೋಧ ಕಾರ್ಯ ಗುರುವಾರ ಯಶಸ್ವಿಗೊಳ್ಳಲಿದೆ ಎಂದು ಶಾಸಕ ಸತೀಶ ಸೈಲ್‌ ತಿಳಿಸಿದ್ದಾರೆ.ಡಿಟೆಕ್ಟರ್‌ನಿಂದ ಕಾರ್ಯಾಚರಣೆ

ಬುಧವಾರ ದೆಹಲಿ ಹಾಗೂ ಬೆಂಗಳೂರಿನಿಂದ ರಾಷ್ಟ್ರೀಯ ಡಿಟೆಕ್ಟರ್ ಏಜೆನ್ಸಿಯ ಕಾರ್ಯಾಚರಣೆ ನಡೆಸುವುದರಿಂದ ಎಲೆಕ್ಟ್ರಾನಿಕ್ ಸಾಧನದ ಉಪಯೋಗಕ್ಕೆ 300 ಮೀ.ವರೆಗೆ ನಿರ್ಬಂಧಿಸಲಾಗಿದೆ. ಈ ಪ್ರದೇಶದಲ್ಲಿ ಅಧಿಕಾರಿಗಳು ಸಹಿತ ಯಾರು ಕೂಡ ಎಲೆಕ್ಟ್ರಾನಿಕ್ ಮಷಿನ್ ತೆಗೆದುಕೊಂಡು ಹೋಗುವ ಹಾಗೆ ಇಲ್ಲ. ಹಾಗೆ ಗುರುವಾರ ಟ್ರಕ್ ಪತ್ತೆ ಆದರೂ ನಾಪತ್ತೆಯಾದ ಇನ್ನೂ ಮೂವರ ಪತ್ತೆಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.