ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರಕ್ಕೆ ಜುಲೈವರೆಗೆ ಕುಡಿಯುವ ನೀರು ಪೂರೈಕೆಗೆ ಅಗತ್ಯವಿರುವ ಪ್ರಮಾಣಕ್ಕಿಂತ ಎರಡು ಪಟ್ಟು ನೀರು ಕಾವೇರಿ ಜಲಾಶಯದಲ್ಲಿದ್ದು, ನಗರದ ಜನರು ಆತಂಕ ಪಡಬೇಕಾಗಿಲ್ಲ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ। ರಾಮಪ್ರಸಾತ್ ಮನೋಹರ್ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣ ಕಾವೇರಿ ಜಲಾಶಯದಲ್ಲಿ ನೀರಿಲ್ಲ. ಹೀಗಾಗಿ, ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ವದಂತಿ ಹಾಗೂ ಸುಳ್ಳಿ ಮಾಹಿತಿಗೆ ಬೆಂಗಳೂರಿಗರು ಕಿವಿಗೊಡ ಬಾರದು ಎಂದರು.
ಕಾವೇರಿ ಕಣಿವೆಯ ನಾಲ್ಕು ಜಲಾಶಯದಲ್ಲಿ ಒಟ್ಟು 34 ಟಿಎಂಸಿ ನೀರಿನ ಸಂಗ್ರಹವಿದೆ. ಮಾರ್ಚ್‌ನಿಂದ ಜುಲೈವರೆಗೆ ಬೆಂಗಳೂರಿನ ಕುಡಿಯುವ ನೀರಿಗೆ ಒಟ್ಟು 8 ಟಿಎಂಸಿ ನೀರು ಬೇಕಿದೆ. ಇನ್ನು ಇತರೆ ನಗರಗಳಿಗೆ ಕುಡಿಯುವ ನೀರು, ಕೈಗಾರಿಕೆ ಬಳಕೆ ನೀರು ಸೇರಿಸಿ ಒಟ್ಟಾರೆ 17 ಟಿಎಂಸಿ ನೀರು ಬೇಕಿದೆ. ಅದಕ್ಕಿಂತ ದುಪಟ್ಟು ನೀರು ಸಂಗ್ರಹವಿರುವುದರಿಂದ ಜನರು ಆತಂಕ ಪಡಬೇಕಿಲ್ಲ ಎಂದು ತಿಳಿಸಿದರು.
ನಗರಕ್ಕೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ 20 ಎಂಎಲ್‌ಡಿ ಸೇರಿದಂತೆ ಒಟ್ಟಾರೆ 1,470 ಎಂಎಲ್‌ಡಿ ನೀರನ್ನು ಬೆಂಗಳೂರಿಗೆ ಪೂರೈಕೆ ಮಾಡಲಾಗುತ್ತಿದೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿ ನೀರಿನ ಸಮಸ್ಯೆ ಇಲ್ಲ.
ಆದರೆ, ಕಾವೇರಿ ನೀರಿನ ಪೂರೈಕೆ ಇಲ್ಲದ 110 ಹಳ್ಳಿ ವ್ಯಾಪ್ತಿಯಲ್ಲಿ ಕೊಳವೆ ಬಾವಿಯಲ್ಲಿನ ನೀರಿನ ಮಟ್ಟ ಕಡಿಮೆ ಆಗಿರುವುದರಿಂದ ಶೇ.15ರಷ್ಟು ಅಂದರೆ, 150 ಎಂಎಲ್‌ಡಿ ನೀರಿನ ಕೊರತೆ ಉಂಟಾಗಿದೆ ಎಂದರು.ಮೇ-15ಕ್ಕೆ ಕಾವೇರಿ 5 ಹಂತಕ್ಕೆ ಚಾಲನೆ?
110 ಹಳ್ಳಿಗಳಿಗೆ 775 ಎಂಎಲ್‌ಡಿ ನೀರು ಪೂರೈಕೆಯ ಕಾವೇರಿ 5ನೇ ಹಂತದ ಯೋಜನೆಯನ್ನು ಮೇ 15ಕ್ಕೆ ಚಾಲನೆ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲಿಗೆ ಬೆಂಗಳೂರಿಗೆ ಪೂರೈಕೆ ಆಗುತ್ತಿರುವ ನೀರಿನ ಪ್ರಮಾಣ 2,225 ಎಂಎಲ್‌ಡಿಗೆ ಹೆಚ್ಚಾಗಲಿದೆ. ಆ ನಂತರ ಬೆಂಗಳೂರಿಗೆ ನೀರಿನ ಸಮಸ್ಯೆ ಇರುವುದಿಲ್ಲ. ಅಲ್ಲಿವರೆಗೆ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದು ಹೇಳಿದರು.ಕೆರೆಗಳಿಗೆ ಸಂಸ್ಕರಿಸಿದ ನೀರು
ನಗರದ ಕೆರೆಗಳಿಗೆ ಸಂಸ್ಕರಿಸಿ ನೀರನ್ನು ತುಂಬಿಸಿ ಆ ಮೂಲಕ ಅಂತರ್ಜಲ ಮರು ಪೂರ್ಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಾಯೋಗಿಕವಾಗಿ 6 ಕೆರೆಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಇದರಿಂದ ಅಂತರ್ಜಲಮಟ್ಟ ಹೆಚ್ಚಾಗಲಿದೆ ಎಂದು ತಿಳಿಸಿದರು.ಸಂಪುಗೆ ಸಂಸ್ಕರಿಸಿದ ನೀರು
ನೀರಿನ ಸಮಸ್ಯೆ ಇರುವ ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರಿಗೆ ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಮಧ್ಯಮ ವರ್ಗದವರು ವಾಸಿರುವ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾದ ಕಡೆ ಮನೆ ಮನೆಯ ಸಂಪುಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಮನವಿ ಬರುತ್ತಿವೆ.
ಆ ರೀತಿ ಮಂಡಳಿಯಿಂದ ಸಂಪುಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಿಲ್ಲ. ಆದರೆ, ಸಂಸ್ಕರಿಸಿದ ನೀರನ್ನು ಶುಲ್ಕ ಪಾವತಿಸಿ ಪಡೆಯಬಹುದಾಗಿದೆ. ಅದಕ್ಕಾಗಿ ವೆಬ್ ಅಪ್ಲಿಕೇಷನ್ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.ಟ್ಯಾಂಕರ್ ನೋಂದಣಿಗೆ
15ರವರೆಗೆ ಅವಕಾಶ: ನಗರದಲ್ಲಿನ ನೀರಿನ ಟ್ಯಾಂಕರ್ ನೋಂದಣಿಗೆ ಬಿಬಿಎಂಪಿ ಸೂಚಿಸಿತ್ತು. ಈವರೆಗೆ 1,530 ಟ್ಯಾಂಕರ್ ನೋಂದಣಿ ಆಗಿವೆ. ನೋಂದಣಿ ಮಾಡಿಕೊಂಡ ಟ್ಯಾಂಕರ್‌ಗಳಿಗೆ ಸ್ಟಿಕರ್ ಅಂಟಿಸಲಾಗುವುದು. ಜಿಲ್ಲಾಡಳಿತ ನಿಗದಿ ಪಡಿಸಿದ ದರದಲ್ಲಿ ನೀರು ಪೂರೈಕೆ ಮಾಡಬೇಕು. ಇನ್ನು ನೋಂದಣಿ ಅವಧಿಯನ್ನು ಮಾ.15ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಏರ್‌ಪೋರ್ಟ್, ಕೈಗಾರಿಕೆಗೆ ಶೇ.10ರಷ್ಟು ನೀರು ಕಡಿತ
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಬೃಹತ್ ನೀರು ಬಳಕೆ ಮಾಡುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಾರ್ಖಾನೆಗಳು ಸೇರಿದಂತೆ ಮೊದಲಾದವುಗಳಿಗೆ ಪೂರೈಕೆ ಮಾಡುವ ನೀರಿನ ಪ್ರಮಾಣದಲ್ಲಿ ಶೇ.10ರಷ್ಟು ನೀರಿನ ಪ್ರಮಾಣವನ್ನು ಕಡಿತಗೊಳಿಸುವುದಕ್ಕೆ ನಿರ್ಧರಿಸಲಾಗಿದೆ. ಈ ನೀರನ್ನು ಸಮಸ್ಯೆ ಇರುವ ಕಡೆ ಹಂಚಿಕೆ ಮಾಡಲಾಗುತ್ತದೆ.ನೀರಿನ ದುರ್ಬಳಕೆಗೆ
15ರಿಂದ ದಂಡ: ಕುಡಿಯುವ ನೀರಿನಲ್ಲಿ ವಾಹನ ಸ್ವಚ್ಛತೆ ಸೇರಿದಂತೆ ಇನ್ನಿತರೆ ನಿಷೇಧಿತ ಕಾರ್ಯಗಳಿಗೆ ಬಳಕೆಗೆ ₹5 ಸಾವಿರ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
ಮಾ.15ರಿಂದ ದಂಡ ವಿಧಿಸುವ ಕಾರ್ಯ ಚಾಲನೆ ನೀಡಲಾಗುವುದು. ಅಲ್ಲಿಯ ವರೆಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ. ಸಾರ್ವಜನಿಕರು ಈ ಸಂಬಂಧಿತ ದೂರುಗಳನ್ನು ಸಹಾಯವಾಣಿ ಸಂಖ್ಯೆ ಮೂಲಕ ನೀಡಬಹುದಾಗಿದೆ ಎಂದು ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ನೀರು ಬಳಕೆ ಬಗ್ಗೆ ಮಾರ್ಗಸೂಚಿ?
ನೀರಿನ ಸಮಸ್ಯೆ ಉಂಟಾಗಿರುವುದರಿಂದ ನೀರು ಬಳಕೆಯ ಬಗ್ಗೆ ಅಪಾರ್ಟ್‌ಮೆಂಟ್, ಹೋಟೆಲ್ ಸೇರಿದಂತೆ ಮೊದಲಾದವರಿಗೆ ಮಾರ್ಗಸೂಚಿ ರಚನೆ ಮಾಡುವುದಕ್ಕೆ ಚರ್ಚೆ ನಡೆಸಲಾಗುತ್ತಿದೆ. ನೀರು ಸಂರಕ್ಷಣೆ ಹಾಗೂ ಬಳಕೆ ಬಗ್ಗೆ ಸೂಚನೆಗಳನ್ನು ನೀಡಲಾಗುವುದು.
-ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷ, ಜಲಮಂಡಳಿ.