ಪುರುಷ-ಮಹಿಳೆಯಲ್ಲಿ ಪರಸ್ಪರ ಗೌರವ ಭಾವನೆ ಇರಲಿ: ಸಿಆರ್‌ಎಸ್

| Published : Apr 09 2025, 12:31 AM IST

ಪುರುಷ-ಮಹಿಳೆಯಲ್ಲಿ ಪರಸ್ಪರ ಗೌರವ ಭಾವನೆ ಇರಲಿ: ಸಿಆರ್‌ಎಸ್
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಮತ್ತು ರಾಜ್ಯಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಅವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಪುರುಷರು ಮತ್ತು ಮಹಿಳೆಯರಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ. ಪರಸ್ಪರ ಸಮನ್ವಯತೆಯಿಂದ ಇರಬೇಕು ಎನ್ನುವುದು ನನ್ನ ಆಶಯವಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಮೇಲೆ ಶೇ.೧೦ ರಷ್ಟು ಪುರುಷರು ದಬ್ಬಾಳಿಕೆ ಮಾಡಿದರೆ, ಮಹಿಳೆಯರು ಪುರುಷರ ಮೇಲೆ ಶೇ.೨ರಷ್ಟು ದಬ್ಬಾಳಿಕೆ ನಡೆಸಿರುವ ಪ್ರಕರಣಗಳು ಕಂಡುಬರುತ್ತವೆ. ಇಲ್ಲಿ ಯಾರ ಪರವಾಗಿಯೂ ಮಾತನಾಡುತ್ತಿಲ್ಲ. ಒಬ್ಬರ ಶ್ರೇಯಸ್ಸಿಗಾಗಿ ಪುರುಷ ಮಹಿಳೆಯರಿಗೆ ಬೆಂಬಲವಾಗಿ ಮಹಿಳೆಯರು ಪುರುಷರಿಗೆ ಹೆಗಲುಕೊಟ್ಟುನಿಂತಾಗ ದೌರ್ಜನ್ಯ, ದಬ್ಬಾಳಿಕೆ ಮರೆಯಾಗಿ ಸಾಮರಸ್ಯ ಮೂಡುತ್ತದೆ ಎಂದು ಹೇಳಿದರು.

ಸಾಧನೆ ಮಾಡಬೇಕೆಂದು ಮಹಿಳೆ ಪಣತೊಟ್ಟರೆ ಅವರು ಏನನ್ನು ಬೇಕಾದರೂ ಸಾಧನೆ ಮಾಡುತ್ತಾರೆ, ಅದಕ್ಕೆ ಉದಾಹರಣೆಗಳು ಸಾಕಷ್ಟು ನಮ್ಮ ನಡುವೆಯೇ ಸಿಗುತ್ತವೆ. ನಮ್ಮ ಜಿಲ್ಲೆಯಲ್ಲೂ ಅನೇಕ ಮಹಿಳಾ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಪಂ ಸಿಇಒ ಹುದ್ದೆ ಸೇರಿದಂತೆ ಅನೇಕ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಬಹುತೇಕ ಅಧಿಕಾರಿಗಳು ಮಧ್ಯಮ ಹಾಗೂ ರೈತಾಪಿ ವರ್ಗದಿಂದ ಬಂದಿರುವ ಹಿನ್ನೆಲೆ ಇದೆ. ಅವರು ಸಮಾಜದ ಜನರಿಗಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುವ ನಡೆ ಮೆಚ್ಚುವಂತದ್ದು ಎಂದು ಶ್ಲಾಘಿಸಿದರು.

ಜ್ಞಾನವಿಲ್ಲವೆಂದು ಸುಮ್ಮನೆ ಕುಳಿತುಕೊಳ್ಳುವುದು ತಪ್ಪು, ಸಾಮಾನ್ಯ ಜ್ಞಾನ ಇದ್ದರೂ ಕೂಡ ಸೇವೆ ನೀಡಬಹುದು. ತಮಿಳುನಾಡಿನ ಕಾಮರಾಜು ಎಂಬುವವರಿಗೆ ಶಿಕ್ಷಣವೇ ಇರಲಿಲ್ಲ ಅವರು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನಡೆಸಿ ಜನಪ್ರಿಯರಾಗಿದ್ದಾರೆ. ಇವರಿಗೆ ಶಿಕ್ಷಣ ಇಲ್ಲದೇ ಆಡಳಿತ ನೀಡಿರುವುದನ್ನು ಯಾರೂ ನೀಡಲಾಗಿಲ್ಲ ಎಂಬುದೇ ಸತ್ಯ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಶಾಸಕ ಪಿ.ರವಿಕುಮಾರ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್.ರಾಜಮೂರ್ತಿ, ಕುಮಾರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ರೂಪಶ್ರೀ, ಅಲ್ಪಸಂಖ್ಯಾತ ಇಲಾಖೆಯ ಜಿಲ್ಲಾ ಅಧಿಕಾರಿ ಮಧುಶ್ರೀ, ವಾರ್ತಾಧಿಕಾರಿ ನಿರ್ಮಲಾ ಭಾಗವಹಿಸಿದ್ದರು.

------------------------

ಮೈಕ್ರೋ ಫೈನಾನ್ಸ್‌ಗಳ ಬಗ್ಗೆ ಎಚ್ಚರದಿಂದಿರಿ: ಎಚ್‌ಡಿಕೆ

ಮೈಕ್ರೋ ಫೈನಾನ್ಸ್‌ಗಳ ಬಗ್ಗೆ ಮಹಿಳೆಯರು ಎಚ್ಚರದಿಂದ ಇರಬೇಕು. ಸುಲಭವಾಗಿ ಸಿಗುವ ಸಾಲಕ್ಕೆ ಕೈಚಾಚಿ ಸಂಕಷ್ಟಕ್ಕೆ ಸಿಲುಕಬಾರದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ಕೇಂದ್ರ ಮತ್ತು ರಾಜ್ಯಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಅವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು. ವಿವಿಧ ವೃತ್ತಿಗಳಲ್ಲಿ ಕೌಶಲ್ಯ ಸಾಧಿಸುವುದರೊಂದಿಗೆ ಸ್ವಾವಲಂಬಿ ಜೀವನ ನಡೆಸುವಂತೆ ಸಲಹೆ ನೀಡಿದರು.

ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಿಗಿಂತ ದೊಡ್ಡಮಟ್ಟದ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ಮಹಿಳೆಯರಿಗಾಗಿ ಒತ್ತಾಸೆಯಾಗಿ ನಿಂತು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿಯೊಂದು ಹಳ್ಳಿಗಳಲ್ಲೂ ಮಹಿಳೆಯರು ವಾರಕ್ಕೊಮ್ಮೆ ಗುಂಪು ಸೇರಿ ಸರ್ಕಾರದ ಯೋಜನೆಗಳ ಬಗ್ಗೆ ಚರ್ಚಿಸಿ ಅರಿವು ಮೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.