ಸಾರಾಂಶ
ಗ್ರಾಮ ಸಭೆಯಲ್ಲಿ ಗ್ರಾಮ ಲೆಕ್ಕಿಗ ಭರತ್ ಮೇಲೆ ಜನರ ಆರೋಪ
ಕನ್ನಡಪ್ರಭ ವಾರ್ತೆ ಹಳೇಬೀಡುಹೊಯ್ಸಳರ ನಾಡು ನನ್ನ ಬೇಲೂರು-ಹಳೇಬೀಡು-ಜಾವಗಲ್ ಕ್ಷೇತ್ರದಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯಿತಿಯ ಸಭೆಯಲ್ಲಿ ಸಾರ್ವಜನಿಕರ ತೊಂದರೆಗಳ ಬಗ್ಗೆ ಮುಕ್ತವಾಗಿ ಚರ್ಚಿಸುವ ಕಾರ್ಯಕ್ರಮವೇ ಗ್ರಾಮ ಸಭೆ ಎಂದು ಬೇಲೂರು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
ಹಳೇಬೀಡಿನ ಪಾರ್ವತಮ್ಮ ನಂಜೇಗೌಡ ಕಲ್ಯಾಣ ಮಂಟಪದಲ್ಲಿ ನೆಡೆದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. ೨೦೨೪-೨೫ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಗ್ಗೆ, ಜಲ ಜೀವನ್ ಮಿಷನ್ ಯೋಜನೆ, ಘನ ತ್ಯಾಜ್ಯ ವಿಂಗಡಣೆ ಬಗ್ಗೆ ವಿವರಿಸಿದರು.ಗ್ರಾಮದ ಜನರ ಕುಡಿಯುವ ನೀರು ವಿದ್ಯುತ್, ಚರಂಡಿ, ರಸ್ತೆ, ಬೀದಿ ದೀಪ, ಮಂತಾದ ಸೌಲಭ್ಯ ಸರಿಯಾಗಿ ಎಲ್ಲಾ ವಾರ್ಡ್‌ಗಳಿಗೆ ತಲುಪುತ್ತಿಲ್ಲ ಎಂಬ ದೂರು. ಹಳೇಬೀಡು ಸರ್ಕಾರಿ ಆಸ್ಪತ್ರೆಯ ಮೆಡಿಕಲ್ ನಲ್ಲಿ ಔಷದಿ-ಮಾತ್ರೆ ಇದ್ದರೂ ಹೊರ ಭಾಗದ ಮೆಡಿಕಲ್‌ಗೆ ಚೀಟಿ ಬರೆಯುತ್ತಾರೆ (ಕೆಲವು ವೈಧ್ಯರು ಮಾತ್ರ) ಎಂಬ ಆರೋಪ. ಪಂಚಾಯಿತಿ ವಾರ್ಡ್‌ಗಳಿಗೆ ಅನುಸಾರವಾಗಿ ಕಟ್ಟಡ ಮತ್ತು ನಿವೇಶನಗಳಿಗೆ ಮನಬಂದಂತೆ ಕಂದಾಯ ವಸೂಲಿ ಮಾಡುತ್ತಿದ್ದಾರೆ. ಸರ್ಕಾರ ನಿಗದಿ ಮಾಡಿರುವ ಕಂದಾಯದ ಪಟ್ಟಿಯನ್ನು ಪಂಚಾಯತಿ ಮುಂದೆ ನಾಮಫಲಕ ಹಾಕದೇ ಹೆಚ್ಚು ಕಂದಾಯ ವಸೂಲಿ ಮೊದಲಾದ ದೂರುಗಳನ್ನು ಗ್ರಾಮ ಸಭೆಯಲ್ಲಿ ಶಾಸಕರಿಗೆ ಗ್ರಾಮಸ್ಥರು ಸಲ್ಲಿಸಿದರು,
ಶಾಸಕ ಸುರೇಶ್ ಪ್ರತಿಕ್ರಿಯಿಸಿ, ಪಂಚಾಯಿತಿಯವರು ತಮಗೆ ಬರುವ ಆದಾಯ ಮತ್ತು ವೆಚ್ಚಗಳನ್ನು ಸರಿಯಾಗಿತಿಳಿಸಬೇಕು ಮತ್ತು ಸರ್ಕಾರ ನಿಗದಿ ಮಾಡಿರುವ ಕಂದಾಯವನ್ನು ಮಾತ್ರ ವಸೂಲಿ ಮಾಡಬೇಕು. ಅದಕ್ಕಿಂತ ಹೆಚ್ಚು ವಸೂಲಿ ಮಾಡುವುದು ಬೇಡ ಎಂದು ಹೇಳಿದರು.ಇಂದಿರಾ ಆವಾಸ್ ಯೋಜನೆ, ಜನತಾ ಮನೆ ಯೋಜನೆ, ಹುಡ್ಕೊ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳು ಬಡವರಿಗೆ, ಸೂರು ಕಳೆದುಕೊಂಡವರಿಗೆ ಮಳೆ ಹಾನಿಯಾದ ಸಂದರ್ಭದಲ್ಲಿ ಶೇಕಡಾವಾರು ಆಧರಿಸಿ ಕಂದಾಯ ಇಲಾಖೆ ಪರಿಹಾರ ನೀಡಲಾಗುತ್ತದೆ . ಮನೆ ಹಾನಿಗಳ ನೈಜ ವರದಿಯನ್ನು ನೀಡಿ ಪರಿಹಾರ ನೀಡಬೇಕು. ಆದರೆ ವಾಸ್ತವ ವರದಿನ್ನು ನೀಡಲು ಹೆಚ್ಚು ಹಣದ ಬೇಡಿಕೆಯಿಟ್ಟು ತಾಲೂಕು ಆಡಳಿತಕ್ಕೆ ಕಳುಹಿಸದೇ ಬಡವರಿಗೆ ಮೋಸ ಮಾಡುವ ನೀಚ ಕೆಲಸವನ್ನು ಗ್ರಾಮ ಲೆಕ್ಕಿಗ ಭರತ್ ಮಾಡುತ್ತಿದ್ದಾರೆ ಎಂದು ಮನೆ ಕಳೆದುಕೊಂಡ ಮಂಜುನಾಥ್ ಆರೋಪಿಸಿದರು.
ನಾಡ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಲಂಚ ನೀಡಿದರಷ್ಟೇ ಕೆಲಸವಾಗುತ್ತದೆ. ಪೌತಿ ಖಾತೆ, ವರ್ಗಾವಣೆ ಕೃಷಿ ಇಲಾಖೆ, ಭೂಸ್ವಾದೀನ ನಿವೃತ್ತಿ ವೇತನ ಪರಿಶೀಲನೆ , ಇನ್ನಿತರ ಯಾವುದೇ ಕೆಲಸಕಾರ್ಯಗಳನ್ನು ಸಾರ್ವಜನಿಕರು ಮಾಡಿಸಿಕೊಳ್ಳಲು ಹಣ ನೀಡಲೇಬೇಕಾದ ಪರಿಸ್ಥಿತಿ ಇದೆ ಎಂದು ಜನರು ಅಳಲು ತೋಡಿಕೊಂಡರು.ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ‘ಬಡವರ ಕಣ್ಣಿರು ಒರೆಸಲು ಸರ್ಕಾರಗಳು ಯೋಜನೆಗಳನ್ನು ಜಾರಿಗೆ ತಂದರೆ ಲಂಚ ಪಡೆದು ನೀಡುವ ಇಂತಹ ಅಧಿಕಾರಿಗಳು ಯಾವುದೇ ಕಾರಣಕ್ಕೂ ಇಲಾಖೆಯಲ್ಲಿ ಇರಬಾರದು. ನಿನಗೆ ಸರ್ಕಾರ ಸಂಬಳ ನೀಡಿದರೂ ನೀಚ ಕೆಲಸ ಮಾಡಿದರೆ ಅವರು ಉದ್ಯೋಗದಲ್ಲಿ ಇರಬಾರದು. ಬಡವರ , ನಿರಾಶ್ರಿತರ, ಕೂಲಿ ಕಾರ್ಮಿಕರ, ದಲಿತರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಲಂಚ ಪಡೆದರೆ ನಿಜಕ್ಕೂ ಬೇಸರದ ಸಂಗತಿ. ಈ ಸಂಬಂಧ ತಾಹಶೀಲ್ದಾರ್ ಜತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ, ಉಪಾಧ್ಯಕ್ಷೆ ಕವಿತಾ ರಮೇಶ್, ಇ.ಓ.ಸತೀಶ್, ಡಾ.ಅನಿಲ್ ಕುಮಾರ್, ಪಿ.ಡಿ.ಓ.ವಿರುಪಾಕ್ಷ, ಎಲ್ಲಾ ವಾರ್ಡಿನ ಗ್ರಾ.ಪಂ. ಸದಸ್ಯರು, ತಾಲೂಕಿನ ಅಧಿಕಾರಿಗಳು, ಗ್ರಾ ಪಂ.ಸಿಬ್ಬಂದಿ, ನಾಗರಿಕರು ಹಾಜರಿದ್ದರು.‘ನನ್ನ ಮೇಲೆ ಸುಮ್ಮನೆ ಆರೋಪ’
ಮಾಧ್ಯಮದೊಂದಿಗೆ ಮಾತನಾಡಿದ ಗ್ರಾಮಲೆಕ್ಕಿಗ ಭರತ್, ನಾನು ಯಾರ ಬಳಿ ಯಾವುದೇ ಹಣ ಪಡೆದಿಲ್ಲ. ಕೇಳಿಯೂ ಇಲ್ಲ . ಆದರೆ ವಿನಾ ಕಾರಣ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಮನೆ ಹಾನಿ ಅನುಸಾರವಾಗಿ ಪರಿಹಾರದ ಹಣ ನೀಡಲಾಗುತ್ತದೆ. ಮಂಜುನಾಥ್ ರವರ ಮನೆ ಶೇ ೧೫ ರಿಂದ ೨೦ ರಷ್ಟು ಮಾತ್ರ ಹಾನಿಯಾಗಿದೆ. ಅದಕ್ಕೆ ೭೫ ಕ್ಕಿಂತ ಹೆಚ್ಚು ಹಾನಿಯಾಗಿದೆ ಎಂದು ಹೇಳಿಕೆ ನೀಡಿ ಎಂದು ಒತ್ತಾಯಿಸಿದರು. ಒಪ್ಪದಿರುವುದಕ್ಕೆ ಆಪಾದನೆ ಮಾಡುತ್ತಿದ್ದಾರೆ ಎಂದು ಭರತ್ ತಿಳಿಸಿದರು.ಹಳೇಬೀಡು ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಬೇಲೂರು ಶಾಸಕ ಎಚ್ .ಕೆ ಸುರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ, ಉಪಾಧ್ಯಕ್ಷೆ ಕವಿತಾ ರಮೇಶ್, ಇ.ಓ.ಸತೀಶ್ ಗ್ರಾ.ಪಂ. ಸದಸ್ಯರು, ಅಧಿಕಾರಿಗಳು ಹಾಜರಿದ್ದರು.