ಸಾರಾಂಶ
ಬೆದರಿಕೆ ಹಾಕಿದ್ದ ವಿಮಾನ ಬೆಳಗ್ಗೆ 9.30ರ ಮಂಗಳೂರಿನಿಂದ ಹೊರಟು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ದುಬೈನಲ್ಲಿ ಇಳಿದಿದೆ. ಬಳಿಕ ತಪಾಸಣೆ ನಡೆಸಿದಾಗ ವಿಮಾನದಲ್ಲಿ ಯಾವುದೇ ಅನಾಹುತಕಾರಿ ವಸ್ತು ಪತ್ತೆಯಾಗಿಲ್ಲ ಎಂದು ನಿಲ್ದಾಣದ ಮೂಲಗಳು ತಿಳಿಸಿವೆ. ಬೆದರಿಕೆ ಸಂದೇಶಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ದೇಶದ ವಿವಿಧ ಭಾಗಗಳ ವಿಮಾನಗಳಿಗೆ ಭಾನುವಾರ ಬಂದ ಹುಸಿ ಬಾಂಬ್ ಬೆದರಿಕೆಯಲ್ಲಿ ಮಂಗಳೂರು-ದುಬೈ ಸಂಚಾರದ ಏರ್ ಇಂಡಿಯಾ ವಿಮಾನವೂ ಸೇರಿದೆ ಎಂಬುದು ಬೆಳಕಿಗೆ ಬಂದಿದೆ.ಟ್ವಿಟರ್ ಖಾತೆಯೊಂದರಲ್ಲಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಮಧ್ಯಾಹ್ನ 12.35ರ ಸುಮಾರಿಗೆ ಈ ಬಾಂಬ್ ಬೆದರಿಕೆಯ ಸಂದೇಶ ಟ್ವಿಟರ್ ನಲ್ಲಿ ಹಾಕಲಾಗಿದ್ದು, ‘ಸಿಫರ್ನಿಯಾ 111’ ಹೆಸರಿನ ಖಾತೆಯಿಂದ ಸಂದೇಶ ಬಂದಿದೆ. ದೇಶದ ವಿವಿಧಡೆಯ 6 ಏರ್ ಇಂಡಿಯಾ ವಿಮಾನಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು. ಮಂಗಳೂರಿನ ಏರ್ ಇಂಡಿಯಾ ಸಿಬ್ಬಂದಿ ಮಧ್ಯಾಹ್ನ 1.30ರ ವೇಳೆಗೆ ಸಂದೇಶ ಗಮನಿಸಿದ್ದಾರೆ. ತತ್‌ಕ್ಷಣ ಈ ಬಗ್ಗೆ ಬಜಪೆ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆದರಿಕೆ ಹಾಕಿದ್ದ ವಿಮಾನ ಬೆಳಗ್ಗೆ 9.30ರ ಮಂಗಳೂರಿನಿಂದ ಹೊರಟು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ದುಬೈನಲ್ಲಿ ಇಳಿದಿದೆ. ಬಳಿಕ ತಪಾಸಣೆ ನಡೆಸಿದಾಗ ವಿಮಾನದಲ್ಲಿ ಯಾವುದೇ ಅನಾಹುತಕಾರಿ ವಸ್ತು ಪತ್ತೆಯಾಗಿಲ್ಲ ಎಂದು ನಿಲ್ದಾಣದ ಮೂಲಗಳು ತಿಳಿಸಿವೆ. ಬೆದರಿಕೆ ಸಂದೇಶಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಈ ಹಿಂದೆಯೂ ಬಂದಿತ್ತು ಬೆದರಿಕೆ ಇಮೇಲ್: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಹಿಂದೆಯೂ ಹಲವು ಬಾರಿ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು.
ಕಳೆದ ಜೂನ್ 18ರಂದು ಮಧ್ಯಾಹ್ನ 12.43ಕ್ಕೆ ವಿಮಾನ ನಿಲ್ದಾಣದ ಇಮೇಲ್ ಐಡಿಗಳಿಗೆ ಬಂದಿರುವ ಸಂದೇಶದಲ್ಲಿ ಏರ್‌ಪೋರ್ಟ್‌ನಲ್ಲಿ ಬಾಂಬ್ ಇರಿಸಿದ್ದು ಕೆಲವೇ ಕ್ಷಣದಲ್ಲಿ ಸ್ಫೋಟಗೊಳ್ಳಲಿದೆ ಎಂದು ತಿಳಿಸಲಾಗಿತ್ತು. ಏಪ್ರಿಲ್ 29ರಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಕಚೇರಿಗೆ ಬೆದರಿಕೆ ಇ-ಮೇಲ್ ಬಂದಿತ್ತು. ಟೆರರೈಜರ್ಸ್ 111 ಸಂಘಟನೆಯ ಹೆಸರಿನಲ್ಲಿ ಇಮೇಲ್ ಸಂದೇಶ ಬಂದಿತ್ತು. 2023ರ ಡಿ. 26ರಂದು ರಾತ್ರಿ 11.59ಕ್ಕೆ xonocikonoci10@beeble. com ನಿಂದ ಬೆದರಿಕೆ ಮೇಲ್ ರವಾನೆಯಾಗಿತ್ತು. ಈ ಎಲ್ಲ ಬೆದರಿಕೆಗಳು ಹುಸಿಯಾಗಿದ್ದರೂ ಅದರ ಹಿಂದಿನ ದುಷ್ಕರ್ಮಿಗಳ ಪತ್ತೆ ಪೊಲೀಸರಿಗೆ ಸಾಧ್ಯವಾಗಿಲ್ಲ.