ಸಾರಾಂಶ
ಕಾಂಗ್ರೆಸ್ ಸರ್ಕಾರ ಕದ್ದು ಮುಚ್ಚಿ ನೀರನ್ನು ತಮಿಳುನಾಡಿಗೆ ಬಿಡುತ್ತಿದೆ, ಕಾಂಗ್ರೆಸ್ ಸರ್ಕಾರ ಬಂದ ನಂತರ ಕಾವೇರಿಗೂ ಉಳಿಗಾಲ ಇಲ್ಲ ಮಹಾದಾಯಿಗೂ ಉಳಿಗಾಲ ಇಲ್ಲ, ಕಾಂಗ್ರೆಸ್ ಸಚಿವರು ಕುರ್ಚಿ ಕಾದಾಟದಲ್ಲಿ ಸಮಯ ಕಳೆಯುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಕಾವೇರಿ ವಿಚಾರದಲ್ಲಿ ವಿರುದ್ಧವಾದ ತೀರ್ಪುಗಳು ಬರುತ್ತವೆ, ರೈತ ಸಂಘದವರು ಈಗಾಗಲೇ ನನ್ನನ್ನು ಮತ್ತು ಕುಮಾರಸ್ವಾಮಿಯವನ್ನು ಭೇಟಿ ಮಾಡಿದ್ದಾರೆ, ರೈತರು ನೂರಾರು ದಿನದಿಂದ ಧರಣಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಸೌಜನ್ಯಕ್ಕೂ ಅವರನ್ನು ಕರೆದು ಮಾತನಾಡಿಲ್ಲ, ಕರ್ನಾಟಕದ ಪರವಾಗಿ ಸರಿಯಾದ ವಾದ ಮಾಡಿಲ್ಲ, ಇದರಿಂದ ನಮಗೆ ಹಿನ್ನಡೆಯಾಗುತ್ತಿದೆ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಕದ್ದು ಮುಚ್ಚಿ ನೀರನ್ನು ತಮಿಳುನಾಡಿಗೆ ಬಿಡುತ್ತಿದೆ, ಕಾಂಗ್ರೆಸ್ ಸರ್ಕಾರ ಬಂದ ನಂತರ ಕಾವೇರಿಗೂ ಉಳಿಗಾಲ ಇಲ್ಲ ಮಹಾದಾಯಿಗೂ ಉಳಿಗಾಲ ಇಲ್ಲ, ಕಾಂಗ್ರೆಸ್ ಸಚಿವರು ಕುರ್ಚಿ ಕಾದಾಟದಲ್ಲಿ ಸಮಯ ಕಳೆಯುತ್ತಿದ್ದಾರೆ. ಯಾರು ಮುಖ್ಯಮಂತ್ರಿ ಆಗಬೇಕು, ಯಾರು ಉಪಮುಖ್ಯಮಂತ್ರಿಯಾಗಬೇಕು ಅನ್ನೋ ಕಚ್ಚಾಟದಲ್ಲಿದ್ದಾರೆ ಎಂದವರು ಲೇವಡಿ ಮಾಡಿದರು.
ಶುಕ್ರವಾರ ನಡೆದ ಹೋರಾಟದಲ್ಲಿ ನಮ್ಮನ್ನು ಹತ್ತಿಕ್ಕಲು ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ. ಪೊಲೀಸರ ತಡೆಯನ್ನು ಮೀರಿ ಸ್ಥಳಕ್ಕೆ ಹೋಗಿ ನಾನು ಪ್ರತಿಭಟನೆ ಮಾಡಿ ಬಂದಿದ್ದೇನೆ, ಅವರ ಗೊಡ್ಡು ಬೆದರಿಕೆಗಳಿಗೆ ನಾನು ಅಂಜುವುದಿಲ್ಲ. ಸಂವಿಧಾನವನ್ನು ರಕ್ಷಣೆ ಮಾಡುತ್ತೇವೆ ಅಂತಾರೆ ಇಲ್ಲಿ ಪ್ರಜಾಪ್ರಭುತ್ವ ರೀತಿ ಪ್ರತಿಭಚನೆಯನ್ನು ದಮನ ಮಾಡುತ್ತಾರೆ. ಇದು ಕಾಂಗ್ರೆಸಿನ ದುರುಳ ನೀತಿ ಎಂದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಘೋಷಿಸಿದ ಸಂವಿಧಾನ ಹತ್ಯಾ ದಿವಸ್‌ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ಕಾಂಗ್ರೆಸ್ ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ಹತ್ಯಾದಿವಾಸ್ ಘೋಷಣೆ ಮಾಡಿರುವುದು ಸೂಕ್ತವಾಗಿದೆ. ಅಂದು ಬಹಳಷ್ಟು ಜನ ಸತ್ತಿದ್ದಾರೆ, ನಾನು ಪೊಲೀಸ್ ಲಾಠಿ ಏಟು ತಿಂದಿದ್ದೇನೆ, ಜೈಲಿಗೆ ಹೋಗಿದ್ದೇನೆ, ಪತ್ರಕರ್ತರನ್ನೂ ಜೈಲಿಗೆ ಹಾಕಿದ್ದರು, ನ್ಯಾಯಾಧೀಶರಿಗೂ ತೀರ್ಪು ಬರೆಯಲು ಅವಕಾಶ ಕೊಡಲಿಲ್ಲ. ಅಂದು ಕಾಂಗ್ರೆಸ್ ಪ್ರಜಾಪ್ರಭುತ್ವದ ಕೊಲೆ ಮಾಡಿತ್ತು, ಆದ್ದರಿಂದ ತುರ್ತು ಪರಿಸ್ಥಿತಿ ಕಾಲಕಾಲಕ್ಕೆ ನೆನಪು ಆಗುತ್ತಾ ಇರಬೇಕು. ಆ ದೃಷ್ಟಿಯಿಂದ ಬಿಜೆಪಿ ದಿವಸ ಘೋಷಣೆ ಮಾಡಿದೆ ಸ್ವಾಗತಾರ್ಹ ಎಂದರು.