ಪಕ್ಷದಲ್ಲಿದ್ದುಕೊಂಡು ನಮಗೆ ಮೋಸ ಮಾಡಿ ದೂರಾದರು

| Published : Jun 08 2024, 12:30 AM IST

ಸಾರಾಂಶ

ನಮ್ಮ ಪಕ್ಷದಲ್ಲಿದ್ದುಕೊಂಡು ನಮಗೆ ಮೋಸ ಮಾಡಿದರು. ಇದು ಅಂತಿಂಥ ಮೋಸವಲ್ಲ, ಇದು ಅತ್ಯಂತ ದುಃಖಕರವಾದ ಮೋಸವಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಪರವಾಗಿ ಪ್ರಾಮಾಣಿಕ ಕೆಲಸ ಮಾಡಿ ಹತ್ತಿರವಾಗುತ್ತಾರೆ ಎಂದು ನಂಬಿದ್ದೇವು. ಆದರೆ, ನಮಗೆ ಮೋಸ ಮಾಡುವ ಮೂಲಕ ದೂರಾದರು ಎಂದು ಸಚಿವ ಸತೀಶ ಜಾರಕಿಹೊಳಿ ಅಸಮಧಾನ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಅಥಣಿ

ನಮ್ಮ ಪಕ್ಷದಲ್ಲಿದ್ದುಕೊಂಡು ನಮಗೆ ಮೋಸ ಮಾಡಿದರು. ಇದು ಅಂತಿಂಥ ಮೋಸವಲ್ಲ, ಇದು ಅತ್ಯಂತ ದುಃಖಕರವಾದ ಮೋಸವಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಪರವಾಗಿ ಪ್ರಾಮಾಣಿಕ ಕೆಲಸ ಮಾಡಿ ಹತ್ತಿರವಾಗುತ್ತಾರೆ ಎಂದು ನಂಬಿದ್ದೇವು. ಆದರೆ, ನಮಗೆ ಮೋಸ ಮಾಡುವ ಮೂಲಕ ದೂರಾದರು ಎಂದು ಸಚಿವ ಸತೀಶ ಜಾರಕಿಹೊಳಿ ಅಸಮಧಾನ ಹೊರಹಾಕಿದರು.

ಪಟ್ಟಣದ ಕಾಂಗ್ರೆಸ್ ಪಕ್ಷದ ಮುಖಂಡ ಸದಾಶಿವ ಬುಟಾಳಿ ನಿವಾಸದ ಆವರಣದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರವಾಗಿ ಪಕ್ಷ ನಿಷ್ಠೆಯಿಂದ ಕೆಲಸ ಮಾಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಿದ ಎಲ್ಲ ಮತದಾರರಿಗೆ, ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಸಂಸದರೊಬ್ಬರು ಹೇಗೆ ಜನಪರ ಕೆಲಸ ಮಾಡಬೇಕು ಎಂಬುವುದನ್ನು ತೋರಿಸುತ್ತೇವೆ ಎಂದು ತಿಳಿಸಿದರು.ನಿಮ್ಮ ಭಾಗದ ಪ್ರಮುಖ ಸಮಸ್ಯೆಗಳ ಬಗ್ಗೆ ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಸ್ಪಂದಿಸಲಿದ್ದಾರೆ. ಅಥಣಿಯಲ್ಲಿರುವ ಮೂಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಸದಾ ನಮ್ಮೊಂದಿಗೆ ಇರುವುದರಿಂದ ನಿಮ್ಮ ಸೇವೆಗೆ ನಾವು ಸದಾ ಸಿದ್ಧ. ನಮ್ಮ ಜನಪರ ಕಾರ್ಯಗಳನ್ನು ನೋಡಿ ನೀವು ನಮ್ಮನ್ನು ಆಯ್ಕೆ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಗಳಿಗೆ ನೇರವಾಗಿ ಅಥಣಿಗೆ ಬಂದು ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.ಬೇಸಿಗೆಯ ಕಾಲದಲ್ಲಿ ಪ್ರತಿವರ್ಷ ನೀರಿಗಾಗಿ ಪರದಾಡುವ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಹಿಡಕಲ್ ಡ್ಯಾಂ ನಿಂದ 2 ಟಿಎಂಸಿ ನೀರನ್ನು ಕೃಷ್ಣ ನದಿಗೆ ತರುವ ನಿಟ್ಟಿನಲ್ಲಿ ಮೊದಲ ಹಂತದ ಪ್ರಯತ್ನ ಮಾಡಿದ್ದೇವೆ. ಆದರೆ, ಹಳ್ಳದ ಮೂಲಕ ನದಿಗೆ ಹರಿಬಿಟ್ಟಿದ್ದರಿಂದ ಕೇವಲ ಶೇ.25ರಷ್ಟು ನೀರು ಮಾತ್ರ ನದಿಗೆ ಹಿಡಿದು ಬಂತು. ಮುಂಬರುವ ದಿನಗಳಲ್ಲಿ ನೀರು ಪೋಲಾಗದಂತೆ ಪೈಪ್‌ಲೈನ್‌ ಮೂಲಕ ನೀರು ಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸದಾಶಿವ ಬುಟಾಳಿ, ರಮೇಶ ಸಿಂದಗಿ, ದಿಗ್ವಿಜಯ ಪವಾರ ದೇಸಾಯಿ, ಸಿದ್ದಾರ್ಥ ಸಿಂಗೆ, ರಾವಸಾಬ ಐಹೊಳೆ, ಅಸ್ಲಂ ನಾಲಬಂದ, ರೇಖಾ ಪಾಟೀಲ, ಸುನಿತಾ ಐಹೊಳೆ, ರಾವಸಾಬ, ಮುಖಣಿ , ಬಸವರಾಜ ಬೂಟಾಳಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಅಥಣಿಯಲ್ಲಿ ಮೂಲ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಬಿಜೆಪಿಯಿಂದ ಬಂದವರು ನಮಗೆ ಮೋಸ ಮಾಡಿದರು. ನಮ್ಮವರೇ ನಮಗೆ ಮೋಸ ಮಾಡಿದ್ದರಿಂದ ಪ್ರಿಯಾಂಕಾ ಜಾರಕಿಹೊಳಿ ಗೆಲುವಿನ ಮತಗಳ ಅಂತರದಲ್ಲಿ ಕಡಿಮೆಯಾಗಿದೆ.

-ಸತೀಶ ಜಾರಕಿಹೊಳಿ, ಸಚಿವ.