ಕನ್ನಡಪ್ರಭ ವಾರ್ತೆ ಸೊರಬ

ವರದಕ್ಷಿಣೆ ಕಿರುಕುಳ ನೀಡಿ ಐದು ತಿಂಗಳ ಗರ್ಭಿಣಿ ಸೊಸೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿದ ಭೀಕರ ಘಟನೆ ತಾಲೂಕಿನ ಉಳವಿ ಹೋಬಳಿ ಹೊಡಬಟ್ಟೆ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೊರಬ ಠಾಣೆಯ ಪೊಲೀಸರು ಮೃತಳ ಅತ್ತೆ, ಮಾವ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆಯ ವಿವರ: ತಾಲೂಕಿನ ಹೊಡಬಟ್ಟೆ ಗ್ರಾಮದ ನಿವಾಸಿ ನವೀನ್ ಎಂಬುವವರ ಪತ್ನಿ ವೃತ್ತಿಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಶ್ವೇತಾ (೩೦) ಕೊಲೆಯಾದ ದುರ್ದೈವಿ. ಶ್ವೇತಾ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ. ಮಾರ್ಚ್ ೩೦ರಂದು ಪತಿ ನವೀನ್ ಮನೆಯಲ್ಲಿ ಶ್ವೇತಾ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ತೀವ್ರವಾಗಿ ಸುಟ್ಟಗಾಯಗಳಾಗಿದ್ದ ಅವರನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಏಪ್ರಿಲ್ ೧ ರಂದು ಶ್ವೇತಾ ಕೊನೆಯುಸಿರೆಳೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳ ಬಂಧನ: ಮೃತ ಶ್ವೇತಾ ಅವರ ಸಾವಿನ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಕ್ಷಿಣೆ ಕಿರುಕುಳ ಮತ್ತು ಹತ್ಯೆ ಆರೋಪದಡಿ ಸೊರಬ ಪೊಲೀಸರು ಸಣ್ಣಪ್ಪ (ಮಾವ), ಜಾನಕಿ (ಅತ್ತೆ), ಹೇಮಂತ್ (ಪತಿ ನವೀನ್ ಅಣ್ಣ)

ದಿವ್ಯಾ (ಹೇಮಂತ್ ಪತ್ನಿ) ನಾಲ್ವರನ್ನು ಬಂಧಿಸಿದ್ದಾರೆ.


ಅಂತಿಮ ಸಂಸ್ಕಾರ: ಏಪ್ರಿಲ್ ೧ರಂದು ಮೃತಪಟ್ಟ ಶ್ವೇತಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಏಪ್ರಿಲ್ ೨ರಂದು ನೆರವೇರಿಸಲಾಯಿತು. ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆಯೇ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಉಳವಿ ಗ್ರಾಮದ ಮಂಜಪ್ಪ ಮತ್ತು ನಾಗರತ್ನ ದಂಪತಿ ಪುತ್ರಿಯಾದ ಶ್ವೇತಾ ಉಳವಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಶ್ವೇತಾ ೨೦೨೦ರಲ್ಲಿ ಪೋಷಕರ ಸಮ್ಮತಿಯೊಂದಿಗೆ ಹೊಡಬಟ್ಟೆಯ ನವೀನ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರ ದಾಂಪತ್ಯಕ್ಕೆ ನಾಲ್ಕು ವರ್ಷದ ಪುಟ್ಟ ಹೆಣ್ಣು ಮಗುವಿದೆ.

ಶ್ವೇತ ಹೊಟ್ಟೆಯಲ್ಲಿದ್ದ ೫ ತಿಂಗಳ ಕಂದಮ್ಮ ಮತ್ತು ಅನಾಥವಾದ ಪುಟ್ಟ ಮಗಳ ಭವಿಷ್ಯಕ್ಕೆ ನ್ಯಾಯ ಸಿಗಬೇಕು ಎಂದು ಪೋಷಕರ ಆಗ್ರಹವಾಗಿದೆ.

ವರದಕ್ಷಿಣೆಗಾಗಿ ಕಿರುಕುಳ ನೀಡಿ, ಗರ್ಭಿಣಿ ಎಂಬ ಕರುಣೆಯೂ ಇಲ್ಲದೆ ಪೆಟ್ರೋಲ್ ಸುರಿದು ಹತ್ಯೆ ಮಾಡಿರುವುದು ತಾಲೂಕನ್ನು ಬೆಚ್ಚಿಬೀಳಿಸಿದೆ. ಈ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.