ಸಾರಾಂಶ
ಯುವತಿಯೊಬ್ಬಳು ತನ್ನ ಸ್ನೇಹಿತನನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ತೆರಳುವಾಗ ಹಿಂದಿನಿಂದ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಯುವತಿಯ ಸ್ನೇಹಿತನ ಕೈಯಲ್ಲಿದ್ದ ಐ-ಫೋನ್ ಕಿತ್ತುಕೊಂಡು ಪರಾರಿ ಆಗಿರುವ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಯುವತಿಯೊಬ್ಬಳು ತನ್ನ ಸ್ನೇಹಿತನನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ತೆರಳುವಾಗ ಹಿಂದಿನಿಂದ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಯುವತಿಯ ಸ್ನೇಹಿತನ ಕೈಯಲ್ಲಿದ್ದ ಐ-ಫೋನ್ ಕಿತ್ತುಕೊಂಡು ಪರಾರಿ ಆಗಿರುವ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಗರುಡಾಚಾರ್‌ಪಾಳ್ಯದ ರಾಮಾಂಜಿ ಲೇಔಟ್ ನಿವಾಸಿ ವೃಂದಾ ₹77 ಸಾವಿರ ಮೌಲ್ಯದ ಐ-ಫೋನ್ ಕಳೆದುಕೊಂಡವರು. ಇವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ದೂರುದಾರೆ ವೃಂದಾ ಮೇ 6ರ ಮುಂಜಾನೆ ಸುಮಾರು 1.10ಕ್ಕೆ ತನ್ನ ಸ್ನೇಹಿತ ಪಳನಿ ವೇಲನ್‌ನನ್ನು ತನ್ನ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ರಾಜಾಜಿನಗರದಿಂದ ಗುರುಡಾಚಾರ್‌ಪಾಳ್ಯದ ಕಡೆಗೆ ತೆರಳುತ್ತಿದ್ದರು.ಈ ವೇಳೆ ತಮ್ಮ ಐ-ಫೋನ್‌ನಲ್ಲಿ ರೂಟ್ ಮ್ಯಾಪ್ ಹಾಕಿ, ಹಿಂಬದಿ ಕುಳಿತಿದ್ದ ಪಳನಿ ವೇಲನ್ ಕೈಗೆ ಕೊಟ್ಟಿದ್ದರು. ಅಂಬೇಡ್ಕರ್ ವೀದಿಯಲ್ಲಿ ಲೋಕಾಯುಕ್ತ ಕಚೇರಿ ಬಳಿ ತೆರಳುವಾಗ ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಏಕಾಏಕಿ ಪಳನಿ ವೇಲನ್ ಕೈಯಲ್ಲಿದ್ದ ಐ-ಫೋನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.