ಸಾರಾಂಶ
ಚಿಪ್ಪು ಸುಡುವ ಉದ್ಯಮಗಳನ್ನ ಪ್ರಶ್ನಿಸಬೇಕಾದ ಕಂದಾಯ, ಪರಿಸರ, ಕೈಗಾರಿಕೆ ಇಲಾಖೆಗಳ ನಿರ್ಲಕ್ಷ್ಯಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಹಾಸನ ರಸ್ತೆಯಿಂದ ಅನಗೊಂಡನಹಳ್ಳಿ ಮಾರ್ಗ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಕೊಬ್ಬರಿ ಚಿಪ್ಪುಗಳನ್ನು ಕೃಷಿ ಭೂಮಿಯಲ್ಲಿ ಸುಡುವ ಕೈಗಾರಿಕೆಗಳು ಇದ್ದು ಇದರಿಂದ ಭುಗಿಲೇಳುತ್ತಿರುವ ದಟ್ಟ ಹೊಗೆಯಿಂದ ಕಿಲೋಮೀಟರ್‌ಗಟ್ಟಲೆ ಪರಿಸರಕ್ಕೆ ಧಕ್ಕೆಯಾಗುವುದರ ಜೊತೆಗೆ ವಿಪರೀತ ತಾಪಮಾನ ಉಂಟಾಗುತ್ತಿದ್ದು ಕೃಷಿ, ತೋಟಗಾರಿಕೆಗಳ ಇಳುವರಿ ಮೇಲೆ ತೀವ್ರ ಪ್ರಭಾವ ಬೀರುತ್ತಿರುವುದರಿಂದ ಪರಿಸರ ಇಲಾಖೆ ಅಥವಾ ತಾಲೂಕು ಆಡಳಿತ ಯಾವುದೇ ಕ್ರಮಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.ತಾಲೂಕಿನ ಅನೇಕ ಭಾಗಗಳಲ್ಲಿ ಕೃಷಿಗೆ ಯೋಗ್ಯವಾಗಿರುವ ಮತ್ತು ಬೆಳೆ ಬೆಳೆಯುವ ಬಯಲು ಪ್ರದೇಶದ ಜಮೀನುಗಳನ್ನೇ ಆಯ್ಕೆ ಮಾಡಿಕೊಂಡು ಲಾಭ ತಂದುಕೊಡುವ ಚಿಪ್ಪು ಸುಡುವ ಕೈಗಾರಿಕೆಗಳನ್ನು ನಡೆಸುತ್ತಿದ್ದಾರೆ. ಕೃಷಿ ಭೂಮಿಯಲ್ಲೇ ದೊಡ್ಡ ದೊಡ್ಡ ಗುಂಡಿಗಳನ್ನು ತೆಗೆದು ಲೋಡುಗಟ್ಟಲೆ ಕೊಬ್ಬರಿ ಚಿಪ್ಪುಗಳನ್ನು ಸುರಿದು ಬೆಂಕಿ ಹಚ್ಚುತ್ತಿದ್ದು, ಈ ಗುಂಡಿಗಳಿಂದ ಭುಗಿಲೇಳುವ ದಟ್ಟ ಹೊಗೆ ನಿರಂತರವಾಗಿ ಮೇಲೆ ಬಂದು ಕೃಷಿ ಭೂಮಿಯ ಸುತ್ತಮುತ್ತ ಕಿಲೋಮೀಟರ್‌ಗಟ್ಟಲೆ ವಿಸ್ತಾರದಲ್ಲಿ ಹರಡಿಕೊಳ್ಳುತ್ತಿದೆ. ಹೀಗೆ ಹಬ್ಬಿದ ದಟ್ಟ ಹೊಗೆ ಗಾಳಿ ಬೀಸಿದಂತೆಲ್ಲಾ ರಸ್ತೆ, ಹೊಲ-ತೋಟಗಳಿಗೆಲ್ಲಾ ಸುತ್ತಿಕೊಳ್ಳುತ್ತಿದೆ. ಈ ಗುಂಡಿಗಳಿಂದ ಅತಿಯಾದ ಬಿಸಿಯಿರುವ ದಟ್ಟ ಹೊಗೆ ಹೊಲ-ತೋಟಗಳಲ್ಲೇ ಯಥೇಚ್ಚವಾಗಿ ಹರಡಿ ಸುತ್ತಿಕೊಳ್ಳುವುದರಿಂದ ಗಿಡ ಮರಗಳು ಸುಟ್ಟ ರೋಗಬಂದಂತಾಗಿ ಕೃಷಿ ಮತ್ತು ಪರಸರಕ್ಕೆ ತೀವ್ರ ಹಾನಿಯಾಗುತ್ತಿದೆ. ಬರುವ ಬಿಸಿ ಹೊಗೆಯಿಂದ ರೈತ ಉಪಕಾರಿಗಳಾದ ಜೇನು ಮತ್ತಿತರೆ ಕೀಟಗಳು, ಪಕ್ಷಿ ಸಂಕುಲಗಳು ನಾಶವಾಗಿ ಹೊಲ-ತೋಟಗಳ ಬೆಳೆಗಳ ಇಳುವರಿ ಕಡಿಮೆಯಾಗಿದೆ. ಅತಿಯಾದ ತಾಪಮಾನಕ್ಕೆ ಖುಷ್ಕಿ ಬೆಳೆಗಳಾದ ರಾಗಿ, ತೊಗರಿ ಜೋಳ ಸೇರಿದಂತೆ ತೆಂಗು, ಅಡಿಕೆ ಮತ್ತು ಬಾಳೆಯಂಥ ತೋಟಗಾರಿಕೆ ಬೆಳೆಗಳು ನಾನಾ ರೋಗರುಜಿನೆಗಳಿಗೆ ಈಡಾಗಿ ರೈತನಿಗೆ ತೀವ್ರ ಹೊಡೆತ ಬೀಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಅಲ್ಲದೆ ಕೆಲ ಭಾಗಗಳಲ್ಲಿ ರಸ್ತೆಯ ಪಕ್ಕದಲ್ಲಿಯೇ ಚಿಪ್ಪು ಸುಡುತ್ತಿರುವ ಕಾರಣ ಹೊಗೆಯಿಂದ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ. ಹತ್ತು ಹಲವು ಕಾಯ್ದೆ-ಕಾನೂನುಗಳು ಜಾರಿಯಲ್ಲಿದ್ದರೂ ಕೃಷಿ ಜಮೀನುಗಳಲ್ಲಿ ಹಾಗೂ ಅಕ್ಕಪಕ್ಕ ಕೃಷಿ ಜಮೀನುಗಳಿಗೆ ಕಂಟಕ ತರುತ್ತಿರುವ ಈ ಉದ್ಯಮಗಳು ಯಾವುದೇ ಇಲಾಖೆಗಳ ಪರವಾನಗಿ ಪಡೆಯದೆ ಚಿಪ್ಪು ಸುಡುವ ಉದ್ಯಮಕ್ಕೆ ಮುಂದಾಗಿದ್ದಾರೆ. ಗ್ರಾಮ ಪಂಚಾಯಿತಿಗಳು ಅಕ್ರಮ ಹಣ ಪಡೆದು ಅಕ್ರಮ ವ್ಯವಹಾರಕ್ಕೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿರುವುದು ತಾಲೂಕು ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.
ನಮ್ಮ ಜಮೀನು ಪಕ್ಕದಲ್ಲಿಯೇ ಚಿಪ್ಪು ಸುಡುವ ಉದ್ಯಮ ನಡೆಯುತ್ತಿದ್ದು ಇದರಿಂದ ತೆಂಗು ಮತ್ತು ಅಡಿಕೆ ಮರಗಳ ಸುಳಿಯ ಮೇಲೆ ಹೊಗೆಯ ಧೂಳು ಕುಳಿತುಕೊಂಡು ಸುಳಿ ಬೀಳುವಂತಾಗಿವೆ. ಯಾವುದೇ ತರಕಾರಿ ಬೆಳೆಗಳನ್ನು ಬೆಳೆದರೂ ಒಣಗುತ್ತಿವೆ. ನಾವು ಸಾಲಮಾಡಿಕೊಂಡು ಬೆಳೆ ಬೆಳೆಯುತ್ತೇವೆ ಆದರೆ ಹೊಗೆಯ ಪರಿಣಾಮ ನಷ್ಠ ಅನುಭವಿಸುವಂತಾಗಿದೆ. ಈ ಬಗ್ಗೆ ಚಿಪ್ಪು ಸುಡುವ ಮಾಲೀಕರಿಗೆ ಹೇಳಿದರೂ ಅವರು ಕಿವಿಕೊಡುತ್ತಿಲ್ಲ. ಇದಕ್ಕೆ ಅಧಿಕಾರಿಗಳ ಕುಮ್ಮಕ್ಕಿದ್ದು ಕೂಡಲೆ ಇಂತಹವರ ಮೇಲೆ ಕ್ರಮ ಕೈಗೊಳ್ಳಬೇಕು.ಕಿರಣ್, ರೈತ, ತಿಪಟೂರು