ಸಾರಾಂಶ
ಹಾನಗಲ್ಲ: ನಿಧಿ ಆಸೆಗಾಗಿ ಹಾನಗಲ್ಲ ತಾಲೂಕಿನ ದಶರಥಕೊಪ್ಪ ಗ್ರಾಮದ ಪುರಾತನ ದೇವಸ್ಥಾನವೊಂದರ ಗರ್ಭಗುಡಿ ಅಗೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ದಶರಥಕೊಪ್ಪ ಗ್ರಾಮಕ್ಕೆ ಹೊಂದಿಕೊಂಡ ಕೆರೆಯ ಪಕ್ಕದಲ್ಲಿರುವ ಗುರುಭಕ್ತೇಶ್ವರ ದೇವಸ್ಥಾನದಲ್ಲಿ ಕಳ್ಳರು ನಿಧಿಯಾಸೆಗಾಗಿ ಗರ್ಭಗುಡಿಯನ್ನೇ ಅಗೆದು ಶೋಧಿಸಿದ ಘಟನೆ ನಡೆದಿದೆ.ಸದ್ಯ ಶಿಥಿಲಗೊಂಡ ಸ್ಥಿತಿಯಲ್ಲಿರುವ ಪ್ರಾಚೀನ ಕಲ್ಲಿನ ದೇವಸ್ಥಾನ ಇದಾಗಿದ್ದು, ದೇವಸ್ಥಾನದ ಅಂಗಳದ ಕುರುಹುಗಳು ಮಾತ್ರ ಇಲ್ಲಿ ಕಾಣಿಸುತ್ತಿವೆ. ದೇವಸ್ಥಾನದ ಮೂರು ದಿಕ್ಕಿನಲ್ಲಿ ಗರ್ಭಗುಡಿ ಇವೆ. ಮೂರು ಗರ್ಭಗುಡಿಯಲ್ಲಿ ಈಶ್ವರ ಲಿಂಗು ಪ್ರತಿಷ್ಠಾಪನೆ ಇದೆ. ಮುಖ್ಯ ಗರ್ಭಗುಡಿಯಲ್ಲಿನ ಈಶ್ವರ ಲಿಂಗು ತೆರವು ಮಾಡಿ ಅದರ ಬುಡದಲ್ಲಿ ಸುಮಾರು ಎರಡು ಅಡಿ ನೆಲವನ್ನು ತೋಡಲಾಗಿದೆ. ದುಷ್ಕರ್ಮಿಗಳ ಕೃತ್ಯಕ್ಕೆ ಈಶ್ವರ ಲಿಂಗುವಿನ ಪಾಣಿಪೀಠ ಧ್ವಂಸವಾಗಿದೆ. ಲಿಂಗು ಪ್ರತ್ಯೇಕಗೊಳಿಸಲಾಗಿದೆ. ಇದೇ ಈಶ್ವರ ಲಿಂಗುವಿಗೆ ದಶರಥಕೊಪ್ಪ ಮತ್ತು ಸುತ್ತಲಿನ ಗ್ರಾಮಸ್ಥರು ಭಕ್ತಿ ಸಮರ್ಪಿಸುತ್ತಿದ್ದರು. ಶಿವರಾತ್ರಿಯಂದು ವಿಶೇಷ ಪೂಜೆ ಮಾಡಿ ಈಶ್ವರನ ದರ್ಶನ ಪಡೆಯುತ್ತಿದ್ದರು ಎಂದು ಗ್ರಾಮದ ರವಿಕಿರಣ ಪಾಟೀಲ ಹೇಳಿದರು. ದಶರಥಕೊಪ್ಪ ಗ್ರಾಮ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಅಲ್ಲಲ್ಲಿ ಕಲ್ಲಿನ ಮಂಟಪ, ದೇವಸ್ಥಾನದ ಕುರುಹುಗಳಿವೆ. ನಿಧಿ ಶೋಧ ಇಲ್ಲಿ ಹೊಸತೇನಲ್ಲ ಎನ್ನುತ್ತಾರೆ ಸಾರ್ವಜನಿಕರು. ಅಪಾರ ಪ್ರಮಾಣದಲ್ಲಿ ನಿಧಿ ಇದೆ ಎಂಬ ವದಂತಿಯಿಂದ ಆಗಾಗ್ಗೆ ಈ ಪ್ರದೇಶದಲ್ಲಿ ನಿಧಿಗಳ್ಳರ ಕೈಚಳಕ ಇಲ್ಲಿ ನಡೆಯುತ್ತದೆ ಎಂದು ಸ್ಥಳೀಯ ಮಹೇಶಸ್ವಾಮಿ ಹಿರೇಮಠ, ಗದಿಗಯ್ಯ ಹಿರೇಮಠ, ಬಸಲಿಂಗಯ್ಯ ಕಡ್ಲಿಮಠ, ಮುತ್ತು ಹೊಸಮನಿ, ಸೋಮನಗೌಡ ಪಾಟೀಲ, ಮನೋಹರ ಶಡಗರವಳ್ಳಿ, ಚನ್ನವೀರಯ್ಯ ಸಿದ್ರಾಮಣ್ಣನವರ, ರಾಮಣ್ಣ ಫಕ್ಕೀರಣ್ಣನವರ ಹೇಳಿದರು.ಪುರಾತನ ದೇವಸ್ಥಾನಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಶ್ರದ್ಧಾ ಕೇಂದ್ರಗಳಾಗಿವೆ. ಆದರೆ ಅವುಗಳ ರಕ್ಷಣೆಗೆ ಸರಕಾರದ ಮಟ್ಟದಲ್ಲಿ ತೀರಾ ನಿರ್ಲಕ್ಷ್ಯವಿದೆ. ಕೆಲವು ದೇವಸ್ಥಾನಗಳಿಗೆ ರಕ್ಷಣೆ ನೀಡಿದೆ. ಆದರೆ ನಿರ್ಲಕ್ಷಿತ ಪುರಾತನ ದೇವಸ್ಥಾನಗಳನ್ನು ಸಂರಕ್ಷಿಸುವಲ್ಲಿ ಸರಕಾರ ಜಾಗೃತವಾಗಿ ಕ್ರಮ ಜರುಗಿಸಬೇಕು. ಇದಕ್ಕಾಗಿ ವಿಳಂಬವಿಲ್ಲದೆ ಸರಕಾರ ಕ್ರಿಯಾಶೀಲವಾಗಬೇಕು ಎಂದು ಬಿಜೆಪಿ ಮುಖಂಡ ಸಿದ್ದಲಿಂಗಪ್ಪ ಕಮಡೊಳ್ಳಿ ಹೇಳಿದರು.