ಸಾಲುಮರದ ತಿಮ್ಮಕ್ಕ ಶಿಬಿರಾರ್ಥಿಗಳಿಗೆ ಆದರ್ಶವಾಗಲಿ

| Published : Jun 19 2024, 01:17 AM IST

ಸಾರಾಂಶ

ಸೀಗೇಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಎನ್‌ಎಸ್‌ಎಸ್‌ ವಾರ್ಷಿಕ ಶಿಬಿರದ ಅಂಗವಾಗಿ ವಿದ್ಯಾರ್ಥಿಗಳು ಗ್ರಾಮದ ಚರಂಡಿ ಸ್ವಚ್ಛಗೊಳಿಸಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಎನ್‌ಎಸ್ಎಸ್ ಶಿಬಿರಾರ್ಥಿಗಳಿಗೆ ಮಾದರಿಯಾಗಬೇಕೆಂದು ಪ್ರಗತಿಪರ ಕೃಷಿಕ ಸೀಗೇಹಳ್ಳಿ ರಾಜು ಹೇಳಿದರು.

ಸಿರಿಗೆರೆ ಎಂ.ಬಿ.ಆರ್.‌ ಪದವಿ ಕಾಲೇಜು ವತಿಯಿಂದ ಸಮೀಪದ ಸೀಗೇಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಎನ್ಎಸ್ಎಸ್ ವಾರ್ಷಿಕ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ತಿಮ್ಮಕ್ಕ ಸಾವಿರಾರು ಸಸಿಗಳನ್ನು ನೆಟ್ಟು ಅವುಗಳನ್ನು ಆರೈಕೆ ಮಾಡಿ ನಮ್ಮ ಮುಂದೆ ದಂತಕಥೆಯಂತಿದ್ದಾರೆ. ತಿಮ್ಮಕ್ಕ ಮಾಡಿದ ಪರಿಸರ ರಕ್ಷಣೆ ಕೆಲಸವನ್ನು ಮಾದರಿಯಾಗಿಟ್ಟುಕೊಂಡು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗಿಯಾಗಬೇಕು ಎಂದರು.

ಎನ್ಎಸ್ಎಸ್‌ ನಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡುವ ವಿದ್ಯಾರ್ಥಿಗಳು ತಮ್ಮ ಮೂರು ವರ್ಷಗಳ ಶಿಕ್ಷಣದ ಅವಧಿಯಲ್ಲಿ 50 ಗಿಡಗಳನ್ನು ಬೆಳೆಸಿ ಸಂರಕ್ಷಿಸಬೇಕು. ಅಂತಹ ಕೆಲಸ ಮಾಡಲು ಇಲಾಖೆಗಳು ಮುಂದಾಗಬೇಕು ಎಂದರು.

ಈ ವೇಳೆ ಸೀಗೇಹಳ್ಳಿಯ ವ್ಯವಸಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಬೇರಪ್ಪ, ನಿವೃತ್ತ ಬ್ಯಾಂಕ್‌ ಅಧಿಕಾರಿ ಫಾಲಾಕ್ಷಪ್ಪ, ಶಿಬಿರದ ಸಂದರ್ಶಕ ಅಶೋಕ್‌ ಕುಮಾರ್‌ ಪಾಳೇದ್‌, ಕಾಲೇಜು ಪ್ರಾಚಾರ್ಯ ಶಿವಬಸವ ಕಟಗಿಮಠ ಮುಂತಾದವರು ಭಾಗವಹಿಸಿದ್ದರು.