ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಂಬೇಗೌಡ ಕಾನೂನು ಕಾಲೇಜಿಗೆ ಹೊಸ ಸ್ವರೂಪ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.ಹೊಂಬೇಗೌಡ ಕಾನೂನು ಕಾಲೇಜು ಸಂಸ್ಥೆಯಲ್ಲಿ ಜನಗಣ ಮುದ್ರಣ ಮತ್ತು ಪ್ರಕಾಶನ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ಇವರ ಸಹಯೋಗದಲ್ಲಿ ಜಿಲ್ಲೆಗೆ ಸಂಬಂಧಪಟ್ಟ ವಿವಿಧ ಕ್ಷೇತ್ರಗಳ ಐದು ಕಿರುಹೊತ್ತಿಗೆಗಳ ಬಿಡುಗಡೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದಿಸಿ ಅವರು ಮಾತನಾಡಿದರು.
ಹೊಂಬೇಗೌಡ ಕಾನೂನು ಕಾಲೇಜು ಆವರಣ ವಿಶಾಲವಾಗಿದೆ. ಇಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳನ್ನು ಪ್ರಾರಂಭ ಮಾಡಲು ಸಾಕಷ್ಟು ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.ಹಿರಿಯ ಸಹಕಾರಿ ಕೌಡ್ಲೆ ಚನ್ನಪ್ಪ ಅವರು ಸಾಮಾಜಿಕ ಕಳಕಳಿ ಇಟ್ಟುಕೊಂಡಿರುವ ವ್ಯಕ್ತಿ. ಅವರು ಬರೆದಿರುವ ಐದು ಪುಸ್ತಕಗಳು ಗಾತ್ರದಲ್ಲಿ ಚಿಕ್ಕದಿರಬಹುದು. ಆದರೆ, ಅದರ ಹೂರಣ ಬಹಳ ಮಹತ್ವವಾದುದು. ಸಹಕಾರ ರತ್ನಗಳು, ಮಂಡ್ಯ -ಪಾಂಡವಪುರ ಸಕ್ಕರೆ ಕಾರ್ಖಾನೆಗಳ ಸ್ಥಿತಿಗತಿ. ಆಧುನಿಕ ಬೆಳೆಗಾರರು, ನಾ ಕಂಡಂತೆ ಜಿ.ಮಾದೇಗೌಡ ಹಾಗೂ ಸಹಕಾರ ಕ್ಷೇತ್ರದ ಸ್ಥಿತಿ-ಗತಿ ಕುರಿತು ಬರೆದಿದ್ದಾರೆ. ಪುಸ್ತಕಗಳಲ್ಲಿ ಗಾತ್ರ ದೊಡ್ಡದಿದ್ದರೆ ಕೆಲವರು ಬೆಚ್ಚಿ ಬೀಳುತ್ತಾರೆ. ಆದರೆ, ಇಲ್ಲಿ ಅಂತಹ ಪ್ರಮೆಯ ಬರುವುದಿಲ್ಲ. ಪ್ರತಿ ಪುಸ್ತಕ ತಿರುವ ಹಾಕಲು ಕನಿಷ್ಠ ೨೦ ರಿಂದ ೨೫ ನಿಮಿಷ ಸಾಕು. ಪ್ರತಿಯೊಬ್ಬರೂ ಪುಸ್ತಕಗಳನ್ನು ಓದಿ ಎಂದು ಸಲಹೆ ನೀಡಿದರು.
ಚನ್ನಪ್ಪ ಅವರು ಬರೆದಿರುವ ಐದು ಪುಸ್ತಕಗಳು ವಾಸ್ತವ್ಯಕ್ಕೆ ಹತ್ತಿರವಾದವು. ಜಿಲ್ಲೆಯಾದ್ಯಂತ ಸುತ್ತಾಡಿ ಸಮಗ್ರ ಮಾಹಿತಿ ಕಲೆ ಹಾಕಿ ಪುಸ್ತಕದ ರೂಪದಲ್ಲಿ ತಂದಿರುವುದು ಉತ್ತಮ ಬೆಳವಣಿಗೆ. ಪುಸ್ತಕಗಳು ನಮ್ಮ ಪರಂಪರೆಯನ್ನು ತಿಳಿಸುತ್ತವೆ. ಇದರಿಂದ ಜ್ಞಾನ ವೃದ್ಧಿಸಿಕೊಳ್ಳಬಹುದು. ಇಂತಹ ಪುಸ್ತಕಗಳ ಸಂಖ್ಯೆ ಇನ್ನು ಹೆಚ್ಚು ಹೆಚ್ಚಾಗಿ ಬರಲಿ ಎಂದು ಹಾರೈಸಿದರು.
ಪೋಷಕರು ತಮ್ಮ ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಿ, ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಿದರೆ ಮಾತ್ರ ನಮ್ಮ ಪರಂಪರೆ ಸಂಸ್ಕೃತಿ ಉಳಿವು ಸಾಧ್ಯ. ಮಕ್ಕಳಿಗೆ ಓದುವ ಅಭಿವೃಚಿಯನ್ನು ಬೆಳೆಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಕೌಡ್ಲೆ ಚನ್ನಪ್ಪ ಅವರು ಮೊದಲಿನಿಂದಲೂ ಸಾಮಾಜಿಕ ಕಳಕಳಿ ಇಟ್ಟುಕೊಂಡವರು. ಈ ರಿತಿಯ ಆನೇಕ ಚಿಂತನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೃಷಿ, ಸಹಕಾರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಗೆ ನಿರಂತರವಾಗಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡು ಇನ್ನಷ್ಟು ಸಮಾಜಮುಖಿ ಕೆಲಸ ಮಾಡಲು ಪ್ರೇರೇಪಿಸಿಕೊಂಡು ಬರುತ್ತಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದು ಪ್ರಶಂಸಿಸಿದರು.ಮೈಸೂರು ಮಹಾರಾಜರ ಕಾಲದಲ್ಲಿ ಹೊಂಬೇಗೌಡ ಕಾನೂನು ಕಾಲೇಜನ್ನು ಚನ್ನಪ್ಪ ಅವರು ಕಾರ್ಯರಂಭ ಮಾಡಿದ್ದರು. ಹೊಂಬೇಗೌಡ ಕಾನೂನು ಕಾಲೇಜು ಅಭಿವೃದ್ಧಿ ಸಂಬಂಧ ನನ್ನನ್ನು ಭೇಟಿ ಮಾಡಿದ್ದರು. ಚುಂಚಶ್ರೀ ನೇತೃತ್ವದಲ್ಲಿ ಹೊಸ ಕಾಯಕಲ್ಪ ಕಲ್ಪಿಸಲಿ. ನನಗೆ ವಹಿಸುವ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ ಎಂದು ಚಲುವರಾಯಸ್ವಾಮಿ ಭರವಸೆ ನೀಡಿದರು.
ಕೌಡ್ಲೆ ಚನ್ನಪ್ಪ ಮಾತನಾಡಿ, ಸಹಕಾರಿ ಕ್ಷೇತ್ರ ತುಂಬಾ ಮಹತ್ವವಾದ ಕ್ಷೇತ್ರ. ಈ ಕ್ಷೇತ್ರಕ್ಕೆ ಒಳ್ಳೆಯ ಹಸರಿತ್ತು. ವ್ಯವಸಾಯಕ್ಕೆ ಸಂಪೂರ್ಣ ಸಹಕಾರ ಕೊಡುತ್ತಿತ್ತು. ಹಿಂದೆ ಇದ್ದಂತ ಪ್ರಾಮುಖ್ಯತೆ ಈಗಿಲ್ಲವಾಗಿದೆ. ವ್ಯವಸಾಯಕ್ಕೆ ಪೂರಕವಾದ ಈ ಸಹಕಾರ ಸಂಸ್ಥೆಗಳು ನಶಿಸಿ ಹೋದರೆ, ರೈತರ ಬದುಕು ಅಯೋಮಯವಾಗುತ್ತದೆ. ಶೇ.೩೦ ಭಾಗ ಸಹಕಾರ ಸಂಸ್ಥೆಗಳು ಹಾಳಾಗಿವೆ. ಪ್ರಸ್ತುತ ಸಹಕಾರಿ ಸಂಸ್ಥೆಗಳ ಸ್ಥಿತಿ ಗತಿ ಅದೋಗತಿಗೆ ದೂಡಲ್ಪಟ್ಟಿವೆ. ಇದು ಆತಂಕಕಾರಿ ಬೆಳವಣಿಗೆ ಎಂದು ವಿಷಾದ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಸಹಕಾರ ಕ್ಷೇತ್ರದಲ್ಲಿ ದುಡಿದ ಎಚ್.ಸಿದ್ದಯ್ಯ, ಜಿ.ಟಿ.ಪುಟ್ಟಸ್ವಾಮಿ, ಕಾರ್ಕಳ್ಳಿ ಬಸವೇಗೌಡ, ಎಚ್.ಟಿ. ಕೃಷ್ಣೇಗೌಡ, ಸಿ.ಪಿ.ಉಮೇಶ್, ಹಾಲಹಳ್ಳಿ ಅಶೋಕ್ ಸೇರಿದಂತೆ ಮತ್ತಿತರರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಅಂತೆಯೇ, ಬಿದರಕಟ್ಟೆ ರಾಜೇಗೌಡ, ಎನ್.ವೆಂಕಟೇಶ್, ಸಿದ್ದರಾಜು, ಲಕ್ಷ್ಮೇಗೌಡ, ಶಿವಣ್ಣ, ಜಯಮ್ಮ, ಶಂಕರನಾರಾಯಣ, ನವೀನ್ ಸಂಗಾಪುರ, ಶ್ರೀನವಾಸ್ ಪಾಲಹಳ್ಳಿ, ಲಕ್ಷ್ಮೀದೇವಮ್ಮ ಬಲ್ಲೇನಹಳ್ಳಿ, ಡಾ.ಕೆ.ರಾಮಕೃಷ್ಣ, ಕುಮಾರ್ ಬಾಬುರಾಯನಕೊಪ್ಪಲು, ಬಿ.ಎನ್.ವಾಸು, ಕ್ಯಾತನಹಳ್ಳಿ ಬಸವರಾಜು, ವಿಠಲಾಪುರ ಸುಬ್ಬೇಗೌಡ ಅವರಿಗೆ ಆಧುನಿಕ ಬೆಳೆಗಾರರು ಪ್ರಶಸ್ತಿ ನೀಡಿ ಗೌರವಿಸಲಾಯಿತು.