ದಾಬಸ್‍ಪೇಟೆ: ಐತಿಹಾಸಿಕ ತಿಪ್ಪಗೊಂಡನಹಳ್ಳಿ (ಚಾಮರಾಜಸಾಗರ) ಜಲಾಶಯದ ಸ್ಲೂಯಿಸ್ ಗೇಟ್‍ಗಳ ತಾಂತ್ರಿಕ ದೋಷದಿಂದಾಗಿ ಒಂದು ವಾರದಿಂದ ನಿರಂತರ ನೀರು ಪೋಲಾಗುತ್ತಿದ್ದು, ಕೂಡಲೇ ಗೇಟ್‍ಗಳ ದುರಸ್ತಿ ಮಾಡದಿದ್ದರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ನೆಲಮಂಗಲದ ಸುತ್ತಮುತ್ತಲ ರೈತರು ಎಚ್ಚರಿಸಿದ್ದಾರೆ.

ಅರ್ಕಾವತಿ ಮತ್ತು ಕುಮುದ್ವತಿ ಉಪನದಿಗಳ ಆಸರೆಯಾಗಿರುವ ಈ ಜಲಾಶಯ ಒಟ್ಟು 3.345 ಟಿಎಂಸಿ ನೀರಿನ ಸಾಮರ್ಥವನ್ನು ಹೊಂದಿದೆ. ಆದರೆ, ಪ್ರಸ್ತುತ ಜಲಾಶಯದಲ್ಲಿ ಕೇವಲ 1 ರಿಂದ 1.5 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಇಂತಹ ಪರಿಸ್ಥಿತಿಯಲ್ಲಿ ಜಲಾಶಯದ ಕೆಳಭಾಗದಲ್ಲಿರುವ ಹಳೆಯ 4 ಸ್ಲೂಯಿಸ್ ಗೇಟ್‍ಗಳ ಮೂಲಕ ನಿರಂತರವಾಗಿ ನೀರು ಪೋಲಾಗುತ್ತಿರುವುದು ಹಿನ್ನೀರಿನ ಮಟ್ಟ ತೀವ್ರ ಕುಸಿಯುವಂತೆ ಮಾಡಿದೆ. ಇದು ನೆಲಮಂಗಲ ತಾಲೂಕಿನ ಸೋಲೂರು, ಕಸಬಾ ಹೋಬಳಿ ಸೇರಿದಂತೆ ಮಾಗಡಿ ಮತ್ತು ತಾವರೆಕೆರೆ ಭಾಗದ ಕೃಷಿಕರ ನಿದ್ದೆಗೆಡಿಸಿದೆ.

ಬಣ್ಣ ಬಳಿದು ವಂಚಿಸಿದರೇ ಅಧಿಕಾರಿಗಳು?:

ಕೆಲವು ತಿಂಗಳ ಹಿಂದೆಯಷ್ಟೇ ಉಪಮುಖ್ಯಮಂತ್ರಿಗಳು ಆದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಜಲಾಶಯಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅಧಿಕಾರಿಗಳು ಕೇವಲ ಮೇಲ್ಭಾಗದ ಕ್ರೆಸ್ಟ್ ಗೇಟ್‍ಗಳಿಗೆ ಬಣ್ಣ ಬಳಿದು ಹೊಸ ಯಂತ್ರಗಳಂತೆ ಬಿಂಬಿಸಿದ್ದರು. ಆದರೆ ಜಲಾಶಯದ ತಳಭಾಗದಲ್ಲಿರುವ ನೀರನ್ನು ಖಾಲಿ ಮಾಡಲು ಬಳಸುವ ಹಳೆಯ 4 ಗೇಟ್‍ಗಳನ್ನು ದುರಸ್ತಿ ಮಾಡದೆ ಹಾಗೇ ಬಿಟ್ಟಿರುವುದರಿಂದಲೇ ನೀರು ಪೋಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನೀರಿದ್ದರೆ ಮಾತ್ರ ನೆಲಮಂಗಲ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಕೊಳವೆಬಾವಿಗಳಲ್ಲಿ ನೀರು ಲಭ್ಯವಿರುತ್ತದೆ. ಈಗಾಗಲೇ ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರಿಗೆ, ಕಣ್ಣೆದುರೇ ಜಲಾಶಯದ ನೀರು ಪೋಲಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.


ಕೋಟ್...............

ಜಲಾಶಯದ ಗೇಟ್‍ಗಳು ಹಳೆಯದಾಗಿರುವ ಪರಿಣಾಮ ನೀರು ಸೋರಿಕೆಯಾಗುತ್ತಿದೆ. ಈ ವಿಷಯವನ್ನು ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಗೇಟ್‍ಗಳ ದುರಸ್ತಿ ಅಥವಾ ಹೊಸ ಯಂತ್ರಗಳನ್ನು ಅಳವಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು.

-ರಮೇಶ್, ಸಹಾಯಕ ಇಂಜಿನಿಯರ್, ತಿಪ್ಪಗೊಂಡನಹಳ್ಳಿ ಜಲಾಶಯ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ,

ಕೋಟ್............

ಜಲಾಶಯದಲ್ಲಿ ನೀರಿದ್ದರೆ ಮಾತ್ರ ಈ ಭಾಗದಲ್ಲಿ ಅಂತರ್ಜಲ ಮಟ್ಟ ಸುಧಾರಿಸಲು ಸಾಧ್ಯ. ಜಲಾಶಯದಲ್ಲಿ ಒಂದು ವಾರದಿಂದ ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ಕೇವಲ ತಾಂತ್ರಿಕ ಕಾರಣಗಳನ್ನು ಹೇಳಿ, ಕಾಲಹರಣ ಮಾಡುತ್ತಿದ್ದಾರೆ. ತಕ್ಷಣವೇ ನೀರು ಪೋಲಾಗುವುದನ್ನು ತಡೆಯದಿದ್ದರೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು.

-ಚಿಕ್ಕಹನುಮೇಗೌಡ, ಅಧ್ಯಕ್ಷರು, ಕುಮುದ್ವತಿ ರೈತ ಸಂಸ್ಥೆ

ಪೋಟೋ 2 :

ತಿಪ್ಪಗೊಂಡನಹಳ್ಳಿ ಜಲಾಶಯದ ಸ್ಲೂಯಿಸ್ ಗೇಟ್‍ಗಳ ತಾಂತ್ರಿಕ ದೋಷವನ್ನು ಸರಿಪಡಿಸುವಂತೆ ಕುಮುದ್ವತಿ ರೈತ ಸಂಸ್ಥೆ ಅಧ್ಯಕ್ಷ ಚಿಕ್ಕಹನುಮೇಗೌಡ ಹಾಗೂ ಪದಾಧಿಕಾರಿಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪೋಟೋ 3 : ತಿಪ್ಪಗೊಂಡನಹಳ್ಳಿ ಜಲಾಶಯ.