ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಲೋಕಸಭೆ 18ನೇ ಸಾರ್ವತ್ರಿಕ ಚುನಾವಣೆಯು ದೇಶದ ಕಾರ್ಮಿಕ ವರ್ಗದ ಪಾಲಿಗೆ ಮಾಡು, ಇಲ್ಲವೇ ಮಡಿ ಯುದ್ಧದಂತಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, 2014ರಲ್ಲಿ ಬಿಜೆಪಿ, ಕಾರ್ಮಿಕರ ಕೆಲಸದ ಪರಿಸ್ಥಿತಿ ಪರಿಶೀಲಿಸುವ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಿಸುವ ಭರವಸೆ ನೀಡಿದ್ದರೂ ಅದಕ್ಕೆ ತಕ್ಕಂತೆ ನಡೆಯಲಿಲ್ಲ ಎಂದರು.
ಕಳೆದ ಚುನಾವಣೆ ಪ್ರಣಾಳಿಕೆಯಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿದ್ದೇವೆಂದು ಬಿಜೆಪಿ ಹೇಳಿದರೂ, ಮೋದಿ ಸರ್ಕಾರವು 2018ರಿಂದ 1 ರುಪಾಯಿ ಸಹ ವೇತನ ಹೆಚ್ಚಿಸಿಲ್ಲ. 10 ವರ್ಷ ಪೂರ್ಣಾವಧಿಗೆ ಅಧಿಕಾರ ನಡೆಸಿದರೂ ಮೋದಿ ಸರ್ಕಾರ ಅಶಾ, ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟದ ಕಾರ್ಯಕರ್ತೆಯರ ಸಂಭಾವನೆ ಹೆಚ್ಚಿಸಿಲ್ಲ ಎಂದು ದೂರಿದರು.ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ದೇಶದ ಅತ್ಯಂತ ಶ್ರೀಮಂತರ ಪರವಾಗಿದ್ದು, ಬಡವರು, ದುಡಿಯುವ ವರ್ಗದ ವಿರುದ್ಧವಾಗಿ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ. ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಕಾರ್ಮಿಕ ವರ್ಗವು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ದುಡಿಯುವ ಕಾರ್ಮಿಕ ವರ್ಗಕ್ಕೆ ಕರೆ ನೀಡುತ್ತದೆ ಎಂದು ತಿಳಿಸಿದರು.
ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಸೋಲಿಸಲು ಕಾರ್ಮಿಕ ವರ್ಗಕ್ಕೆ ಕರೆ ನೀಡುತ್ತಿದ್ದೇವೆ. ಮೋದಿ ಸರ್ಕಾರವು ಕಾರ್ಮಿಕರ ಹಕ್ಕುಗಳ ಮೇಲೆ ದಾಳಿ ಮಾಡುತ್ತಾ ಬಂದಿದೆ. ವೇತನದ ಕೋಡ್‌ನಲ್ಲಿ ಸಾರ್ವತ್ರಿಕ ಕನಿಷ್ಟ ವೇತನ ಹೊಂದಿಲ್ಲ. ಔದ್ಯೋಗಿಕ ಸುರಕ್ಷತೆ ಇಲ್ಲ. ಗುತ್ತಿಗೆ ಕಾರ್ಮಿಕರ ಶೋಷಣೆ ನಿಂತಿಲ್ಲ. ಸಾಮಾಜಿಕ ಭದ್ರತೆ ಕಲ್ಪಿಸಿಲ್ಲ. ಕಟ್ಟಡ ಕಾನೂನು ರದ್ಧುಪಡಿಸಿದ್ದು ಸರಿಯಲ್ಲ ಎಂದು ವಿವರಿಸಿದರು.ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಿಪಿಐ(ಎಂ) ಅಭ್ಯರ್ಥಿಗೆ ಬೆಂಬಲಿಸಲು ಸಿಐಟಿಯು ನಿರ್ಧರಿಸಿದೆ. ಅದೇ ರೀತಿ ರಾಜ್ಯದ ಉಳಿದ 27 ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟದ ಭಾಗವಾಗಿರುವ, ಜಾತ್ಯತೀತ ಪಕ್ಷವಾಗಿರುವ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಸಲು ನಿರ್ಧಾರ ಕೈಗೊಂಡಿದೆ. ದಾವಣಗೆರೆ ಕ್ಷೇತ್ರದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ, ಚಿತ್ರದುರ್ಗದಲ್ಲಿ ಸಿ.ಚಂದ್ರಪ್ಪನವರಿಗೆ ಬೆಂಬಲಿಸಲು ಸಿಐಟಿಯು ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದರು.
ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್.ಆನಂದರಾಜ, ಎಲ್ಐಸಿ ಪ್ರತಿನಿಧಿಗಳ ಸಂಘದ ಜಿಲ್ಲಾಧ್ಯಕ್ಷ ಎಸ್.ಜಿ.ಪಂಪಣ್ಣ, ಆಟೋ ಚಾಲಕರ ಸಂಘದ ಸಂಚಾಲಕ ಕೆ.ಶ್ರೀನಿವಾಸಮೂರ್ತಿ, ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿದಿಗಳ ಸಂಘದ ಎ.ವೆಂಕಟೇಶ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೇತ್ರಾವತಿ, ಹರಿಹರ ಪಾಲಿಫೈಬರ್ಸ್ ನೌರರರ ಸಂಘದ ಕೆ.ಎಸ್.ಓಲೇಕಾರ್ ಇತರರು ಇದ್ದರು.-------ದಾವಣಗೆರೆಯಲ್ಲಿ ಗುರುವಾರ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ ಪ್ರಣಾಳಿಕೆ ಬಿಡುಗಡೆ ಮಾಡಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.