ಇನ್ನೊಂದು ಸಾರಿ ಹೀಗೆ ಮಾತನಾಡಿದರೆ ಸರಿಯಾಗಿ ಬುದ್ದಿ ಕಲಿಸಬೇಕಾಗುತ್ತದೆ
ಕನ್ನಡಪ್ರಭ ವಾರ್ತೆ ಮೈಸೂರುಕೆಪಿಸಿಸಿ ವಕ್ತಾರ ಎ. ಲಕ್ಷ್ಮಣ ನೀನು ಒಬ್ಬ ಒಕ್ಕಲಿಗನಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಕನಿಷ್ಠವಾಗಿ ಮಾತನಾಡೋದು ಸರಿಯಲ್ಲ ಎಂದು ಜೆಡಿಎಸ್ ನಗರಾಧ್ಯಕ್ಷರಾದ ನಗರ ಪಾಲಿಕೆ ಮಾಜಿ ಸದಸ್ಯ ಎಸ್.ಬಿ.ಎಂ. ಮಂಜು ತೀವ್ರವಾಗಿ ಖಂಡಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಈಗಾಗಲೇ ನಿನ್ನನ್ನು (ಎಂ. ಲಕ್ಷ್ಮಣ) ಎಲ್ಲಿ ಇಡಬೇಕೋ ಅಲ್ಲಿ ಇಟ್ಟಿದ್ದಾರೆ. ನಿನಗೆ ಛೀಮಾರಿ ಹಾಕ್ತಾ ಇದ್ದಾರೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೂ ತಾನೇ ಹುಟ್ಟಿಸಿಕೊಂಡು ಸುಳ್ಳು ಆರೋಪ ಮಾಡೋದನ್ನು ಬಿಡಬೇಕು. ನೀನು ಯಾವುದೇ ವಿಚಾರ ಹೇಳಿದರೂ ಅದರಲ್ಲಿ ಸತ್ಯ ಇರೋದಿಲ್ಲ ಎಂದು ತಿರುಗೇಟು ನೀಡಿದರು.ಎಚ್.ಡಿ. ಕುಮಾರಸ್ವಾಮಿ ಅವರು ನಿನಗೆ ಯಾಕೆ ಉತ್ತರ ಕೊಡಬೇಕು? ನೀನು ಯಾರು ಅಂತ ಉತ್ತರ ಕೊಡಬೇಕು? ಎಲ್ಲಾ ಚುನಾವಣೆಗಳಲ್ಲೂ ಸೋತಿದ್ದೀರಾ, ಜನಾನಿನ್ನನ್ನ ಎಲ್ಲಿ ಇಡಬೇಕೋ ಅಲ್ಲಿ ಇಟ್ಟಿದ್ದಾರೆ. ನೀನು ಯಾವ ದೊಡ್ಡ ವ್ಯಕ್ತಿ ಅಂತ ಉತ್ತರ ಕೊಡಬೇಕು ಎಂದು ಅವರು ವಾಗ್ದಾಳಿ ನಡೆಸಿದರು.ಮುಖ್ಯಮಂತ್ರಿಗಳನ್ನು ಸುಫಾರಿ ಕೊಟ್ಟು ಹೊಡೆದಾಕಿ ಬಿಡಿ ಎಂದು ಹೇಳ್ತಿಯಲ್ಲ. ಹಾಗಾದರೆ ಇದು ನಿನ್ನ ಮನಸ್ಸಿನಲ್ಲಿ ಇರೋದನ್ನು ಹೇಳ್ತಾ ಇದ್ದೀಯಾ? ಇದು ಕಾಂಗ್ರೆಸ್ ಸಂಸ್ಕೃತಿ, ಜೆಡಿಎಸ್ ಸಂಸ್ಕೃತಿ ಅಲ್ಲ. ಇನ್ನೊಂದು ಸಾರಿ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವಾಗ ನಿಗಾ ಇರಲಿ. ಇನ್ನೊಂದು ಸಾರಿ ಹೀಗೆ ಮಾತನಾಡಿದರೆ ಸರಿಯಾಗಿ ಬುದ್ದಿ ಕಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ಯಾರ ಬಗ್ಗೆಯಾದರೂ ಮಾತನಾಡುವಾಗ ಎಚ್ಚರಿಕೆಯಿಂದಿರಬೇಕೆಂಬುದರ ಅರಿವು ಎಂ. ಲಕ್ಷಣಗೆ ಇರಬೇಕು. ಎಂ. ಲಕ್ಷ್ಮಣ ಮಾಡಲು ಕೆಲಸವಿಲ್ಲದೇ ಏನಾದರೂ ಮಾತನಾಡುವುದನ್ನು ಬಿಟ್ಟರೆ ಬೇರೇನೂ ಅವರಿಗೆ ತಿಳಿಯದು. ಹೀಗಾಗಿ ಇದೇ ಛಾಳಿ ಮುಂದುವರಿಸಿದರೆ ಅವರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಕಿಡಿಕಾರಿದರು.ಓರ್ವ ಒಕ್ಕಲಿಗರಾಗಿ ಇವರು ಒಕ್ಕಲಿಗರ ಸಂಘದ ಪದಾಧಿಕಾರಿಯೂ ಆಗಲು ಸಾಧ್ಯವಾಗಿಲಿಲ್ಲ. ಜನತೆ ಇವರನ್ನು ಈಗಾಗಲೇ ತಿರಸ್ಕರಿಸಿದ್ದಾರೆ. ಈ ರೀತಿ ಮಾತನಾಡುವುದರಿಂದ ಓರ್ವ ಲೀಡರ್ ಆಗಬಹುದು ಎಂಬ ಅವರ ಆಸೆ ಈಡೇರದು ಎಂದು ಅವರು ಕುಟುಕಿದರು.ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಆಪರೇಷನ್ ವಿವಾದ ಎದ್ದಾಗ ಇವರು ಎಲ್ಲಿದ್ದರು? ಅವರ ಪಕ್ಷದವರೇ ತಮ್ಮ ಪಕ್ಷದವರೇ ಭಾಗಿಯಾಗಿದ್ದಾರೆ ಎಂದಿರುವಾಗ ಆ ವಿಡಿಯೋ ಹಂಚಿದವರ ವಿರುದ್ಧ ಕ್ರಮ ಏಕೆ? ಮೊದಲು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಿ, ಎಲ್ಲಾ ಮಾಹಿತಿ ಲಕ್ಷ್ಮಣ ಬಳಿ ಇದ್ದರೆ ಅವರೇ ಪ್ರಕರಣದ ತನಿಖೆ ನಡೆಸುವುದು ಸೂಕ್ತ ಎಂದು ಅವರು ವ್ಯಂಗ್ಯವಾಡಿದರು.ಮಾಜಿ ಮೇಯರ್ ಗಳಾದ ಎಂ.ಜೆ. ರವಿಕುಮಾರ್, ಆರ್. ಲಿಂಗಪ್ಪ, ನಗರ ಪಾಲಿಕೆ ಮಾಜಿ ಸದಸ್ಯೆ ಪ್ರೇಮಾ ಶಂಕರೇಗೌಡ, ರಾಮು ಮೊದಲಾದವರು ಇದ್ದರು.