ಸಾರಾಂಶ
ಕಾರವಾರ: ಇತಿಹಾಸವನ್ನು ಹೊಸ ದೃಷ್ಟಿಕೋನದಿಂದ ಅವಲೋಕಿಸಲು ಆರ್.ಎಸ್. ಹಬ್ಬು ಅವರ ಅನುವಾದಿತ ಕೃತಿ "ವಿಧಿಗೆ ಸವಾಲು " ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಖ್ಯಾತ ವಿಮರ್ಶಕ ಹಾಗೂ ವಿಶ್ರಾಂತಿ ಪ್ರಾಚಾರ್ಯ ಡಾ. ಆರ್.ಜಿ. ಹೆಗಡೆ ನುಡಿದರು.ಇಲ್ಲಿಯ ಶಿವಾಜಿ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕ, ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಶಿವಾಜಿ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ "ವಿಧಿಗೆ ಸವಾಲು " ಛತ್ರಪತಿ ಶಿವಾಜಿ ಜೀವನ ಚರಿತ್ರೆಯ ಅನುವಾದಿತ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಕೃತಿ ಪರಿಚಯ ಮಾಡಿದ ಅವರು ಶಿವಾಜಿಯಂಥ ಅಪ್ರತಿಮ ದೇಶಭಕ್ತ ಮತ್ತು ಈ ದೇಶದ ಮಹಾನಾಯಕರ ಕುರಿತು ನೂರಾರು ಕೃತಿಗಳು ಬಂದಿವೆ ಯಾರಾದರೂ ಇನ್ನೂ ಆಳವಾದ ಅಧ್ಯಯನ ಮಾಡಬೇಕಾಗಿದ್ದು ಎಷ್ಟು ಬರೆದರೂ ಸಾಲದು ಎಂದರು.
ಆರ್.ಎಸ್. ಹಬ್ಬು, ಮೇಧಾ ದೇಶಮುಖ್ ಭಾಸ್ಕರನ್ ಇಂಗ್ಲೀಷಿನಲ್ಲಿ ಬರೆದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರು ಅನುವಾದದಲ್ಲಿ ಬಳಸಿದ ಭಾಷೆ ಹಾಗೂ ನಿರೂಪಣೆ ಅತ್ಯಂತ ಪ್ರಬುದ್ಧವಾಗಿದ್ದು ಅದೊಂದು ಮೂಲ ಕೃತಿಯೆಂದೇ ಭಾಸವಾಗುತ್ತದೆ. ಅದು ಆರ್.ಎಸ್. ಹಬ್ಬು ಅವರ ಕನ್ನಡ ಭಾಷೆಯ ಮೇಲಿನ ಪ್ರಭುತ್ವದ ಪ್ರತೀಕವಾಗಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಸಂಪಾದಕ ಗಂಗಾಧರ ಹಿರೇಗುತ್ತಿ, ಆರ್.ಎಸ್. ಹಬ್ಬು ಅವರ ಈ ಕೃತಿ ಅನುವಾದ ಸಾಹಿತ್ಯದ ಹಿರಿಮೆಯನ್ನು ಸಾರಿದೆ. ಕಳೆದ ವರ್ಷ ಗಾಂಧಿ ಚರಿತ್ರೆ ಕನ್ನಡಾನುವಾದ ಓದುಗರಿಗೆ ನೀಡಿದ ಅವರು ಈ ವರ್ಷ ಶಿವಾಜಿ ಕೃತಿ ಅನುವಾದಿಸಿ ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ತಮ್ಮದೇ ಆದ ಕೊಡುಗೆ ನೀಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.ಮುಖ್ಯ ಅತಿಥಿಯಾಗಿ ಪುಸ್ತಕ ಬಿಡುಗಡೆ ಮಾಡಿದ ಕೆನರಾ ವೆಲ್ಫೇರ್ ಟ್ರಸ್ಟಿನ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಎಸ್.ಪಿ ಕಾಮತ್, ಆರ್.ಎಸ್ ಹಬ್ಬು ಅವರಿಗೆ ಕನ್ನಡ ಭಾಷೆಯ ಮೇಲೆ ಪ್ರಭುತ್ವ ಇದ್ದು ಅನುವಾದದ ಜೊತೆಗೆ ಸ್ವಂತ ಸೃಜನಶೀಲ ಸಾಹಿತ್ಯ ರಚನೆ ಮಾಡುವಂತೆ ಸಲಹೆ ನೀಡಿದರು.
ಕೃತಿಕಾರ ಆರ್.ಎಸ್ ಹಬ್ಬು, ಶಿವಾಜಿಯು ವ್ಯಕ್ತಿತ್ವ ಹಾಗೂ ಆತನ ವಿಭಿನ್ನ ಧನಾತ್ಮಕ ಗುಣಗಳನ್ನು ಮನಗಂಡು ವಿಧಿಗೆ ಸವಾಲು ಅನುವಾದ ಕೃತಿ ಬರೆಯಲು ಸಾಧ್ಯವಾಯಿತು. ಈ ಅನುವಾದ ಕೂಡ ತಮಗೊಂದು ಸವಾಲೇ ಆಗಿತ್ತು. ಆದರೂ ತಮಗೆ ತೃಪ್ತಿಯಿದೆ ಎಂದರು.ಕಸಾಪ ತಾಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ್ ಸ್ವಾಗತಿಸಿದರು. ಶಿವಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ ಪಿ. ನಾಯ್ಕ್ ಅಧ್ಯಕ್ಷೀಯ ಭಾಷಣ ಮಾಡಿದರು. ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ರಾಣೆ ವಂದಿಸಿದರು.