ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಬಾಲಕ ಮತ್ತು ಬಾಲಕಿಯರ ತಂಡಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಕ್ಕೆ ಆಯ್ಕೆಯಾಗಿದ್ದು, ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಕೀರ್ತಿ ತನ್ನಿ.
ಕನ್ನಡಪ್ರಭ ವಾರ್ತೆ ಮಂಡ್ಯ
ಕ್ರೀಡೆಗಳಲ್ಲಿ ಬರುವ ಸೋಲನ್ನೇ ಸವಾಲಾಗಿ ಸ್ವೀಕರಿಸುವವರೇ ಮುಂದೆ ಸಾಧಕರಾಗಿ ಬೆಳೆಯುತ್ತಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಪನಿರ್ದೇಶಕ ಸಿ.ಚಲುವಯ್ಯ ಹೇಳಿದರು.ನಗರದ ಪಿಇಟಿ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಪನಿರ್ದೇಶಕರ ಕಚೇರಿ ಹಾಗೂ ಜತನಾ ಶಿಕ್ಷಣ ಟ್ರಸ್ಟ್ ಪಿಇಎಸ್ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ 2 ದಿನ ಕಾಲ ನಡೆದ ರಾಜ್ಯ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಖೋ ಖೋ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಬಾಲಕ ಮತ್ತು ಬಾಲಕಿಯರ ತಂಡಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಕ್ಕೆ ಆಯ್ಕೆಯಾಗಿದ್ದು, ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಕೀರ್ತಿ ತನ್ನಿ ಎಂದು ಆಶಿಸಿದರು.ಅಂತಿಮವಾಗಿ ಮೈಸೂರು ಮತ್ತು ಬೆಂಗಳೂರು ಉತ್ತರ ತಂಡಗಳ ನಡುವೆ ಸೆಣಸಾಟ ನಡೆದು ಮೈಸೂರು ತಂಡ ಗೆಲುವು ಸಾಧಿಸಿ ಪ್ರಥಮ ಬಹುಮಾನ, ಬಾಲಕರ ತಂಡದ ದಾವಣಗೆರೆ ಮತ್ತು ಬೆಂಗಳೂರು ತಂಡಗಳ ನಡುವೆ ನೇರಾ ಸೆಣಸಾಟ ನಡೆದು ದಾವಣಗೆರೆ ತಂಡ ಪ್ರಥಮ ಸ್ಥಾನ ಪಡೆಯಿತು.
ಕಾರ್ಯಕ್ರಮದಲ್ಲಿ ಪಿಇಟಿ ಕಾರ್ಯದರ್ಶಿ ಶಿವಪ್ರಸಾದ್ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಎಲ್.ಕೃಷ್ಣೇಗೌಡ, ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಕಾಂತರಾಜು, ನಿಂಗೇಗೌಡ, ಕ್ರೀಡಾ ಸಂಯೋಜಕ ಎಸ್.ಎಂ.ಗುರುಸ್ವಾಮಿ, ಪಿಇಎಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಸಣ್ಣಮೊಗ, ದೈಹಿಕ ಶಿಕ್ಷಣ ಉಪನ್ಯಾಸಕ ಬಿ.ಎಂ.ಲೋಕೇಶ್, ದೈಹಿಕ ಶಿಕ್ಷಕ ಉಪನ್ಯಾಸಕ ಗೋಪಾಲಕೃಷ್ಣ, ನೋಡಲ್ ಅಧಿಕಾರಿಗಳಾದ ಜಗದೀಶ್, ರಮೇಶ್ ಛಲವಾದಿ, ಪ್ರಾಂಶುಪಾಲೆ ವೀಣಾ, ಎಸ್.ಓ ಅಶ್ವಿನಿ, ಮೋಹನ್, ಸಿಬ್ಬಂದಿ ಇದ್ದರು.