ಸಾರಾಂಶ
ಈ ಘಟನೆ ಎಲ್ಲರಲ್ಲಿಯೂ ಆಘಾತ ಉಂಟು ಮಾಡಿದೆ. ಈ ಘಟನೆಯನ್ನು ಯಾರೂ ಊಹೆ ಮಾಡಲು ಸಾಧ್ಯವಿಲ್ಲ. ದುಷ್ಕರ್ಮಿಗಳಿಗೆ ಯಾವುದೇ ಭಯ ಇಲ್ಲ. ಸರ್ಕಾರ, ಪೊಲೀಸರ ಭಯ ಇಲ್ಲ
ಗದಗ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರು, ಸಮಾಜ ಘಾತುಕರೇ ಪ್ರಥಮ ಪ್ರಜೆಗಳಾಗಿದ್ದು, ಅವರಿಗೆ ರಾಜ್ಯದಲ್ಲಿ ಮರ್ಯಾದೆ ಸಿಗುತ್ತಿದೆ. ಗದಗನಲ್ಲಿ ನಾಲ್ವರನ್ನು ಹತ್ಯೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.
ಶನಿವಾರ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಸೇರಿದಂತೆ ಕುಟುಂಬದ ನಾಲ್ವರ ಹತ್ಯೆಯಾಗಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.ಜನನಿಬಿಡ ಪ್ರದೇಶದಲ್ಲಿ ಬಂದು ಧೈರ್ಯವಾಗಿ ಕೊಲೆ ಮಾಡಿದ್ದಾರೆ ಎಂದರೆ ಅವರಿಗೆ ಭಯ ಇಲ್ಲ. ಕೊಲೆ ಮಾಡಿದವರನ್ನು ಗಲ್ಲಿಗೇರಿಸಬೇಕು. ಈ ಪ್ರಕರಣದಲ್ಲಿ ಸರ್ಕಾರ ಬದುಕಿದೆಯೋ ಸತ್ತಿದೆಯೋ ಎನ್ನುವುದು ಗೊತ್ತಾಗುತ್ತದೆ. ನಾವು ಈ ಕುಟುಂಬದ ಜತೆಗೆ ಇರುತ್ತೇವೆ. ಈ ಜನರ ಜತೆಗೆ ನಾವಿದ್ದೇವೆ ಎಂದು ಹೇಳಿದರು.
ಈ ಘಟನೆ ಎಲ್ಲರಲ್ಲಿಯೂ ಆಘಾತ ಉಂಟು ಮಾಡಿದೆ. ಈ ಘಟನೆಯನ್ನು ಯಾರೂ ಊಹೆ ಮಾಡಲು ಸಾಧ್ಯವಿಲ್ಲ. ದುಷ್ಕರ್ಮಿಗಳಿಗೆ ಯಾವುದೇ ಭಯ ಇಲ್ಲ. ಸರ್ಕಾರ, ಪೊಲೀಸರ ಭಯ ಇಲ್ಲ. ಯಾವ ಹಂತಕ್ಕೆ ಕುಸಿದಿದೆ ಎಂದು ಬೇಸರವಾಗುತ್ತದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಕೊಲೆಯಾಗಿದೆ. ವಿದ್ಯಾರ್ಥಿನಿ ಕೊಲೆ ನಡೆದ ದಿನವೇ ರಾತ್ರಿ ಗದಗನಲ್ಲಿ ದುಷ್ಕರ್ಮಿಗಳು ಅಷ್ಟೊಂದು ಧೈರ್ಯದಿಂದ ಕೊಲೆ ಮಾಡುತ್ತಾರೆ. ಈ ಸರ್ಕಾರದ ಮೃದು ಧೋರಣೆಯೇ ಕಾರಣ ಎಂದರು.ಡಿಜಿಪಿ, ಐಜಿಪಿ ಎಲ್ಲಿದ್ದಾರೆ, ಉತ್ತರ ಕರ್ನಾಟಕ ಭಾಗಕ್ಕೆ ಒಮ್ಮೆಯಾದರೂ ಒಂದು ರೌಡಿಗಳ ಪರೇಡ್ ಮಾಡಿದ್ದೀರಾ? ಗದಗನಲ್ಲಿ ರೌಡಿಗಳ ಪರೇಡ್ ಮಾಡಿಸಿದ್ದೀರಾ? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ನರಗುಂದ ಶಾಸಕ ಮಾಜಿ ಸಚಿವ ಸಿ.ಸಿ. ಪಾಟೀಲ್, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ಬಾಕಳೆ ಕುಟುಂಬ ಸದಸ್ಯರು ಹಾಜರಿದ್ದರು.