ದೇವರನ್ನು ಪೂಜಿಸುವವರಿಗೆ ಆಷಾಢಭೂತಿತನ ಇರಬಾರದು: ಸಿಎಂ ಸಿದ್ದರಾಮಯ್ಯ

| Published : Apr 23 2025, 12:30 AM IST

ದೇವರನ್ನು ಪೂಜಿಸುವವರಿಗೆ ಆಷಾಢಭೂತಿತನ ಇರಬಾರದು: ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ದೇವರನ್ನು ಅರಸಿ ಹೋಗುವುದಿಲ್ಲ. ಆದರೆ, ದೇವಸ್ಥಾನಗಳಿಗೆ ಹೋಗುತ್ತೇನೆ ಏಕೆಂದರೆ ದೇವರನ್ನು ಪೂಜಿಸುವವರಿಗೆ ಆಷಾಡಭೂತಿತನ ಇರಬಾರದು. ಯಾರಲ್ಲಿ ಶ್ರದ್ಧೆ ಭಕ್ತಿ ಇರುತ್ತದೆಯೋ ಅವರಿಗೆ ಮಾತ್ರ ದೇವರು ಒಲಿಯುತ್ತಾನೆ. ಸಮಾಜದಲ್ಲಿ ನಾವು ಮಾಡಬಾರದ ಕೆಟ್ಟ ಕೆಲಸಗಳನ್ನೆಲ್ಲಾ ಮಾಡಿ ದೇವರ ಪೂಜೆ ಮಾಡಿದ ತಕ್ಷಣ ಪಾಪ ಕಾರ್ಯ ಹೋಗುವುದಿಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸಮಾಜದಲ್ಲಿ ಎಲ್ಲಾ ಜಾತಿ, ಧರ್ಮದವರಿಗೂ ಅವರದ್ದೇ ಆದ ನಂಬಿಕೆಗಳಿರುತ್ತವೆ. ಒಬ್ಬರ ನಂಬಿಕೆ ಬಗ್ಗೆ ಉಳಿದವರೆಲ್ಲರಿಗೂ ಗೌರವ ಇರಬೇಕು. ಪರಸ್ಪರ ಗೌರವಗಳಿಂದ ಎಲ್ಲರ ನಂಬಿಕೆ ಕಾಣಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ದೊಡ್ಡಬಾಲ ಗ್ರಾಮದಲ್ಲಿ 39 ವರ್ಷಗಳ ನಂತರ ನಡೆಯುತ್ತಿರುವ ಶ್ರೀಹುಚ್ಚಪ್ಪಸ್ವಾಮಿ ಮತ್ತು 14 ಕೂಟದ ದೇವರುಗಳ ಜಾತ್ರಾ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾನು ದೇವರನ್ನು ಅರಸಿ ಹೋಗುವುದಿಲ್ಲ. ಆದರೆ, ದೇವಸ್ಥಾನಗಳಿಗೆ ಹೋಗುತ್ತೇನೆ ಏಕೆಂದರೆ ದೇವರನ್ನು ಪೂಜಿಸುವವರಿಗೆ ಆಷಾಢಭೂತಿತನ ಇರಬಾರದು ಎಂದರು.

ಯಾರಲ್ಲಿ ಶ್ರದ್ಧೆ ಭಕ್ತಿ ಇರುತ್ತದೆಯೋ ಅವರಿಗೆ ಮಾತ್ರ ದೇವರು ಒಲಿಯುತ್ತಾನೆ. ಸಮಾಜದಲ್ಲಿ ನಾವು ಮಾಡಬಾರದ ಕೆಟ್ಟ ಕೆಲಸಗಳನ್ನೆಲ್ಲಾ ಮಾಡಿ ದೇವರ ಪೂಜೆ ಮಾಡಿದ ತಕ್ಷಣ ಪಾಪ ಕಾರ್ಯ ಹೋಗುವುದಿಲ್ಲ ಎಂದರು.

ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಮತ್ತೊಂದು ಜಾತಿ ಧರ್ಮದ ಬಗ್ಗೆ ಸಹಿಷ್ಣತೆ ಬೆಳೆಸಿಕೊಳ್ಳಬೇಕು. ಜಾತಿ ವ್ಯವಸ್ಥೆಯನ್ನು ನಾವು ಮಾಡಿದ್ದಲ್ಲ. ಪಟ್ಟಭದ್ರ ಹಿತಾಶಕ್ತರು ತಮ್ಮ ಸ್ವಾರ್ಥಕ್ಕಾಗಿ ಜಾತಿ ಮಾಡಿದ್ದಾರೆ. ಜಾತಿಯನ್ನು ಸಂಘಟನೆ ಮಾಡಿ ಅಭಿವೃದ್ಧಿಪಡಿಸಿ ಅವರಿಗೆ ನಾಯಕತ್ವ ಕೊಟ್ಟು ಸಮಾಜದ ಮುಖ್ಯವಾಹಿನಿಗೆ ತರುವುದು ಎಲ್ಲರ ಕರ್ತವ್ಯ ಎಂದರು.

ಸಮಾಜದ ಎಲ್ಲ ಜಾತಿ ಧರ್ಮದವರು ವಿದ್ಯಾವಂತರಾಗಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವಾಗಿತ್ತು. ಅವಕಾಶಗಳಿಂದ ವಂಚಿತರಾಗಿರುವ ಶೂದ್ರ ವರ್ಗದ ಜನರು ಶಿಕ್ಷಣ ಪಡೆದು ಸಂಘಟನೆ ಮತ್ತು ಹೋರಾಟ ಮಾಡದಿದ್ದರೆ ಈ ಜಾತಿ ವ್ಯವಸ್ಥೆಯ ಕೂಪದಲ್ಲಿರುವ ನಾವು ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ ಎಂದರು.

ಸ್ವಾತಂತ್ರ್ಯ, ಸಮಾನತೆ, ಬಾತೃತ್ವ ಎಲ್ಲರಿಗೂ ಬರಬೇಕೆಂದು ನಮ್ಮ ದೇಶದ ಸಂವಿಧಾನ ಹೇಳುತ್ತದೆ. ನಮ್ಮ ದೇಶದಲ್ಲಿ ಅನೇಕ ಜಾತಿ-ಧರ್ಮ ಭಾಷೆಗಳಿವೆ. ಹಾಗಾಗಿ ನಾವೆಲ್ಲರೂ ಒಟ್ಟಾಗಿ ಬಾಳಬೇಕು. ಮನುಷ್ಯತ್ವವನ್ನು ಮರೆಯಬಾರದು ಎಂದರು.

ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಲ್ಲಿ ಎಲ್ಲರ ನಂಬಿಕೆ ಆಚರಣೆಗಳಿಗೆ ಅವಕಾಶವಿದೆ. ನಮ್ಮ ಸಂವಿಧಾನ ಕೊಟ್ಟಿರುವ ಅವಕಾಶದಿಂದ ನಾನು ಶಿಕ್ಷಣ ಪಡೆದು ಮುಖ್ಯಮಂತ್ರಿಯಾಗಿದ್ದೇನೆ. ಡಾ.ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಿದ್ದಾರೆ ಎಂದರು.

ಎಲ್ಲಾ ಜಾತಿ ಧರ್ಮಗಳ ಮಕ್ಕಳೂ ಕೂಡ ಶಿಕ್ಷಣ ಪಡೆದು ವೈದ್ಯ, ಎಂಜಿನಿಯರ್, ವಿಜ್ಞಾನಿ, ಐಎಎಸ್, ಐಪಿಎಸ್‌ನಂತಹ ಉನ್ನತ ಸ್ಥಾನಕ್ಕೇರಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಇಲ್ಲದಿದ್ದರೆ ಜಾತಿ ವ್ಯವಸ್ಥೆ ನಿಂತ ನೀರಿನಂತೆ ಚಲನೆ ಇಲ್ಲದಂತಾಗುತ್ತದೆ. ಆರ್ಥಿಕ ಸಾಮಾಜಿಕ ರಾಜಕೀಯ ಶಕ್ತಿ ಎಲ್ಲರಿಗೂ ಬಂದಾಗ ಮಾತ್ರ ಚಲನೆ ಸಿಗಲು ಸಾಧ್ಯವಾಗುತ್ತದೆ. ಇದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದರು.

ಸಂಸ್ಕೃತ ಕಲಿಯುವ ಶೂದ್ರರ ಕಿವಿಗೆ ಕಾದ ಸೀಸವನ್ನು ಸುರಿಯುತ್ತಿದ್ದ ಕಾಲವೊಂದಿತ್ತು. ಸಂವಿಧಾನದ ಕಾರಣದಿಂದ ಇಂಥಾ ಸ್ಥಿತಿ ಹೋಗಿ ನಮಗೆಲ್ಲಾ ಶಿಕ್ಷಣ ಸಿಕ್ಕಿದೆ. ನಾನು ಮುಖ್ಯಮಂತ್ರಿಯಾದ ನಂತರ ಎಲ್ಲ ವರ್ಗಗಳ ಜನರಿಗೆ ಅನೇಕ ಭಾಗ್ಯಗಳನ್ನು ಕೊಟ್ಟಿದ್ದೇನೆ ಎಂದರು.

ತಾಲೂಕಿನ ಜನ ಬಹಳ ದೈವಭಕ್ತರು. ನಾಗಮಂಗಲ ತಾಲೂಕಿನಲ್ಲಿ ಚಿಗರಿಗೌಡರಂತ ವ್ಯಕ್ತಿ ಶಾಸಕರಾಗುವುದು ಅಷ್ಟು ಸುಲಭವಲ್ಲ. ಎಲ್ಲ ಜನರ ಪ್ರೀತಿ, ವಿಶ್ವಾಸಗಳಿಸಿ ಚಲುವರಾಯಸ್ವಾಮಿ ಶಾಸಕರಾಗಿ, ಸಚಿವರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದರೆ, ಅದರ ಕ್ರೆಡಿಟ್ ಬೇರೆಯವರು ತೆಗೆದುಕೊಂಡರು ಎಂದರು.