ವಿಜಯನಗರ ಜಿಲ್ಲೆಯಲ್ಲಿ 3 ಸಾವಿರ ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯುವ ಗುರಿ: ಚಿದಾನಂದ

| Published : Aug 28 2024, 12:51 AM IST

ವಿಜಯನಗರ ಜಿಲ್ಲೆಯಲ್ಲಿ 3 ಸಾವಿರ ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯುವ ಗುರಿ: ಚಿದಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ದಾಳಿಂಬೆ ಬೆಳೆ ಸಮಗ್ರ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರವು ದೇಶಾದ್ಯಂತ 53 ಕ್ಲಸ್ಟರ್‌ಗಳನ್ನು ಗುರುತಿಸಿದೆ.

ಹೊಸಪೇಟೆ: ಕೇಂದ್ರಸರ್ಕಾರ ದಾಳಿಂಬೆ ಕ್ಲಸ್ಟರ್ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ ಹಗರಿಬೊಮ್ಮನಹಳ್ಳಿ ಮತ್ತು ಕೂಡ್ಲಿಗಿ ತಾಲೂಕುಗಳಲ್ಲಿ 3 ಸಾವಿರ ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯನ್ನು ಬೆಳೆಯುವ ಗುರಿ ಹೊಂದಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಪಿ.ಜಿ. ಚಿದಾನಂದ ತಿಳಿಸಿದರು.ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದಾಳಿಂಬೆ ಬೆಳೆ ಸಮಗ್ರ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರವು ದೇಶಾದ್ಯಂತ 53 ಕ್ಲಸ್ಟರ್‌ಗಳನ್ನು ಗುರುತಿಸಿದ್ದು, ರಾಜ್ಯದ ತುಮಕೂರು, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳು ಸೇರಿವೆ. ತುಮಕೂರು ಜಿಲ್ಲೆಯ ಶಿರಾ, ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಕೂಡ್ಲಿಗಿ ತಾಲೂಕುಗಳು ಈ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಯಾಗಿವೆ. ರೈತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಸೋಸಿಯೇಟೆಡ್ ಇಂಡಸ್ಟ್ರಿಯಲ್ ಕಾರ್ಪೊರೇಷನ್ (ಎಐಸಿ) ಯೋಜನಾ ಅನುಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.

ಒಟ್ಟು ೫ ವರ್ಷಗಳ ಈ ಯೋಜನೆಗೆ ರಾಷ್ಟ್ರೀಯ ತೋಟಗಾರಿಕೆ ಮಂಡಳಿ, ಕ್ಯಾಪ್ಪೆಕ್ (ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ) ಹಾಗೂ ಎಐಸಿ ತ್ರಿಪಕ್ಷೀಯ ಸಹಯೋಗದಲ್ಲಿ ಚಾಲನೆ ನೀಡಲಾಗಿದೆ. ಮಳೆ ಕಡಿಮೆ ಬೀಳುವ ಪ್ರದೇಶಗಳು ದಾಳಿಂಬೆ ಬೆಳೆಗೆ ಸೂಕ್ತ ಎಂದು ಪರಿಗಣಿಸಲಾಗಿದ್ದು, ಅದರ ಜೊತೆಗೆ ಇಲ್ಲಿನ ಮಣ್ಣಿನ ಗುಣವು ಬೆಳೆಗೆ ಅನುಕೂಲಕರವಾಗಿದೆ. ರೈತರಿಗೆ ಶೇ.೪೦ರಷ್ಟು ಸಬ್ಸಿಡಿ ದರದಲ್ಲಿ ಸಮಗ್ರ ಸೌಲಭ್ಯದ ಬೆಂಬಲ ಒದಗಿಸಲಾಗುತ್ತದೆ. ಒಟ್ಟಾರೆ, ಈ ಪ್ರದೇಶದಲ್ಲಿ 15,000 ಎಕರೆ ವಿಸ್ತೀರ್ಣವನ್ನು (ಸುಮಾರು 6000 ಹೆಕ್ಟೇರ್) ಯೋಜನೆಯ ವ್ಯಾಪ್ತಿಗೆ ಒಳಪಡಿಸುವ ಗುರಿಹಾಕಿಕೊಳ್ಳಲಾಗಿದೆ ಎಂದರು.

ಎಐಸಿ ಸಮಾಲೋಚಕ ಮನೋಜ್ ಕುಶಾಲಪ್ಪ ಮಾತನಾಡಿ, ಯೋಜನೆಯಡಿ ರೈತರಿಗೆ ನಾಟಿಯಿಂದ ಮಾರುಕಟ್ಟೆವರೆಗೆ ತಲುಪಿಸಲು ಎಲ್ಲ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಸಂಸ್ಥೆ ಮಾಡಲಿದೆ. ಕೇಂದ್ರ ಸರಕಾರ ಅಭಿವೃದ್ಧಿಪಡಿಸಿರುವ ‘ಸುರಕ್ಷಾ’ ಆ್ಯಪ್ ಮೂಲಕ ಈಗಾಗಲೇ ದಾಳಿಂಬೆ ಬೆಳೆಯುತ್ತಿರುವ ಹಾಗೂ ಹೊಸದಾಗಿ ಬೆಳೆಯುವ ರೈತರ ನೋಂದಣಿ ಮಾಡಿಕೊಳ್ಳುವುದು, ರೈತರ ಆದಾಯ ಹೆಚ್ಚಾಗಲು ಯೋಜನೆಯಡಿ ಮಣ್ಣು ಹಾಗೂ ನೀರಿನ ಪರೀಕ್ಷೆ, ರೋಗ ರಹಿತ ದಾಳಿಂಬೆ ಸಸಿ ನೀಡುವಿಕೆ, ರಸಗೊಬ್ಬರ, ಔಷಧಿ, ಹನಿನೀರಾವರಿ, ಟ್ರ‍್ಯಾಕ್ಟರ್, ಟಿಲ್ಲರ್, ಸ್ಪ್ರೇಯರ್ ಸೇರಿದಂತೆ ಅಗತ್ಯ ಎಲ್ಲ ಆಧುನಿಕ ಯಂತ್ರೋಪಕರಣಗಳು ವಿತರಣೆ, ಬೆಳೆದ ದಾಳಿಂಬೆಯನ್ನು ಸೂಕ್ತ ಬೆಲೆಗೆ ಗ್ರಾಹಕರಿಗೆ ಮಾರುಕಟ್ಟೆ ತಲುಪಿಸುವ ಉದ್ದೇಶವನ್ನು ಎಐಸಿ ಹೊಂದಿದೆ ಎಂದರು.

ಎಐಸಿ ಸಂಸ್ಥೆಯು ಚಿತ್ರದುರ್ಗದಲ್ಲಿ ಕೇಂದ್ರ ಕಚೇರಿ ತೆರೆಯಲಿದೆ. ದಾಳಿಂಬೆ ಬೆಳೆಯುವ ರೈತರು ಸಂಸ್ಥೆಯ ಮೂಲಕ ನೋಂದಣಿ ಮಾಡಿಕೊಂಡು ಯೋಜನೆಯ ಸೌಲಭ್ಯ ಪಡೆಯಬಹುದು.

ಸಂಸ್ಥೆಯ ಯೋಜನಾ ನಿರ್ದೇಶಕ ಎಂ.ಚಂದ್ರಶೇಖರ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಜೇಂದ್ರ ಎಚ್. ಇದ್ದರು.

ಹೊಸಪೇಟೆಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಪಿ.ಜಿ.ಚಿದಾನಂದ ಮಾತನಾಡಿದರು. ಎಐಸಿ ಸಮಾಲೋಚಕ ಮನೋಜ್ ಕುಶಾಲಪ್ಪ ಮತ್ತಿತರರಿದ್ದರು.