ಸಾರಾಂಶ
ಉಗ್ರಾಣದಲ್ಲಿ ನೂರಾರು ರೈತರಿಂದ ಸಂಗ್ರಹಿಸಿ ಇಡಲಾಗಿದ್ದ ಸಾವಿರಾರು ಧಾನ್ಯದ ಚೀಲಗಳು ಏಕಾಏಕಿ ಕಾಣೆಯಾಗಿರುವ ವಿಷಯ ಕೇಳಿ ಉಗ್ರಾಣಕ್ಕೆ ದೌಡಾಯಿಸಿದ ನೂರಾರು ರೈತರು ಉಗ್ರಾಣದ ಮ್ಯಾನೇಜರ್‌ನ ಸಂಪರ್ಕಿಸಿದಾಗ ಯಾರ ಕರೆಯನ್ನೂ ಸ್ವೀಕರಿಸುತ್ತಿಲ್ಲ.
ಅಣ್ಣಿಗೇರಿ:
ಪಟ್ಟಣದ ಎಪಿಎಂಸಿ ಯಾರ್ಡ್ ಆವರಣದಲ್ಲಿರುವ ರಾಜ್ಯ ಉಗ್ರಾಣದಲ್ಲಿ ಸಂಗ್ರಹಿಸಿಡಲಾಗಿದ್ದ 2480 ಕಡಲೆ ಹಾಗೂ 1250 ಹೆಸರು ಚೀಲಗಳು ಕಳ್ಳತನವಾಗಿರುವ ಘಟನೆ ಮಂಗಳವಾರ ನಡೆದಿದೆ. ಒಂದು ಕೋಟಿಗೂ ಅಧಿಕ ಮೊತ್ತದ ಧಾನ್ಯಚೀಲಗಳು ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.ಉಗ್ರಾಣದಲ್ಲಿ ನೂರಾರು ರೈತರಿಂದ ಸಂಗ್ರಹಿಸಿ ಇಡಲಾಗಿದ್ದ ಸಾವಿರಾರು ಧಾನ್ಯದ ಚೀಲಗಳು ಏಕಾಏಕಿ ಕಾಣೆಯಾಗಿರುವ ವಿಷಯ ಕೇಳಿ ಉಗ್ರಾಣಕ್ಕೆ ದೌಡಾಯಿಸಿದ ನೂರಾರು ರೈತರು ಉಗ್ರಾಣದ ಮ್ಯಾನೇಜರ್‌ನ ಸಂಪರ್ಕಿಸಿದಾಗ ಯಾರ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಅವರೇ ಕಳ್ಳತನ ಮಾಡಿರಬಹುದು ಎಂದು ಹಲವು ರೈತರು ಆರೋಪಿಸಿದ್ದಾರೆ.
ಘಟನೆಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಉಗ್ರಾಣ ನಿಗಮದ ಧಾರವಾಡ ವಿಭಾಗೀಯ ಅಧಿಕಾರಿ ಡಾ. ನೀಲಪ್ಪ ಲಮಾಣಿ ಕಡತ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಸುದೀರ್ಘ ಲೆಕ್ಕ ಪರಿಶೋಧನೆ ಮಾಡುತ್ತಿದ್ದು ಸಂಪೂರ್ಣ ವರದಿ ಬಂದ ನಂತರ ಮ್ಯಾನೇಜರ್ ಮೇಲೆ ಕಾನೂನಾತ್ಮಕ ಕ್ರಮಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವುದಾಗಿ ತಿಳಿಸಿದರು.ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರು ಎಂಬುದನ್ನು ಸಮಗ್ರವಾಗಿ ಪರಿಶೀಲಿಸಲು ಪೊಲೀಸರಿಗೆ ತಿಳಿಸಿದ್ದೇನೆ. ಯಾರು ತಪ್ಪು ಮಾಡಿದ್ದಾರೆಯೋ ಅವರ ಮೇಲೆ ಸೂಕ್ತ ಕಠಿಣ ಕಾನೂನು ಕ್ರಮಕೈಗೊಂಡು ರೈತರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡುವೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಭರವಸೆ ನೀಡಿದ್ದಾರೆ.ನಾವು ಕಷ್ಟಪಟ್ಟು ಬೆಳೆದ ಕಾಳುಗಳನ್ನು ಸಂಗ್ರಹಿಸಿಡುವುದಕ್ಕಾಗಿ ಈ ಉಗ್ರಾಣದಲ್ಲಿ ಇರಿಸಿದ್ದೆವು. ಈಗ ಅವುಗಳೇ ಕಳ್ಳತನವಾಗಿವೆ. ಇದರಿಂದಾಗಿ ನಮಗೆ ದಿಕ್ಕೇ ತೋಚದಂತಾಗಿದೆ. ಕಳ್ಳತನ ಮಾಡಿರುವವನ್ನು ಪತ್ತೆಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಿ ಎಂದು ರೈತ ಬಿ.ಎಚ್. ದೊಡ್ಡಗೌಡರ ಆಗ್ರಹಿಸಿದ್ದಾರೆ.