ಸಾರಾಂಶ
ಶನಿವಾರ ನಿಧನರಾದ ಹಿರಿಯ ವಿದ್ವಾಂಸ, ಯಕ್ಷಗಾನ ಪ್ರಸಂಗಕರ್ತ ಅಮೃತ ಸೋಮೇಶ್ವರ ಅವರ ಅಂತ್ಯ ಸಂಸ್ಕಾರ ಭಾನುವಾರ ನೆರವೇರಿತು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಶನಿವಾರ ಬೆಳಗ್ಗೆ ಅಸ್ತಂಗತರಾದ ಯಕ್ಷಗಾನ ಪ್ರಸಂಗ ಕರ್ತೃ, ಸಂಶೋಧಕ, ಅನುವಾದ, ವಿಮರ್ಶಕ, ಜಾನಪದ ತಜ್ಞ ಡಾ. ಅಮೃತ ಸೋಮೇಶ್ವರ ಅವರ ಅಂತಿಮ ಸಂಸ್ಕಾರ ಭಾನುವಾರ ಕೋಟೆಕಾರು ಮಾಡೂರಿನ ರುದ್ರಭೂಮಿಯಲ್ಲಿ ನೆರವೇರಿತು.ಭಾನುವಾರ ಅಂತಿಮ ದರ್ಶನಕ್ಕೆ ಸಹಸ್ರಾರು ಹಿತೈಷಿಗಳು, ಸಾಹಿತಿಗಳು, ಅವರ ಸಹವರ್ತಿಗಳು, ಜನಪ್ರತಿನಿಧಿಗಳು ಸೇರಿದಂತೆ ಅಭಿಮಾನಿಗಳು ಸೋಮೇಶ್ವರದ ಅವರ ನಿವಾಸ`ಒಲುಮೆ''''''''ಗೆ ಆಗಮಿಸಿ ಅಂತಿಮ ದರ್ಶನ ಪಡೆದಿದರು. ಭಾನುವಾರ 11.30ಕ್ಕೆ ಡಾ. ಸೋಮೇಶ್ವರ ಅವರ ಪಾರ್ಥಿವಶರೀರವನ್ನು ಮನೆಯಿಂದ ರುದ್ರಭೂಮಿಗೆ ಕೊಂಡೊಯ್ಯಲಾಯಿತು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಬೆಳಗ್ಗೆ ನಿಧನ ಹೊಂದಿದ್ದರು. ಶನಿವಾರ ಸಂಜೆ 5 ಗಂಟೆಯ ಬಳಿಕ ಅವರ ಪಾರ್ಥೀವ ಶರೀರರವನ್ನು ಅಂತಿಮ ದರ್ಶನಕ್ಕಾಗಿ ಅವರ ಸ್ವಗೃಹದಲ್ಲಿ ಇರಿಸಲಾಗಿತ್ತು. ಶನಿವಾರ ಸಂಜೆಯಿಂದ ಭಾನುವಾರ ಬೆಳಗ್ಗೆ 11.30ರ ವರೆಗೆ ಸಹಸ್ರಾರು ಜನರು ಆಗಮಿಸಿ ಅಂತಿಮ ದರ್ಶನ ಪಡೆದರು.ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಭಾನುವಾರ ಬೆಳಗ್ಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಾ. ಭರತ್ ಶೆಟ್ಟಿ, ಮಾಜಿ ಶಾಸಕರಾದ ಕೆ. ಜಯರಾಮ ಶೆಟ್ಟಿ, ಜೆ.ಆರ್. ಲೋಬೋ, ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎ. ವಿವೇಕ್ ರೈ, ಡಾ.ಕೆ. ಚಿನ್ನಪ್ಪ ಗೌಡ, ಯಕ್ಷಗಾನ ವಿಧ್ವಾಂಸ ಡಾ. ಪ್ರಭಾಕರ ಜೋಷಿ, ಸಾಹಿತಿಗಳಾದ ಡಾ. ತಾಳ್ತಜೆ ವಸಂತ ಕುಮಾರ್ ಸೇರಿದಂತೆ ಗಣ್ಯರು ಅಂತಿಮ ನಮನ ಸಲ್ಲಿಸಿದರು.