ಸಾರಾಂಶ
ಕನ್ನಡ ಮಾಧ್ಯಮ ಶಾಲೆಗಳನ್ನು ಕೇಳುವವರಿಲ್ಲ. ಅದಕ್ಕೆಂದೂ ಭವಿಷ್ಯವೇ ಇಲ್ಲ ಎನ್ನುವ ವಾತಾವರಣದ ನಡುವೆ ನಾಡಿನ ಮೂಲೆ ಮೂಲೆಯಿಂದ ಮೂಡುಬಿದಿರೆಯ ವಿದ್ಯಾಗಿರಿಗೆ 15986ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಅವರ ಪೋಷಕರು ಕನ್ನಡ ಮಾಧ್ಯಮ ಶಾಲೆಯಲ್ಲಿ ದಾಖಲಾತಿಗಾಗಿ ಪ್ರವೇಶ ಪರೀಕ್ಷೆ ಬರೆಯಲು ಬಂದಿದ್ದರು.
ಗಣೇಶ್ ಕಾಮತ್
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಕನ್ನಡ ಮಾಧ್ಯಮ ಶಾಲೆಗಳನ್ನು ಕೇಳುವವರಿಲ್ಲ. ಅದಕ್ಕೆಂದೂ ಭವಿಷ್ಯವೇ ಇಲ್ಲ ಎನ್ನುವ ವಾತಾವರಣದ ನಡುವೆ ನಾಡಿನ ಮೂಲೆ ಮೂಲೆಯಿಂದ ಮೂಡುಬಿದಿರೆಯ ವಿದ್ಯಾಗಿರಿಗೆ 15986ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಅವರ ಪೋಷಕರು ಕನ್ನಡ ಮಾಧ್ಯಮ ಶಾಲೆಯಲ್ಲಿ ದಾಖಲಾತಿಗಾಗಿ ಪ್ರವೇಶ ಪರೀಕ್ಷೆ ಬರೆಯಲು ಬಂದಿದ್ದರು. ಒಂದು ವಾರದೊಳಗೆ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿ, ದಾಖಲಾತಿ ಪ್ರಕ್ರಿಯೆ ಮುಗಿಯಲಿದೆ.
ಎಲ್ಲೆಲ್ಲೂ ವಿದ್ಯಾರ್ಥಿಗಳೇ....: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆ, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ೨೦೨೪- ೨೫ನೇ ಸಾಲಿನ, ೬ರಿಂದ ೯ನೇ ತರಗತಿಯ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯಕ್ಕೆ ನಡೆಸುವ ಪ್ರವೇಶ ಪರೀಕ್ಷೆಯು ಮೂಡುಬಿದಿರೆಯ ವಿದ್ಯಾಗಿರಿ ಹಾಗೂ ಪುತ್ತಿಗೆ ಆವರಣದಲ್ಲಿ ಭಾನುವಾರ ನಡೆಯಿತು.
ರಾಜ್ಯಾದ್ಯಂತ ೩೨ ಶೈಕ್ಷಣಿಕ ಜಿಲ್ಲೆಗಳ 19224 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 15986 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 6ನೇ ತರಗತಿಗೆ 11795, 7ನೇ ತರಗತಿಗೆ 1438, 8ನೇ ತರಗತಿಗೆ 1889 ಹಾಗೂ 9 ನೇ ತರಗತಿಗೆ 684 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದರು. ಬೆಳಗಾವಿ ಜಿಲ್ಲೆಯಿಂದ 5237 ವಿದ್ಯಾರ್ಥಿಗಳು, ಬಾಗಲಕೋಟೆ ಹಾಗೂ ವಿಜಯಪುರದಿಂದ ಕ್ರಮವಾಗಿ 2783 ಹಾಗೂ 1554 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.
ಭಾನುವಾರ ಬೆಳಗಾಗುತ್ತಿದ್ದಂತೆ ನಾಡಿನ ಎಲ್ಲೆಡೆಯಿಂದ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಸತಿ, ಸುಧಾರಿಸಲು ವ್ಯವಸ್ಥೆ ಒದಗಿಸಿದ್ದರೂ ಹೆಚ್ಚಿನ ಪೋಷಕರು, ವಿದ್ಯಾಗಿರಿಯ ಪರೀಕ್ಷಾ ಕೇಂದ್ರಗಳ ಕಟ್ಟಡದ ಹೊರ ಭಾಗದಲ್ಲಿ ವಿಶಾಲ ರಾಜ ಬೀದಿ, ಹಸಿರ ಮಡಿಲ ಆವರಣದಲ್ಲಿ ಕಟ್ಟಡ,ಉದ್ಯಾನವನದ ನೆರಳಲ್ಲಿ ದಣಿವಾರಿಸಿಕೊಳ್ಳುತ್ತಿದ್ದ, ಲಗ್ಗೇಜುಗಳ ರಾಶಿ ನಡುವೆ ನಿದ್ದೆಗೆ ಜಾರಿದ್ದ ನೋಟಗಳು, ಸಹಸ್ರಾರು ವಾಹನಗಳು ಕಂಡಬಂದವು.
ಕೆಲವರಂತೂ ಗ್ಯಾಸ್ ಸಿಲಿಂಡರ್ ಒಲೆ ಹಚ್ಚಿಕೊಂಡು ತಮ್ಮದೇ ನಳಪಾಕ ಮಾಡಿಕೊಳ್ಳುತ್ತಿದ್ದ ದೃಶ್ಯಗಳು ವಿದ್ಯಾಗಿರಿಯ ಆವರಣದಲ್ಲಿ ಕಂಡು ಬಂದವು.
7 ಕೇಂದ್ರಗಳಲ್ಲಿ ಪರೀಕ್ಷೆ: ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರಿಂದ 7 ಕೇಂದ್ರಗಳಲ್ಲಿ ಪರೀಕ್ಷಾ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು.
ಆಳ್ವಾಸ್ ವಿದ್ಯಾಗಿರಿ ಹಾಗೂ ಪುತ್ತಿಗೆ ಕ್ಯಾಂಪಸ್‌ನ ಯಶೋಕಿರಣ ಬ್ಲಾಕ್, ಆಳ್ವಾಸ್ ಪದವಿ ಪೂರ್ವ ವಿಭಾಗದ ಬಿ ಬ್ಲಾಕ್, ಕಾಮರ್ಸ್ ಬ್ಲಾಕ್, ಆಳ್ವಾಸ್ ಪದವಿ ಕಾಲೇಜು, ನುಡಿಸಿರಿ ವೇದಿಕೆಯ ಸ್ಟಡಿ ಹಾಲ್, ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲೂ ಪ್ರವೇಶ ಪರೀಕ್ಷೆ ನಡೆಸಲಾಗಿದೆ.
ಅಚ್ಚುಕಟ್ಟು ವ್ಯವಸ್ಥೆ: ೩೦,೦೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ್ದರೂ ಬಹಳ ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ಶೌಚಾಲಯದೊಂದಿಗೆ ಉಚಿತ ತಂಗುವ ವ್ಯವಸ್ಥೆ ಕಲ್ಪಿಸಲಾಗಿತ್ತು.ಸರ್ಕಾರವೂ ಸ್ಪಂದಿಸಲಿ: ಡಾ. ಆಳ್ವ
ಈ ಕನ್ನಡ ಮಾಧ್ಯಮ ಮಾದರಿ ಶಾಲೆಗೆ ಕಳೆದ ಏಳು ವರ್ಷಗಳಿಂದ ಶಿಕ್ಷಣ ಇಲಾಖೆ ರಾಜ್ಯದ ನಂ.1 ಶಾಲೆ ಎಂದು ಪ್ರಮಾಣಪತ್ರವನ್ನೇನೋ ನೀಡಿದೆ.
ಆದರೆ ಈ ಮಾದರಿ ಯಶಸ್ವೀ ವ್ಯವಸ್ಥೆಯನ್ನು ಪರಿಶೀಲಿಸಿ ಅಳವಡಿಸಿಕೊಳ್ಳಲು ಮುಂದಾಗಿಲ್ಲ. ಸರ್ಕಾರವೂ ಮಾದರಿ ಶಾಲೆಗಳಲ್ಲಿ ವ್ಯಯಿಸುವ ಅನುದಾನವನ್ನು ನೀಡಿ ಮಕ್ಕಳನ್ನು ಒದಗಿಸುವ ಅವಕಾಶ ಕಲ್ಪಿಸಿದಲ್ಲಿ ಅದೆಷ್ಟೇ ಮಕ್ಕಳು ಬಂದರೂ ಅವರಿಗೂ ಮಾದರಿ ಶಿಕ್ಷಣ ವ್ಯವಸ್ಥೆ ನೀಡಲು ಬದ್ಧ ಎಂದು ಡಾ. ಮೋಹನ್ ಆಳ್ವ ಮಾಧ್ಯಮಗಳಿಗೆ ತಿಳಿಸಿದರು.