ರೀಲ್ಸ್ ಹುಚ್ಚಾಟಕ್ಕೆ ಮೂವರು ಅಮಾಯಕ ಬಾಲಕರು ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿರುವ ದುರ್ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಜ್ಯೂಟ್ ಫ್ಯಾಕ್ಟರಿ ಬಳಿಯ ಬೆಟ್ಟದ ಸೊಣೆಯಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ರೀಲ್ಸ್ ಹುಚ್ಚಾಟಕ್ಕೆ ಮೂವರು ಅಮಾಯಕ ಬಾಲಕರು ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿರುವ ದುರ್ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಜ್ಯೂಟ್ ಫ್ಯಾಕ್ಟರಿ ಬಳಿಯ ಬೆಟ್ಟದ ಸೊಣೆಯಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದೆ. ನಗರದ ನಿವಾಸಿಗಳಾದ ಶಬಾಜ್ ಖಾನ್ (14), ರಿಹಾನ್ ಖಾನ್ (12) ಮತ್ತು ಸೈಯದ್ ಶಾಹಿದ್ (12) ಮೃತ ಬಾಲಕರು. ಶುಕ್ರವಾರ 8 ಮಕ್ಕಳು ಸೊಣೆ ಬಳಿಗೆ ಆಗಮಿಸಿದ್ದರು. ಈ ಸೊಣೆ ಸುಮಾರು 10 ಅಡಿ ಆಳವಿದ್ದು, ಹೂಳು ಕೂಡ ತುಂಬಿಕೊಂಡಿದೆ. ಈ ವೇಳೆ, ಬೆಟ್ಟದ ಮೇಲಿಂದ ಸೊಣೆಗೆ ಜಿಗಿದು ಈಜಾಡುವ ದೃಶ್ಯಗಳ ರೀಲ್ಸ್ ಮಾಡಲು ಬಾಲಕರು ತೀರ್ಮಾನಿಸಿದ್ದು, ಶಬಾಜ್, ರಿಹಾನ್, ಶಾಹಿದ್ ಒಬ್ಬರ ಹಿಂದೆ ಒಬ್ಬರು ಸೊಣೆಗೆ ಜಿಗಿದರು. ಆದರೆ, ಬಹಳ ಹೊತ್ತಾದರೂ ಮೂವರು ಹೊರ ಬರದಿದ್ದಾಗ, ಉಳಿದವರು ಗಾಬರಿಗೊಂಡು, ಸ್ಥಳೀಯರಿಗೆ ಮಾಹಿತಿ ನೀಡಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕರ ಶವಗಳನ್ನು ಹೊರಗೆ ತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ರಾಮನಗರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.ನೀರುಪಾಲಾದ ಮಕ್ಕಳ ಕುಟುಂಬದಲ್ಲಿರುವ ಇತರರ ವಿದ್ಯಾಭ್ಯಾಸಕ್ಕೆ ನೆರವು: ಶ್ರೇಯಸ್‌ಹಾಸನ ಜಿಲ್ಲೆ ಆಲೂರು ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ಗುರುವಾರ ಕೆರೆಯಲ್ಲಿ ಮುಳುಗಿ ಮೃತಪಟ್ಟ ಮಕ್ಕಳ ಮನೆಗೆ ಶುಕ್ರವಾರ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಬಳಿಕ, ಸುದ್ದಿಗಾರರ ಜೊತೆ ಮಾತನಾಡಿ, ನೋವಿನಲ್ಲಿರುವ ಕುಟುಂಬದವರಿಗೆ ಮನೆ ಕಟ್ಟಿಕೊಳ್ಳಲು ಜಾಗವಿಲ್ಲ. ಕಟ್ಟಿರುವ ಮನೆಯೂ ಅವರ ಹೆಸರಿನಲ್ಲಿಲ್ಲ. ಪರಿಹಾರ ಶಾಶ್ವತವಲ್ಲ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸಲು ಶ್ರಮಿಸುತ್ತೇನೆ. ಮನೆಯಲ್ಲಿರುವ ಹೆಣ್ಣು, ಗಂಡು ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಸ್ವಂತ ಖರ್ಚಿನಲ್ಲಿ ಭರಿಸುತ್ತೇನೆ ಎಂದು ಭರವಸೆ ನೀಡಿದರು. ಗುರುವಾರ ಗ್ರಾಮದ ಕೆರೆಗೆ ಈಜಲು ಹೋಗಿದ್ದ ನಾಲ್ವರು ಮಕ್ಕಳು, ಕೆರೆಯ ನೀರಲ್ಲಿ ಮುಳುಗಿ ಮೃತಪಟ್ಟಿದ್ದರು.