ಬಳ್ಳಾರಿ: ಇಲ್ಲಿನ ಬಸವಭವನದಲ್ಲಿ ಹಮ್ಮಿಕೊಂಡಿದ್ದ ವರಗುರು ಚರಂತಪ್ಪಜ್ಜ ಮಹಾಸ್ವಾಮಿಗಳ 22ನೇ ಪುಣ್ಯಸ್ಮರಣೋತ್ಸವದ ಕೊನೆಯ ದಿನವಾದ ಶನಿವಾರ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ "ಗುರು ಚರಂತಾರ್ಯ ಶ್ರೀ ಪ್ರಶಸ್ತಿ ಪ್ರದಾನ " ಮಾಡಲಾಯಿತು.

ಶೈಕ್ಷಣಿಕ ಸೇವೆಯನ್ನು ಗುರುತಿಸಿ ಬಳ್ಳಾರಿಯ ಮಹಾನಂದಿ ಬಸವಲಿಂಗಪ್ಪ, ಹಿರಿಯ ಹಿಂದೂಸ್ತಾನಿ ಗಾಯಕ ದೊಡ್ಡಬಸವ ಗವಾಯಿ ಡಿ.ಕಗ್ಗಲ್, ಕೂಡ್ಲಿಗಿಯ ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್, ವೀರಗಾಸೆ ಕಲಾವಿದ ಸಂಡೂರು ತಾಲೂಕು ತಾರಾನಗರದ ಚಂದ್ರಯ್ಯಸ್ವಾಮಿ ಹಾಗೂ ವೈದ್ಯಕೀಯ ಸೇವೆಯ ಡಾ.ನಾಗರಾಜ ಕೊಂಡ್ಲಹಳ್ಳಿ ಅವರ ನಿಧನ ಹಿನ್ನೆಲೆಯಲ್ಲಿ ಅವರ ಪುತ್ರ ಡಾ.ವಿಜಯ ನಾಗರಾಜ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಪ್ರಾಸ್ತಾವಿಕ ಮಾತನಾಡಿದ ಲೇಖಕ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಅವರು ಪ್ರಶಸ್ತಿಗೆ ಆಯ್ಕೆಗೊಂಡ ಮಹನೀಯರ ಸೇವೆ ಹಾಗೂ ಸಾಧನೆ ಕುರಿತು ವಿವರಿಸಿದರು.

ನಂದಿಪುರ ಪುಣ್ಯಕ್ಷೇತ್ರದ ಡಾ.ಮಹೇಶ್ವರಸ್ವಾಮಿ, ಉತ್ತಂಗಿಯ ಸೋಮಶಂಕರ ಸ್ವಾಮಿ, ಮರಿಯಮ್ಮನಹಳ್ಳಿ ಗುರುಪಾದದೇವರ ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ವೇಳೆ ಶ್ರೀಚರಂತಪ್ಪಜ್ಜನವರ ಉಪದೇಶಗಳ ಸಾರ ಸಂಗ್ರಹ "ದಿವ್ಯಪ್ರಕಾಶ " ಕೃತಿ ಲೋಕಾರ್ಪನೆಗೊಂಡಿತು. ಡಿ.ನಾಗೇಹಳ್ಳಿ ಮಠದ ಶ್ರೀ ನಂಜುಂಡಯ್ಯತಾತ, ಹಗರಿಬೊಮ್ಮಹಳ್ಳಿಯ ಹಾಲಸ್ವಾಮಿ ಶ್ರೀ, ಜಂಗಮಹೊಸಹಳ್ಳಿ ಮಠದ ಅಜಾತ ಶಂಭುಲಿಂಗ ಶಿವಾಚಾರ್ಯರು ಕೃತಿ ಲೋಕಾರ್ಪಣೆಗೊಳಿಸಿದರು.ಹಿರಿಯ ವಕೀಲ ಬಿ.ವಿ.ಬಸವರಾಜ್, ರೈಲ್ವೆ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಕೆ.ಎಂ.ಮಹೇಶ್ವರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿ ಚೋರನೂರು ಕೊಟ್ರಪ್ಪ, ವಾಲ್ಮೀಕಿ ಸಮಾಜದ ರಾಜ್ಯ ಮುಖಂಡ ಜೋಳದರಾಶಿ ತಿಮ್ಮಪ್ಪ, ಹಿರಿಯ ಲೇಖಕ ಎಸ್‌.ವಿ.ಪಾಟೀಲ್ ಗುಂಡೂರು, ಚಲನಚಿತ್ರ ನಿರ್ದೇಶಕ ಆದಿತ್ಯ ಚಿಕ್ಕಣ್ಣ ಉಪಸ್ಥಿತರಿದ್ದರು.

ಬೆಟ್ಟದೂರಿನ ಪ್ರಭುಲಿಂಗೇಶ್ವರ ಮಠದ ಮಹಾದೇವಯ್ಯಸ್ವಾಮಿ ಅವರು ಚರಂತಪ್ಪಜ್ಜನವರ ಲೀಲೆಗಳ ಕುರಿತು ಉಪನ್ಯಾಸ ನೀಡಿದರು. ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಭಕ್ತಗೀತೆಗಳನ್ನು ಪ್ರಸ್ತುತಪಡಿಸಿದರು. ಯೋಗೀಶ್ ಸಂಗನಕಲ್ಲು ತಬಲಾ ಸಾಥ್ ನೀಡಿದರು. ವೀರಶೈವ ಸಮಾಜದ ಹಿರಿಯ ಮುಖಂಡರಾದ ಮಸೀದಿಪುರ ಸಿದ್ಧರಾಮನಗೌಡ, ಪಲ್ಲೇದ ಪಂಪಾಪತೆಪ್ಪ, ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ, ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ ಮತ್ತಿತರರಿದ್ದರು.


ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ ಹಾಗೂ ಬಲಗುಡ್ಡ ಹೊನ್ನನಗೌಡ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಚರಂತಪ್ಪಜ್ಜನವರ ಮೂರು ದಿನಗಳ ಸ್ಮರಣೋತ್ಸವ ಕಾರ್ಯಕ್ರಮ ಅಂಗವಾಗಿ ಉಚಿತ ಆರೋಗ್ಯ, ಕಣ್ಣು, ಹೃದಯ ಎಲುಬು, ಕೀಲುಗಳ ತಪಾಸಣೆ, ರಕ್ತದಾನ ಶಿಬಿರಗಳ ಜರುಗಿದವು.