ಔಷಧ ತಯಾರಿಕಾ ಕಂಪನಿ, ‘ಸಿಲ್ ಲ್ಯಾಬೋರೇಟರೀಸ್ ಪ್ರೈ. ಲಿ.’ನಲ್ಲಿ ಬುಧವಾರ ನಸುಕಿನ ಜಾವ 5.30ರ ಸುಮಾರಿಗೆ ವಿಷಕಾರಿ ಅನಿಲ, ಸಲ್ಫರ್ ಡೈಆಕ್ಸೈಡ್ ಸೋರಿಕೆಯಾಗಿದ್ದು, ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಯಾದಗಿರಿ ಸಮೀಪದ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ಔಷಧ ತಯಾರಿಕಾ ಕಂಪನಿ, ‘ಸಿಲ್ ಲ್ಯಾಬೋರೇಟರೀಸ್ ಪ್ರೈ. ಲಿ.’ನಲ್ಲಿ ಬುಧವಾರ ನಸುಕಿನ ಜಾವ 5.30ರ ಸುಮಾರಿಗೆ ವಿಷಕಾರಿ ಅನಿಲ, ಸಲ್ಫರ್ ಡೈಆಕ್ಸೈಡ್ ಸೋರಿಕೆಯಾಗಿದ್ದು, ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಯಾದಗಿರಿ ಸಮೀಪದ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.ಇಬ್ಬರು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮತ್ತೊಬ್ಬ ಕಾರ್ಮಿಕ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರೆಳೆದಿದ್ದಾನೆ. ದುರ್ಘಟನೆಯಲ್ಲಿ ಮತ್ತಿಬ್ಬರು ಅಸ್ವಸ್ಥರಾಗಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ, ಒಬ್ಬನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಮಧ್ಯಪ್ರದೇಶದ ಕಟ್ನಿಯ ಸಂಜಯಸಿಂಗ್ ಗೊಂಡಾ (25), ವಿಕ್ರಂಸಿಂಗ್ ಗೊಂಡಾ (25), ತೆಲಂಗಾಣದ ಕೃಷ್ಣಾ ಮಂಡಳದ ಆಲಂಮಲ್ಲಿ ಗ್ರಾಮದ ಕಟ್ಲಾ ಗಣೇಶ್ (23) ಮೃತರು. ವಿಷಾನಿಲ ಸೇವನೆಯಿಂದ ಅಸ್ವಸ್ಥಗೊಂಡ ಆಂಧ್ರಪ್ರದೇಶದ ಅನಂತಪುರದ ಸಿಂಡಿಕೇಟ್ ನಗರದ ಮಂಚಲಾ ಹೇಮಂತ (23) ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಚೋಳಸಮುದ್ರಂನ ಮಂಚಲಾ ಶಿವಕುಮಾರ (30) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.ಇದೇ ವೇಳೆ, ದುರ್ಘಟನೆ ಖಂಡಿಸಿ, ಕಾರ್ಮಿಕರು, ಸ್ಥಳೀಯರು ಕಾರ್ಖಾನೆ ಎದುರುಗಡೆ ಪ್ರತಿಭಟನೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಮಧ್ಯೆ, ಸಿಎಂ ಸೂಚನೆ ಮೇರೆಗೆ ಸಚಿವ ಡಾ। ಶರಣಪ್ರಕಾಶ ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ ₹20 ಲಕ್ಷ ಪರಿಹಾರ ನೀಡುವುದಾಗಿ ಕಂಪನಿ ಘೋಷಿಸಿದೆ. ಪ್ರಕರಣ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಕಂಪನಿಯ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಾರ್ಖಾನೆಯ ಸ್ಟೇನ್‌ಲೆಸ್ ಸ್ಟೀಲ್ ರಿಯಾಕ್ಟರ್‌ನಲ್ಲಿ ಥಿಯೋನಿಲ್ ಕ್ಲೋರೈಡ್ ರಾಸಾಯನಿಕವನ್ನು ಬಳಸಲಾಗುತ್ತಿತ್ತು. ಈ ಪ್ರಕ್ರಿಯೆಯ ಸಮಯದಲ್ಲಿ ಉಂಟಾಗುವ ಸಲ್ಫರ್ ಡೈಆಕ್ಸೈಡನ್ನು ಪೈಪ್‌ಲೈನ್ ಮೂಲಕ ಸ್ಕ್ರಬ್ಬರ್‌ಗೆ ಸಾಗಿಸಲಾಗುತ್ತಿತ್ತು. ಆದರೆ, ಬುಧವಾರ ಮುಂಜಾನೆ ಪೈಪ್‌ಲೈನ್‌ನಲ್ಲಿ ಇದ್ದಕ್ಕಿದ್ದಂತೆ ಸೋರಿಕೆ ಉಂಟಾಗಿದೆ. ನೈಟ್‌ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ವಿಷಾನಿಲ ಸೇವಿಸಿ, ಮೃತಪಟ್ಟಿದ್ದಾರೆ.‘ಕನ್ನಡಪ್ರಭ’ ಸರಣಿ ವರದಿಗಳು:
ಕಡೇಚೂರು ಕೈಗಾರಿಕಾ ಪ್ರದೇಶದ ಕುರಿತು ‘ಕನ್ನಡಪ್ರಭ’ 150 ದಿನಗಳವರೆಗೆ ನಿರಂತರ ಸುದ್ದಿ ಪ್ರಕಟಿಸಿ, ಜನಜಾಗೃತಿಗೆ ಕಾರಣವಾಗಿತ್ತು. ಇಲ್ಲಿನ ವಾಸ್ತವಾಂಶಗಳನ್ನು ಬೆಳಕಿಗೆ ತಂದು, ವಿಷಕಾರಿ ಅನಿಲ ತಯಾರಿಸುವ ಕಂಪನಿಗಳ ವಿರುದ್ಧ ಜನಾಂದೋಲನಕ್ಕೆ ಕಾರಣವಾಗಿ, ಸರ್ಕಾರ ಕೆಲವು ಕಂಪನಿಗಳಿಗೆ ಬೀಗ ಜಡಿದಿತ್ತು. ಉಸಿರುಗಟ್ಟುವ ವಾತಾವರಣದಿಂದ ನಲುಗಿದ್ದ ಈ ಭಾಗದ ಜನರು ಕೊಂಚ ನಿರುಮ್ಮಳರಾಗಿದ್ದರು.