ತೇರದಾಳ ಪುರಸಭೆ ವ್ಯಾಪ್ತಿಯಲ್ಲಿನ ಮನೆಯ ಇ-ಆಸ್ತಿ ಉತಾರ ಮಾಡಿಕೊಡಲು ₹10 ಸಾವಿರ ಲಂಚದ ಹಣ ಪಡೆಯುತ್ತಿದ್ದ ಪುರಸಭೆ ಮುಖ್ಯಾಧಿಕಾರಿ ಸೇರಿ ಮೂವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಲೆಗೆ ಬೀಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತೇರದಾಳ ಪುರಸಭೆ ವ್ಯಾಪ್ತಿಯಲ್ಲಿನ ಮನೆಯ ಇ-ಆಸ್ತಿ ಉತಾರ ಮಾಡಿಕೊಡಲು ₹10 ಸಾವಿರ ಲಂಚದ ಹಣ ಪಡೆಯುತ್ತಿದ್ದ ಪುರಸಭೆ ಮುಖ್ಯಾಧಿಕಾರಿ ಸೇರಿ ಮೂವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಲೆಗೆ ಬೀಳಿಸಿದ್ದಾರೆ.ತೇರದಾಳ ನಿವಾಸಿ ರಾಜೇಸಾಬ ಮಹಮ್ಮದಹುಸೇನ್ ನಾಗರ್ಜುನ ಅವರು ನ.3ರಂದು ಬಾಗಲಕೋಟೆ ಲೋಕಾಯುಕ್ತ ಠಾಣೆಗೆ ಹಾಜರಾಗಿ ಈ ಕುರಿತು ಫಿರ್ಯಾದು ನೀಡಿದ್ದರು. ಫಿರ್ಯಾದಿದಾರರ ಸಂಬಂಧಿ ಹಸೀನಾ ಗಂಡ ಅಬ್ದುಲ್ ಕೊರಬು ಅವರ ಹೆಸರಿನಲ್ಲಿರುವ ತೇರದಾಳ ಪುರಸಭೆ ವ್ಯಾಪ್ತಿಯ ಮನೆ ಆಸ್ತಿ ನಂ.574/25, ಪ್ಲಾಟ್ ನಂ.13ರ ಇ-ಆಸ್ತಿ ಉತಾರ ಮಾಡಿಕೊಡಲು ಆರೋಪಿಗಳು ₹10 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.
ಈ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ನ.4ರಂದು ಲಂಚದ ಹಣ ಸ್ವೀಕರಿಸುವ ಸಂದರ್ಭದಲ್ಲಿ ತೇರದಾಳ ಪುರಸಭೆಯ ಮುಖ್ಯಾಧಿಕಾರಿ ಇರ್ಫಾನ್ ಬಾಬುಸಾಬ ಝಾರೆ, ಹೊರಗುತ್ತಿಗೆ ನೌಕರರಾದ ಇಬ್ರಾಹಿಂ ಮಹಾಲಿಂಗಪೂರ ಹಾಗೂ ಶಿವಾನಂದ ಕಾಂಬಳೆ ಅವರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.ಬಾಗಲಕೋಟೆಯ ಲೋಕಾಯುಕ್ತ ಡಿಎಸ್ಪಿ ಸುರೇಶರೆಡ್ಡಿ ಎಂ.ಎಸ್. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಪೊಲೀಸ್ ಇನಸ್ಪೆಕ್ಟರ್ಳಾದ ಮಲ್ಲಿಕಾರ್ಜುನ ಬಿ. ಬಿರಾದಾರ ಹಾಗೂ ಎನ್.ಆರ್. ಖಿಲಾರೆ ಸೇರಿ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.