ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯ ಕಮತಗಿ ಕ್ರಾಸ್ ಪೆಟ್ರೋಲ್ ಬಂಕ್‌ ಬಳಿ ಕಬ್ಬು ಕಟಾವು ಕಾರ್ಮಿಕರನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಪಲ್ಟಿಯಾಗಿ ಮಕ್ಕಳಿಬ್ಬರು ಹಾಗೂ ಮಹಿಳೆ ಸಾವಿಗೀಡಾಗಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಕಮತಗಿ

ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯ ಕಮತಗಿ ಕ್ರಾಸ್ ಪೆಟ್ರೋಲ್ ಬಂಕ್‌ ಬಳಿ ಕಬ್ಬು ಕಟಾವು ಕಾರ್ಮಿಕರನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಪಲ್ಟಿಯಾಗಿ ಮಕ್ಕಳಿಬ್ಬರು ಹಾಗೂ ಮಹಿಳೆ ಸಾವಿಗೀಡಾಗಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ.ವಿಜಯನರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಆನೆಕಲ್ ತಾಂಡಾದ ರುಕ್ಮಿಣಿಬಾಯಿ ನಾಯಕ (36), ಶಿವಾನಿ ನಾಯಕ (6), ರೋಷನ್ ನಾಯಕ (4) ಮೃತರು. ಗಾಯಗೊಂಡವರನ್ನು ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ತಿಂಗಳಿನಿಂದ ಜಮಖಂಡಿ ಸುತ್ತಮುತ್ತಲಿನ ಜಮೀನುಗಳಲ್ಲಿ ಕಬ್ಬು ಕಟಾವು ಮಾಡಲು ಬಂದಿದ್ದರು. ಜಾತ್ರೆಯಲ್ಲಿ ಭಾಗಿಯಾಗಲು ಟ್ರ್ಯಾಕ್ಟರ್ ನಲ್ಲಿ ಶನಿವಾರ 8 ಕಾರ್ಮಿಕರು ಸರಂಜಾಮುಗಳೊಂದಿಗೆ ಊರಿಗೆ ಹೊರಟಿದ್ದಾಗ ಕಮತಗಿ ಕ್ರಾಸ್‌ ಬಳಿ ಟ್ರ್ಯಾಕ್ಟರ್‌ ಮುಂದಿನ ಬಂಪರ್‌ ಕಟ್ಟಾಗಿ ಟ್ರೇಲರ್‌ಗೆ ಅಡ್ಡಲಾಗಿದ್ದರಿಂದ ಟ್ರೇಲರ್‌ನಲ್ಲಿ ಕಳಿತಿದ್ದವರು ನೆಲಕ್ಕುರುಳಿದ್ದು, ಮೂವರು ಸಾವಿಗೀಡಾಗಿದ್ದು, ಇಬ್ಬರಿಗೆ ಗಂಭೀರ ಗಾಯಗೊಂಡಿದ್ದಾರೆ. ಎಂಜಿನ್‌ನಲ್ಲಿ ಟ್ರ್ಯಾಕ್ಟರ್‌ ಚಾಲಕ ಹಾಗೂ ಮೂವರು ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಹುನಗುಂದ ಡಿವೈಎಸ್ಪಿ ಸಂತೋಷ ಬನಹಟ್ಟಿ, ಸಿಪಿಐ ಶರಣಗೌಡ ಅಂಜೂರ, ಅಮೀನಗಡ ಪೊಲೀಸ್ ಠಾಣೆ ಪಿಎಸ್‌ಐ ಜ್ಯೋತಿ ವಾಲಿಕಾರ ಭೇಟಿ ನೀಡಿದರು. ಅಮೀನಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.