ಟಿಪ್ಪರ್‌ ಹರಿದು ಬೈಕ್‌ನಲ್ಲಿದ್ದ ಮೂವರ ಬಲಿ!

| Published : Sep 18 2024, 01:45 AM IST

ಸಾರಾಂಶ

ಕುಡಿದ ಮತ್ತಿನಲ್ಲಿ ಚಾಲಕ ಅತೀ ವೇಗವಾಗಿ ಟಿಪ್ಪರ್‌ ಓಡಿಸಿಕೊಂಡು ಬಂದು ಬೈಕ್‌ ಮೇಲೆ ಟಿಪ್ಪರ್‌ ಹರಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ಪಟ್ಟಣದ ಕೇರಳ ರಸ್ತೆಯ ಸಿದ್ದಗಂಗ ಪೆಟ್ರೋಲ್‌ ಬಂಕ್‌ ಬಳಿ ಮಂಗಳವಾರ ಸಂಜೆ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕುಡಿದ ಮತ್ತಿನಲ್ಲಿ ಚಾಲಕ ಅತೀ ವೇಗವಾಗಿ ಟಿಪ್ಪರ್‌ ಓಡಿಸಿಕೊಂಡು ಬಂದು ಬೈಕ್‌ ಮೇಲೆ ಟಿಪ್ಪರ್‌ ಹರಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ಪಟ್ಟಣದ ಕೇರಳ ರಸ್ತೆಯ ಸಿದ್ದಗಂಗ ಪೆಟ್ರೋಲ್‌ ಬಂಕ್‌ ಬಳಿ ಮಂಗಳವಾರ ಸಂಜೆ ನಡೆದಿದೆ.

ಕೇರಳ ರಸ್ತೆ ಕಡೆಯಿಂದ ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದ ಕೆಎ೧೧ ಬಿ ೮೪೯೭ ನಂಬರಿನ ಟಿಪ್ಪರ್‌, ಮುಂದೆ ಹೋಗುತ್ತಿದ್ದ ಕೇರಳದ ಕೆಎಲ್‌೦೩ ಇ ೧೯೭ ನಂಬರಿನ ಸ್ಪೆಲ್ಡಂಡರ್‌ಗೆ ಡಿಕ್ಕಿ ಹೊಡೆದು ಸುಮಾರು ೨೦೦ಮೀಟರ್‌ನಷ್ಟು ದೂರ ಬೈಕ್‌ ದೂಡಿಕೊಂಡು ಟಿಪ್ಪರ್‌ ಬಂದಿದೆ. ಗ್ರ್ಯಾವಲ್‌ ತುಂಬಿದ ಟಿಪ್ಪರ್‌ ಹರಿದ ಕಾರಣ ಮೂವರ ದೇಹ ಚೆಲ್ಲಾ ಪಿಲ್ಲಿಯಾಗಿ ಅಲ್ಲಲ್ಲಿ ಬಿದ್ದಿದೆ. ಈ ದೃಶ್ಯ ನೋಡಲು ಆಗದಂತ ಸ್ಥಿತಿಯಲ್ಲಿಯಿದ್ದು ಮೂರು ದೇಹಗಳನ್ನು ನೋಡಲು ಮನ ಕಲುಕುವಂತಿತ್ತು.

ಪತಿ, ಪತ್ನಿ, ಮಗ ಸಾವು:

ಬೈಕ್‌ ನಲ್ಲಿ ತೆರಳುತ್ತಿದ್ದ ಕೇರಳದ ಮೂಲದ ವಯನಾಡ್‌ ಜಿಲ್ಲೆಯ ಧನೇಶ್‌ ಪಿ.ಎಂ, ಅಂಜು ಟಿ.ಎಸ್‌, ಮತ್ತು ವಿಚ್ಚು ಎಂದು ಪೊಲೀಸರು ಗುರುತಿಸಿದ್ದಾರೆ. ದುರಂತ ಎಂದರೆ ಧನೀಶ್‌ ಅಂಜು ಪತಿ, ಪತ್ನಿ, ವಿಚ್ಚು ಮಗ ಎಂದು ತಿಳಿದು ಬಂದಿದೆ. ಟಿಪ್ಪರ್‌ ಹರಿದು ಬೈಕ್‌ ನಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ಬಳಿಕ ಕೇರಳ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ್ಯಗೊಂಡಿತ್ತು. ಬಳಿಕ ಪೊಲೀಸರು ಆಗಮಿಸಿ ಜೆಸಿಬಿ ಟಿಪ್ಪರ್‌ನಡಿಗೆ ಸಿಲುಕಿದ್ದ ಶವವನ್ನು ಹಾಗೂ ತುಂಡು ತುಂಡಾಗಿ ಬಿದ್ದಿದ್ದ ದೇಹಗಳನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ.

ಗುಂಡ್ಲುಪೇಟೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್.ಪರಶಿವಮೂರ್ತಿ, ಸಬ್‌ ಇನ್ಸ್‌ಪೆಕ್ಟರ್‌ ಸಾಹೇಬ ಗೌಡ ಆರ್‌.ಬಿ ಹಾಗೂ ಪೊಲೀಸ್‌ ಸಿಬ್ಬಂದಿ ಮೂರು ಛಿದ್ರ ದೇಹಗಳ ಸಾಗಿಸಲು ಹೆಣಗಾಡಿದರು.ಗುಂಡಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಆಪತ್ತು!ಪಟ್ಟಣದ ಕೇರಳ ರಸ್ತೆಯಲ್ಲಿ ಟಿಪ್ಪರ್‌ ಬೈಕ್‌ ಮೇಲೆ ಹರಿದು ಮೂವರ ಸಾವಿಗೆ ಚಾಲಕ ಕಂಠ ಪೂರ್ತಿ ಕುಡಿದಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ತಾಲೂಕಿನ ಶಿವಪುರ ಬಳಿ ಖಾಸಗಿ ಡೇರಿಗೆ ಗ್ರ್ಯಾವೆಲ್‌ ಮಣ್ಣು ಸಾಗಿಸುತ್ತಿದ್ದ ಕೆಎ ೧೧ ಬಿ ೮೪೯೭ ನಂಬರಿನ ಟಿಪ್ಪರ್‌ ಚಾಲಕ ಕಂಠ ಪೂರ್ತಿ ಕುಡಿದಿದ್ದ. ಟಿಪ್ಪರ್‌ ಅಪಘಾತವಾದ ಬಳಿಕವೂ ಆತ ಟಿಪ್ಪರ್‌ನಿಂದ ಕೆಳಗಿಳಿದಾಗ ನಿಲ್ಲಲು ಆಗುತ್ತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬಿಸಿಲಿನ ನಡುವೆ ಚಾಲಕ ಕಂಠಪೂರ್ತಿ ಕುಡಿದು ಟಿಪ್ಪರ್‌ ಓಡಿಸುತ್ತಿದ್ದ ಬಿಸಿಲು ತಾಪಕ್ಕೆ ಕಣ್ಣು ಕಾಣದಂತಾಗಿ ಬೈಕ್‌ ಮೇಲೆ ಟಿಪ್ಪರ್‌ ಹರಿಸಿದ್ದಾನೆ ಎಂದು ಹೆಸರೇಳಲಿಚ್ಚಿಸದ ಟೆಂಪೋ ಚಾಲಕ ಹೇಳಿದ್ದಾರೆ.ಪೊಲೀಸರು ಮುಲಾಜು ಬಿಟ್ಟು ಕಳುಹಿಸ್ತಾವ್ರೆ?

ಪಟ್ಟಣದಲ್ಲಿ ಬೈಕ್‌ ಸವಾರರಂತೂ ಹಗಲು ರಾತ್ರಿ ಎನ್ನದೆ ಕುಡಿದುಕೊಂಡು ಬೈಕ್‌ ಓಡಿಸುತ್ತಿದ್ದರೂ ರಾಜಕಾರಣಿಗಳ ಮುಲಾಜಿಗೆ ಒಳಗಾಗಿ ಕೇಸು ಹಾಕುತ್ತಿಲ್ಲ. ತಪಾಸಣೆ ನಡೆಸುವಾಗ ಕೆಲ ಬೈಕ್‌ ಸವಾರರು ಅವಾಜ್‌ ಹಾಕಿ ಬಿಡ್ರೀ ಸಾಕು, ನಮ್ಮ ಹಿಡಿತೀರಾ, ಓವರ್‌ ಲೋಡ್‌ ಕಲ್ಲು ತುಂಬಿಕೊಂಡು ಹೋಗುವ ಟಿಪ್ಪರ್‌ ಹಿಡಿಯಿರಿ ಎಂದು ಪ್ರಶ್ನಿಸಿದಾಗ ಪೊಲೀಸರು ಮರು ಮಾತನಾಡದೆ ಬಿಟ್ಟು ಕಳುಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಕುಹಕವಾಡುತ್ತಿದ್ದಾರೆ.

ಸಾರ್ವಜನಿಕರ ಪ್ರಾಣದ ಹಿತದೃಷ್ಟಿಯಿಂದಾದರೂ ಪೊಲೀಸರು ಡ್ರಿಂಕ್‌ ಆ್ಯಂಡ್‌ ಡ್ರೈವ್‌, ದಾಖಲಾತಿ ಇಲ್ಲದ ವಾಹನಗಳು, ವಿಮೆ, ಹೆಲ್ಮೆಟ್‌, ಸಮವಸ್ತ್ರ, ಫಿಟ್ನೆಸ್‌ ಇಲ್ಲದ ವಾಹನ ಹಾಗೂ ಟ್ರೈವಿಂಗ್‌ ಲೈಸನ್ಸ್‌ ಇಲ್ಲದೆ ವಾಹನ ಓಡಿಸುವ ಚಾಲಕರು ಹಾಗೂ ಸವಾರರ ಮೇಲೆ ಕೇಸ್ ಹಾಕುವ ಮೂಲಕ ಜನರ ಪ್ರಾಣ ಉಳಿಸಲಿ ಎಂಬುದು ಕನ್ನಡಪ್ರಭದ ಕಳಕಳಿ.