ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿಗೆ ಮೂವರು, ಪುಸ್ತಕ ಪುರಸ್ಕಾರಕ್ಕೆ ಇಬ್ಬರ ಆಯ್ಕೆ

| Published : Mar 14 2025, 12:31 AM IST

ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿಗೆ ಮೂವರು, ಪುಸ್ತಕ ಪುರಸ್ಕಾರಕ್ಕೆ ಇಬ್ಬರ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಮಾಡುವ 2024ನೇ ಸಾಲಿನ ಗೌರವ ಪ್ರಶಸ್ತಿಗೆ ಮೂವರು ಸಾಧಕರು ಹಾಗೂ ಪುಸ್ತಕ ಪುರಸ್ಕಾರಕ್ಕೆ ಇಬ್ಬರು ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ. ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಎಂ. ಪ್ಯಾಟ್ರಿಕ್ ಮೊರಾಸ್ ಮಂಗಳೂರು, ಕೊಂಕಣಿ ಕಲೆ ಕ್ಷೇತ್ರದಲ್ಲಿ ಜೊಯಲ್ ಪಿರೇರಾ ಮಂಗಳೂರು, ಕೊಂಕಣಿ ಜಾನಪದ ಕ್ಷೇತ್ರದಲ್ಲಿ ಸೊಬೀನಾ ಮೊತೇಶ್ ಕಾಂಬ್ರೆಕರ್ ಹಳಿಯಾಳ ಅವರನ್ನು ಆಯ್ಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಮಾಡುವ 2024ನೇ ಸಾಲಿನ ಗೌರವ ಪ್ರಶಸ್ತಿಗೆ ಮೂವರು ಸಾಧಕರು ಹಾಗೂ ಪುಸ್ತಕ ಪುರಸ್ಕಾರಕ್ಕೆ ಇಬ್ಬರು ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌, ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಎಂ. ಪ್ಯಾಟ್ರಿಕ್ ಮೊರಾಸ್ ಮಂಗಳೂರು, ಕೊಂಕಣಿ ಕಲೆ ಕ್ಷೇತ್ರದಲ್ಲಿ ಜೊಯಲ್ ಪಿರೇರಾ ಮಂಗಳೂರು, ಕೊಂಕಣಿ ಜಾನಪದ ಕ್ಷೇತ್ರದಲ್ಲಿ ಸೊಬೀನಾ ಮೊತೇಶ್ ಕಾಂಬ್ರೆಕರ್ ಹಳಿಯಾಳ ಅವರನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ 2024ನೇ ಸಾಲಿನ ಪುಸ್ತಕ ಪುರಸ್ಕಾರಕ್ಕೆ ಕೊಂಕಣಿ- ಕವನ ವಿಭಾಗದಲ್ಲಿ “ಪಾಲ್ವಾ ಪೊಂತ್” ಕೃತಿಗೆ ಫೆಲ್ಸಿ ಲೋಬೊ ದೇರೆಬೈಲ್, ಕೊಂಕಣಿ ಲೇಖನ ವಿಭಾಗದಲ್ಲಿ ‘‘ಶೆತಾಂ ಭಾಟಾಂ ತೊಟಾಂನಿ’’ ಕೃತಿಗೆ ವಲೇರಿಯನ್‌ ಸಿಕ್ವೇರಾ ಕಾರ್ಕಳ ಅವರನ್ನು ಆಯ್ಕೆಗೊಳಿಸಲಾಗಿದೆ ಎಂದು ತಿಳಿಸಿದರು.

ಗೌರವ ಪ್ರಶಸ್ತಿಯು 50 ಸಾವಿರ ರು. ನಗದು, ಪ್ರಮಾಣ ಪತ್ರ ಒಳಗೊಂಡಿದ್ದರೆ, ಪುಸ್ತಕ ಪುರಸ್ಕಾರವು 25 ಸಾವಿರ ರು. ನಗದು, ಪ್ರಮಾಣ ಪತ್ರವನ್ನು ಒಳಗೊಂಡಿದೆ ಎಂದರು.

23ರಂದು ಪ್ರಶಸ್ತಿ ಪ್ರದಾನ:

ಪ್ರಶಸ್ತಿ ಪ್ರದಾನ ಸಮಾರಂಭವು ಮೈಸೂರಿನ ಕೊಂಕ್ಣಿ ಕ್ರಿಶ್ಚಿಯನ್ ಎಸೋಸಿಯೇಶನ್ ಸಹಯೋಗದಲ್ಲಿ ಮಾ.23ರಂದು ಸಂಜೆ 5 ಗಂಟೆಗೆ ಮೈಸೂರಿನ ವಿಜಯನಗರ 2ನೇ ಸ್ಟೇಜ್‌ನಲ್ಲಿರುವ ಕೊಂಕಣ್ ಭವನ್‌ನಲ್ಲಿ ನಡೆಯಲಿದೆ. ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಲೇರಿಯನ್ ಡಿಸೋಜ (ವಲ್ಲಿ ವಗ್ಗ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ. ಎನ್ ಮಲ್ಲಿಕಾರ್ಜುನ ಸ್ವಾಮಿ- ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿದ್ದಿ ಸಮುದಾಯದ ಸಾಂಸ್ಕೃತಿಕ ನೃತ್ಯ, ಬ್ರಾಸ್ ಬ್ಯಾಂಡ್, ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಮೈಸೂರಿನ ಕೊಂಕಣಿ ಜಿ.ಎಸ್.ಬಿ. ಸಭಾ ಮತ್ತು ಮುರುಡೇಶ್ವರ ನವಾಯತ್ ಎಸೋಸಿಯೇಶನ್ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದಾರೆ ಎಂದು ಸ್ಟ್ಯಾನಿ ಆಲ್ವಾರಿಸ್‌ ಹೇಳಿದರು.

ಅಕಾಡೆಮಿ ಸದಸ್ಯರಾದ ನವೀನ್‌ ಕೆನ್ಯುಟ್‌ ಲೋಬೊ, ರೊನಾಲ್ಡ್‌ ಕ್ರಾಸ್ತಾ, ಫೋರ್‌ ವಿಂಡ್ಸ್‌ನ ಎಲಿಯಾಸ್‌ ಫರ್ನಾಂಡಿಸ್‌ ಇದ್ದರು................

1 ಕೋಟಿ ರು. ಅನುದಾನಕ್ಕೆ ಮನವಿ

ಕೊಂಕಣಿ ಸಾಹಿತ್ಯ ಅಕಾಡೆಮಿಗೆ ರಾಜ್ಯ ಸರ್ಕಾರ ಕಳೆದ ವರ್ಷ 58 ಲಕ್ಷ ರು. ಅನುದಾನ ನೀಡಿದ್ದರೆ, ಈ ವರ್ಷದ ಅನುದಾನ ಬಂದಿಲ್ಲ. ಒಂದು ಕೋಟಿ ರು. ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇಷ್ಟು ಅನುದಾನ ಬಂದರೆ ಇನ್ನಷ್ಟು ಕೆಲಸಗಳನ್ನು ಮಾಡಲು ಸಾಧ್ಯವಾಗಲಿದೆ ಎಂದು ಸ್ಟ್ಯಾನಿ ಆಲ್ವಾರಿಸ್‌ ಹೇಳಿದರು.