ಸಾರಾಂಶ
ಘಟನೆಯ ಮಾಹಿತಿ ತಿಳಿದ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮಹಜರು ನಡೆಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಸುರತ್ಕಲ್‌ನ ಕುಳಾಯಿ ಜೆಟ್ಟಿ ಬಳಿಯ ಸಮುದ್ರ ತೀರದಲ್ಲಿ ಈಜಲು ಸಮುದ್ರಕ್ಕೆ ಇಳಿದಿದ್ದ ನಾಲ್ಕು ಮಂದಿ ಯುವಕರ ಪೈಕಿ ಮೂವರು ನೀರುಪಾಲಾಗಿದ್ದು, ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಬುಧವಾರ ಸಂಭವಿಸಿದೆ. ಮೃತರಾದವರನ್ನು ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿ ನಿವಾಸಿ ಮಂಜುನಾಥ್ ಎಸ್. (೩೧), ಶಿವಮೊಗ್ಗ ಜಿಲ್ಲೆಯ ಶಿವಕುಮಾರ್ (೩೦), ಬೆಂಗಳೂರು ಜೆ.ಪಿ. ನಗರ ನಿವಾಸಿ ಸತ್ಯವೇಲು (೩೦) ಎಂದು ತಿಳಿದು ಬಂದಿದೆ. ಬೀದರ್ ಜಿಲ್ಲೆಯ ಹಂಗಾರಗಾ ನಿವಾಸಿ ಪರಮೇಶ್ವರ್ (೩೦) ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಶಿವಕುಮಾರ್, ಸತ್ಯವೇಲು ಮತ್ತು ಮಂಜುನಾಥ್ ಅವರ ಮೃತದೇಹ ಜೆಟ್ಟಿಯ ಬಲಭಾಗದ ಮೂಲೆಯಲ್ಲಿ ಪತ್ತೆಯಾಗಿದೆ. ಮೃತದೇಹಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ನಾಲ್ವರು ಬೆಂಗಳೂರಿನ ಎಎಂಸಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಎಲ್ಲರೂ ಸ್ನೇಹಿತರಾಗಿದ್ದರು.ಇವರು ಮಂಗಳವಾರ ರಾತ್ರಿ ಕಾರಿನಲ್ಲಿ ಬೆಂಗಳೂರಿನಿಂದ ಹೊರಟು ಬುಧವಾರ ಬೆಳಗ್ಗೆ ಮಂಗಳೂರಿಗೆ ತಲುಪಿದ್ದರು. ಮಂಗಳೂರಿನ ಹೊಟೇಲೊಂದರಲ್ಲಿ ಬೆಳಗ್ಗಿನ ಉಪಹಾರ ಸೇವಿಸಿ ಬಳಿಕ ಮಧ್ಯಾಹ್ನದ ವೇಳೆಗೆ ಕುಳಾಯಿಜೆಟ್ಟಿ ಬಳಿಗೆ ಬಂದಿದ್ದಾರೆ. ಅಲ್ಲಿ ಎಲ್ಲರೂ ಸಮುದ್ರಕ್ಕೆ ಇಳಿದು ಆಡುತ್ತಿದ್ದ ಸಂದರ್ಭ ನಾಲ್ವರು ನೀರು ಪಾಲಾಗಿದ್ದಾರೆ. ಘಟನೆಯನ್ನು ನೋಡಿದ ಸ್ಥಳೀಯ ಮೀನುಗಾರರು ನಾಲ್ವರ ರಕ್ಷಣೆಗೆ ಮುಂದಾದರೂ ಅಷ್ಟರಲ್ಲೇ ಮೂವರು ನೀರು ಪಾಲಾಗಿದ್ದರು. ಓರ್ವನನ್ನು ರಕ್ಷಿಸಿ ತಕ್ಷಣ ಆತನನ್ನು ನಗರದ ಆಸ್ಪತ್ರೆಗೆ ದಾಖಲಿಸಿದ್ದಾರೆ.ಘಟನೆಯ ಮಾಹಿತಿ ತಿಳಿದ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮಹಜರು ನಡೆಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.