ಕನ್ನಡಪ್ರಭ ವಾರ್ತೆ ಬೆಳಗಾವಿ ರೂಮ್‌ನಲ್ಲಿ ಮಲಗಿದ್ದಲ್ಲಿಯೇ ಉಸಿರುಗಟ್ಟಿ ಮೂವರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಅಮನ್‌ ನಗರದಲ್ಲಿ ಮಂಗಳವಾರ ಸಂಭವಿಸಿದೆ. ರಿಹಾನ್‌ ಮತ್ತೆ (22), ಸರಫರಾಜ ಹರಪನಹಳ್ಳಿ (22), ಮೋಯಿನ್ ನಲಬಂದ (23 ) ಮೃತಪಟ್ಟ ಯುವಕರು. 

 ಬೆಳಗಾವಿ : ರೂಮ್‌ನಲ್ಲಿ ಮಲಗಿದ್ದಲ್ಲಿಯೇ ಉಸಿರುಗಟ್ಟಿ ಮೂವರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಅಮನ್‌ ನಗರದಲ್ಲಿ ಮಂಗಳವಾರ ಸಂಭವಿಸಿದೆ. ರಿಹಾನ್‌ ಮತ್ತೆ (22), ಸರಫರಾಜ ಹರಪನಹಳ್ಳಿ (22), ಮೋಯಿನ್ ನಲಬಂದ (23 ) ಮೃತಪಟ್ಟ ಯುವಕರು. ಮತ್ತೊಬ್ಬ ಶಾನವಾಜ್ (19 ) ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮಾಳಮಾರುತಿ ‌ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ರೂಮ್‌ ಅನ್ನು ಲಾಕ್‌ ಮಾಡಿಕೊಂಡಿದ್ದ ಯುವಕರು

ಸೋಮವಾರ ನಾಲ್ವರು ಯಾವುದೋ ಒಂದು ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ನಗರದಲ್ಲಿ ಚಳಿ ತೀವ್ರವಾಗಿದ್ದರ ಹಿನ್ನೆಲೆಯಲ್ಲಿ ರೂಮ್‌ ಅನ್ನು ಲಾಕ್‌ ಮಾಡಿಕೊಂಡಿದ್ದ ಯುವಕರು, ಒಲೆಗೆ ಇದ್ದಿಲನ್ನು ಹಾಕಿ, ಬೆಂಕಿ ಹಾಕಿಕೊಂಡು ಮಲಗಿದ್ದರು. ಇದೆ ವೇಳೆ ಅವರು ಸೊಳ್ಳೆ ನಿರೋಧಕ ಕ್ವಾಯಿಲ್‌ಗಳನ್ನು ಹಾಕಿ, ಯುವಕರು ನಿದ್ರೆಗೆ ಜಾರಿದ್ದಾರೆ. 

ಉಸಿರಾಟದ ಸಮಸ್ಯೆ ಉಂಟಾಗಿ ಪ್ರಾಣ ಬಿಟ್ಟಿದ್ದಾರೆ

ಆಗ ಅದರಿಂದ ಬಂದ ಹೊಗೆ ಕೋಣೆಯನ್ನು ತುಂಬಿಕೊಂಡಿದ್ದು ಉಸಿರಾಟದ ಸಮಸ್ಯೆ ಉಂಟಾಗಿದೆ. ಅಲ್ಲದೇ, ಆಮ್ಲಜನಕದ ಕೊರತೆ ಉಂಟಾಗಿದೆ. ಇದರಿಂದಾಗಿ ಮೂವರು ಯುವಕರು ಒದ್ದಾಡಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಇನ್ನು, ಶಾನವಾಜ್‌ ಎಂಬಾತನ ಸ್ಥಿತಿಯೂ ಗಂಭೀರವಾಗಿದೆ. ಮಾಳಮಾರುತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ನಂತರ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಯುವಕರು ಮಲಗಿದ ಕೋಣೆಗೆ ಕಿಟಕಿಗಳೇ ಇಲ್ಲ. ಬಾಗಿಲನ್ನು ಕೂಡ ಹಾಕಿಕೊಂಡು ಮಲಗಿದ್ದಾರೆ. ಹೀಗಾಗಿ ಹೊಗೆ ದಟ್ಟವಾಗಿ ಆವರಿಸಿ, ಆಮ್ಲಜನಕದ ಕೊರತೆಯಾಗಿದೆ. ಇದರಿಂದ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಎಲ್ಲರೂ ಅಕ್ಕಪಕ್ಕದ ಮನೆಯ ಮಕ್ಕಳೇ. ಮಂಗಳವಾರ ಸಂಜೆಯ ವೇಳೆ ಪಾಲಕರು ಕೋಣೆಯ ಬಾಗಿಲನ್ನು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ