ಅಥಣಿ ಶಿವಯೋಗಿಗಳಲ್ಲಿ ಶಿವಶರಣರ ಗುಣಸ್ವಭಾವ ಅಡಕ

| Published : Jun 30 2025, 12:34 AM IST

ಸಾರಾಂಶ

ಚಿತ್ರದುರ್ಗ ಮುರುಘಾಮಠದಲ್ಲಿ ನಡೆದ ಅಥಣಿ ಮುರುಘೇಂದ್ರ ಶಿವಯೋಗಿಗಳವರ 190 ನೇ ಜಯಂತಿ ಆಚರಣೆಯಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಸವಾದಿ ಶಿವಶರಣರ ಗುಣಸ್ವಭಾವಗಳು ಹಾಗೂ ಅವರ ಘನವ್ಯಕ್ತಿತ್ವವು ಅಥಣಿ ಮುರುಘೇಂದ್ರ ಶಿವಯೋಗಿಗಳವರಲ್ಲಿ ಅಡಕವಾಗಿತ್ತು. ಆ ಶರಣರ ಇಡೀ ಬದುಕನ್ನು ಶಿವಯೋಗಿಗಳವರು ಅನುಸರಿಸಿ ನಡೆದವರಾಗಿದ್ದರು ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಮಹಾಸ್ವಾಮಿಗಳವರು ಹೇಳಿದರು.

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಲೀಲಾವಿಶ್ರಾಂತಿ ತಾಣದ ಆವರಣದಲ್ಲಿ ಏರ್ಪಡಿಸಿದ್ದ ಮುರುಘಾ ಪರಂಪರೆ ಹಾಗೂ ಬಸವತತ್ವದ ಕೊಂಡಿಯಂತೆ ಕೆಲಸ ಮಾಡಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳವರ 190 ನೇ ಜಯಂತಿ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಗುರು, ಜಗದ್ಗುರು ಆಗುವುದು ಬಹುಶಃ ಸುಲಭದ ಕೆಲಸ. ಆದರೆ ಶಿವಯೋಗಿಯಾಗುವುದು ಕಠಿಣದ ಹಾದಿ. ಅದು ತ್ಯಾಗದ ಸ್ಥಾನ. ಅಂತಹ ಸವಾಲನ್ನು ಎದುರಿಸಿ ಆ ಸ್ಥಾನ ಪಡೆದಿದ್ದರು. ವಿಶ್ವಭಾತೃತ್ವ ಸಮಭಾವ, ಶುದ್ಧಹಸ್ತ, ಸಕಲ ಜೀವರಾಶಿಗಳಿಗೆ ಲೇಸನ್ನೆ ಬಯಸುವ ಸಮರ್ಪಣಾ ಭಾವ, ಪ್ರೀತಿ ಕರುಣೆ ದಯೆ, ಅಂತಃಕರಣದಂತಹ ಮಹಾಮೇರು ಗುಣಗಳು ಅವರಲ್ಲಿ ಮಿಳಿತವಾಗಿದ್ದವು ಎಂದರು.

ಪತ್ರೆ-ಪುಷ್ಪಗಳನ್ನು ಕೀಳಬಾರದು. ಅದಕ್ಕೂ ಜೀವವಿದೆ. ಆದ್ದರಿಂದ ಅವು ಬಿದ್ದಾಗ ತಂದು ಶಿವನ ಮುಡಿಗೇರಿಸುವುದು ಅಂದರೆ ಯಾರಿಗೂ ನೋವುಂಟು ಮಾಡಬಾರದೆಂಬ ಮಾನವೀಯ ಗುಣ ಅಥಣಿ ಶ್ರೀಗಳಲ್ಲಿ ಇತ್ತು. ಪಂಕ್ತಿಭೇದ ಮಾಡಬಾರದೆಂಬುದಕ್ಕೆ ಶ್ರೀಮಠದ ಬಾಗಿಲಿಗೆ ಯಾರೋ ಒಬ್ಬರು ಭಕ್ತರು ಬೆಳ್ಳಿ ನಾಣ್ಯ ಬಡಿದು ಹೋಗಿದ್ದರಂತೆ. ಅದನ್ನು ಇನ್ನೊಬ್ಬ ಎಬ್ಬಿಕೊಂಡು ಹೋಗಿದ್ದನ್ನು ಮಠದ ಸಿಬ್ಬಂದಿ ತಿಳಿಸಿದಾಗ, ಇದ್ದವ ಬಡಿದ, ಇಲ್ಲದವನು ಎಬ್ಬಿಕೊಂಡು ಹೋದ. ಅದಕ್ಕೇಕೆ ಪರಿತಾಪ ಎಂದರಂತೆ ಶ್ರೀಗಳು. ಇಂತಹ ನೂರಾರು ಘಟನೆಗಳು ಶಿವಯೋಗಿಗಳವರ ಬದುಕಿನಲ್ಲಿ ನಡೆದದ್ದನ್ನು ಉದಾಹರಿಸಿದರು.

ಜಯಂತಿ ಮಹೋತ್ಸವ ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಮಹಾಸ್ವಾಮಿಗಳವರು ಮಾತನಾಡಿ, ಮುರುಘೇಂದ್ರ ಶಿವಯೋಗಿಗಳವರ ಚಾರಿತ್ರ‍್ಯವನ್ನು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟದ ಕೆಲಸ. ಅಂತಹ ಶಿವಯೋಗ ಸಾಧನೆಯ ಮೂಲಕ ಎತ್ತರಕ್ಕೆ ಹೋಗಿದ್ದರು. ಈ ನಾಡಿನಲ್ಲಿ ಮೂರು ಜನ ಶಿವಯೋಗಿಯ ಸ್ಥಾನ ಪಡೆದವರಾಗಿದ್ದಾರೆ. ಅವರಲ್ಲಿ 12 ನೇ ಶತಮಾನದ ಬಸವಾದಿ ಶರಣ ಪರಂಪರೆಯ ಸಿದ್ಧರಾಮ ಶಿವಯೋಗಿಗಳು, ಎಡೆಯೂರು ಸಿದ್ಧಲಿಂಗ ಶಿವಯೋಗಿಗಳು ಮತ್ತೊಬ್ಬರು 19 ನೇ ಶತಮಾನದ ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳು. ಇವರು ಸಿದ್ಧಪುರುಷರು. ತಮ್ಮ ನಡೆನುಡಿ ಮೂಲಕ ಜಗತ್ಪಸಿದ್ಧರಾದವರು ಎಂದರು. ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ, ಎಸ್ ಜೆಎಂ ಫಾರ್ಮಸಿಯ ಪ್ರಾಚಾರ್ಯರಾದ ನಾಗರಾಜ್, ಶ್ರೀಮಠದ ಗುರುಕುಲದ ಸಾಧಕರು ಸೇರಿದಂತೆ ಭಕ್ತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಿವಯೋಗಿಗಳವರ ವ್ಯಕ್ತಿಕ್ವದ ಬಗೆಗಿನ ಗೀತೆಗಳನ್ನು ಜಮುರಾ ಕಲಾವಿದ ಉಮೇಶ್ ಸಂಗಪ್ಪ ಪತ್ತಾರ್ ಹಾಡಿದರು. ಬೃಹನ್ಮಠದ ಆವರಣದಲ್ಲಿರುವ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೊಟ್ರಮ್ಮ ಗಡ್ಡೆಪ್ಪನವರ್ ಸ್ವಾಗತಿಸಿದರು. ಹಿರಿಯ ಶಿಕ್ಷಕ ಶಿವಮೂರ್ತಯ್ಯ ಕಾರ್ಯಕ್ರಮ ನಿರೂಪಿಸಿದರು. ಮತ್ತೋರ್ವ ಶಿಕ್ಷಕ ಗಿರೀಶಾಚಾರ್ ಶರಣು ಸಮರ್ಪಣೆ ಮಾಡಿದರು.